Published on: September 15, 2023

ಚುಟುಕು ಸಮಾಚಾರ : 11 ಸೆಪ್ಟೆಂಬರ್ 2023

ಚುಟುಕು ಸಮಾಚಾರ : 11 ಸೆಪ್ಟೆಂಬರ್ 2023

  • ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯದ ಗಿಗ್ ಕಾರ್ಮಿಕರಿಗೆ ‘ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕ ವಿಮಾ ಯೋಜನೆ’ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗಿಗ್ ಉದ್ಯೋಗಿಗಳಿಗೆ 2 ಲಕ್ಷ ರೂ. ಜೀವ ವಿಮೆ ಹಾಗೂ 2 ಲಕ್ಷ ರೂ. ಅಪಘಾತ ವಿಮೆ ಸೇರಿದಂತೆ 4 ಲಕ್ಷ ರೂ. ವಿಮೆ ದೊರೆಯಲಿದೆ.
  • ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜು, ದೇವಸ್ಥಾನಗಳ ಆವರಣಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್’ಗೆ ನಿಷೇಧ ಮಾಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು-2016ಗಳು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದನ್ನೂ ಸೂಚಿಸಲಾಗಿದೆ.
  • ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಸರ್ಕಾರ ರೋಗ ಕಣ್ಗಾವಲು ಡ್ಯಾಶ್ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಉದ್ಘಾಟಿಸಿದೆ. ಅಭಿವೃದ್ಧಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭಾರತೀಯ ವಿಜ್ಞಾನ ಸಂಸ್ಥೆಯ AI ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್ ಸಹಭಾಗಿತ್ವದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
  • ಕರ್ನಾಟಕ ರಾಜ್ಯದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರ ಆರೋಗ್ಯ ಸಂರಕ್ಷಣೆಗಾಗಿ ಋತುಸ್ರಾವ ಕಪ್ (ಮೆನ್ಸ್ಟ್ರುಯಲ್ ಕಪ್) ವಿತರಿಸುವ ಮಹತ್ವದ ʻನನ್ನ ಮೈತ್ರಿʼ ಯೋಜನೆಗೆ ಚಾಲನೆ ನೀಡಲಾಯಿತು. ಸ್ಯಾನಿಟರಿ ನ್ಯಾಪ್ಕಿನ್ ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಹಾಗೂ ದೀರ್ಘ ಬಾಳಿಕೆ ಬರುವ ಮೆನ್ ಸ್ಟ್ರುಯಲ್ ಕಪ್ (ಮುಟ್ಟಿನ ಕಪ್) ಗಳನ್ನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ. ಪ್ರಾಯೋಗಿಕವಾಗಿ ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಎರಡು ಜಿಲ್ಲೆಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ.
  • ಭಾರತೀಯ ರೈಲ್ವೆ ತನ್ನ ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಭಾಗವಾಗಿ, ಕೃತಕ ಬುದ್ಧಿಮತ್ತೆ (AI) ಆಧಾರಿತ “ರೈಲ್ವೆ ಚಾಲಕ ಸಹಾಯ ವ್ಯವಸ್ಥೆ” (RDAS) ಅಥವಾ ಬ್ಲಿಂಕ್ ಡಿಟೆಕ್ಟಿಂಗ್ ಎಂಬ ವಿಶಿಷ್ಟ ಸಾಧನ ಅಳವಡಿಸಲು ಮುಂದಾಗಿದೆ. ಈ ಸಾಧನವು ಕರ್ತವ್ಯದಲ್ಲಿರುವ ಲೋಕೋ ಪೈಲಟ್ಗಳ ಮಿಟುಕಿಸುವ ಕಣ್ಣುಗಳನ್ನು ಪರಿಶೀಲಿಸುತ್ತದೆ ಮತ್ತು ಅವರಿಗೆ ಎಚ್ಚರಿಕೆ ನೀಡುತ್ತದೆ.