Published on: September 24, 2023

ಚುಟುಕು ಸಮಾಚಾರ : 23 ಸೆಪ್ಟೆಂಬರ್ 2023

ಚುಟುಕು ಸಮಾಚಾರ : 23 ಸೆಪ್ಟೆಂಬರ್ 2023

  • ಸುಸ್ಥಿರ ಕೃಷಿಯ ಉತ್ತೇಜನ ಮತ್ತು ಸಮರ್ಥ ನೀರಿನ ನಿರ್ವಹಣೆ ಖಾತರಿಪಡಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸೂಕ್ಷ್ಮ ನೀರಾವರಿ ನಿಧಿಯ ಅಡಿಯಲ್ಲಿ ಹಣಕಾಸಿನ ನೆರವು ಪಡೆಯಲು ಈ ಒಪ್ಪಂದ ನಡೆದಿದೆ.
  • ಸುಸ್ಥಿರತೆ ಮತ್ತು ಪರಿಸರ ಕಾಳಜಿ ವಿಚಾರದಲ್ಲಿ ಗಮನಾರ್ಹ ಸಾಧನೆಗೆ ಇಂಟರ್‌ನ್ಯಾಷನಲ್ ಇನ್‌ಸ್ಟ್ಟಿಟ್ಯೂಟ್ ಆ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು (ಐಐಐಟಿ-ಬಿ) ಗ್ರೀನ್ ಯೂನಿವರ್ಸಿಟಿ ಅವಾರ್ಡ್ -2023 ಪಡೆದುಕೊಂಡಿದೆ. ಇತ್ತೀಚಿಗೆ ನ್ಯೂಯಾರ್ಕ್‌ನಲ್ಲಿ ನಡೆದ 7ನೇ ಎನ್‌ವೈಸಿ ಗ್ರೀನ್ ಸ್ಕೂಲ್ ಕಾನ್ಫರೆನ್ಸ್‌ನಲ್ಲಿ ಸಂಸ್ಥೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.
  • ಯುಪಿಎಸ್‌ಸಿ,ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಲುವಾಗಿ ಡಾ. ರಾಜ್‌ ಕುಮಾರ್ ಅಕಾಡೆಮಿಯ ಲರ್ನಿಂಗ್ ಆಪ್ ಮತ್ತು ರಾಜ್ಯ ಎನ್. ಎಸ್. ಎಸ್ ಕೋಶ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯೂ ರಾಜ್ಯದ 65 ವಿಶ್ವವಿದ್ಯಾಲಯ ಹಾಗೂ 4 ನಿರ್ದೇಶನಾಲಯಗಳ ಸುಮಾರು 6.40ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕ/ಸೇವಕಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಲರ್ನಿಂಗ್ ಆಪ್‌ನಿಂದ ಅನುಕೂಲವಾಗಲಿದೆ. ಆನ್‌ಲೈನ್ ಮೂಲಕ ತಮಗೆ ಬೇಕಾದ ಮಾಹಿತಿ ಪಡೆಯುವ ಸಾಧನ ಇದಾಗಿದೆ.
  • ಪಟಾಕಿ ಬಳಕೆ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಬೆಂಬಲ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಬೇರಿಯಂ ಬಳಸಿ ತಯಾರಿಸುವ ಹಸಿರು ಪಟಾಕಿಗಳ ಬಳಕೆಗೆ ಕೋರಿ ಸಲ್ಲಿಸಿದ ಮನವಿಯನ್ನೂ ದೇಶದ ಅತ್ಯುನ್ನತ ಕೋರ್ಟ್ ತಿರಸ್ಕರಿಸಿದೆ.
  • 108 ಅಡಿ ಎತ್ತರದ ಶಂಕರಾಚಾರ್ಯರ ಭವ್ಯ ಪ್ರತಿಮೆಯನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ನರ್ಮದಾ ನದಿಯ ದಡದಲ್ಲಿರುವ ಓಂಕಾರೇಶ್ವರದಲ್ಲಿ ಅನಾವರಣಗೊಳಿಸಿದರು. ಅಷ್ಟಧಾತುವಿನಿಂದ ನಿರ್ಮಾಣವಾದ ಈ ಪ್ರತಿಮೆಯೊಂದಿಗೆ ‘ಅದ್ವೈತ ಲೋಕ’ ಹೆಸರಿನ ಮ್ಯೂಸಿಯಂ ಮತ್ತು ಆಚಾರ್ಯ ಶಂಕರ್ ಇಂಟರ್‌ನ್ಯಾಶನಲ್ ಅದ್ವೈತ ವೇದಾಂತ ಸಂಸ್ಥೆಯನ್ನು ಕೂಡ ನಿರ್ಮಿಸಲಾಗಿದೆ.
  • ಭಾರತ ಸರ್ಕಾರವು “ರಾಷ್ಟ್ರೀಯ ವಿಜ್ಞಾನ ಪುರಸ್ಕಾರ” ಎಂದು ಕರೆಯಲ್ಪಡುವ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಹೊಸದಾಗಿ ಪರಿಚಯಿಸಿದೆ. ಈ ಪ್ರಶಸ್ತಿಗಳು ವಿವಿಧ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಅಥವಾ ತಂಡಗಳಲ್ಲಿ ವಿಜ್ಞಾನಿಗಳು ಮತ್ತು ತಂತ್ರಜ್ಞರು ನೀಡಿದ ಗಮನಾರ್ಹ ಕೊಡುಗೆಗಳನ್ನು ಗೌರವಿಸುವ ಗುರಿಯನ್ನು ಹೊಂದಿವೆ.
  • ಕಾಶಿ ವಿಶ್ವನಾಥನ ಥೀಮ್​ನಲ್ಲೇ ಹೊಸ ಕ್ರಿಕೆಟ್​ ಕ್ರೀಡಾಂಗಣವನ್ನು ವಾರಣಾಸಿಯ ರಾಜತಾಲಬ್‌ನ ಗಂಜಾರಿ ಏರಿಯಾದಲ್ಲಿ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ತ್ರಿಶೂಲ, ಅರ್ಧಚಂದ್ರ, ಢಮರುಗ, ಬಿಲ್ವಪತ್ರೆಯ ವಿನ್ಯಾಸಗಳನ್ನು ಒಳಗೊಂಡ ಶಿವನ ಥೀಮ್​ನಲ್ಲೇ ಈ ಕ್ರೀಡಾಂಗಣದ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಶಿವನ ತಲೆಯ ಮೇಲಿರುವ ಅರ್ಧಚಂದ್ರಾಕೃತಿಯಲ್ಲೇ ಕ್ರೀಡಾಂಗಣದ ಮೇಲ್ಛಾವಣಿಯ ವಿನ್ಯಾಸವಿರಲಿದೆ. ಫ್ಲಡ್​ಲೈಟ್​ಗಳನ್ನು ದೊಡ್ಡ ತ್ರಿಶೂಲದ ಆಕೃತಿಯ ಕಂಬಗಳಲ್ಲಿ ಅಳವಡಿಸಲಾಗುತ್ತದೆ. ಮುಖ್ಯ ಪ್ರವೇಶ ದ್ವಾರದಲ್ಲಿರುವ ಪೆವಿಲಿಯನ್​ ಮತ್ತು ವಿಐಪಿ ಲಾಂಜ್​ಗಳ ಗುಮ್ಮಟವು ಶಿವನ ಕೈಯಲ್ಲಿರುವ ಢಮರುಗದ ರೀತಿಯಲ್ಲೇ ಇರಲಿದೆ. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗಳ ಆಸನ ವ್ಯವಸ್ಥೆಯನ್ನು ಕಾಶಿ ಘಾಟ್​ಗಳ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗೇಟುಗಳು ಬಿಲ್ವ ಪತ್ರೆಯ ರೀತಿಯಲ್ಲಿ ಇರಲಿವೆ. ಎಲ್​ ಆಂಡ್​ ಟಿ ಕಂಪನಿ ಈ ಕ್ರೀಡಾಂಗಣದ ಕಾಮಗಾರಿಯನ್ನೂ ನಿರ್ವಹಿಸಲಿದೆ. ಈ ಕ್ರೀಡಾಂಗಣ 2025ರ ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಮತ್ತು ಕಾನ್ಪುರ ಮತ್ತು ಲಖನೌ ನಂತರ ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆಗಲಿದೆ.
  • ರಾಫ್ಲೇಷಿಯಾ ಜಾತಿಯ ಹೂವುಗಳು: ರಾಫ್ಲೇಷಿಯಾ ಜಾತಿಯ ಹೂವುಗಳು ಇದುವರೆಗೆ ಕಂಡುಬಂದಿರುವ ಎಲ್ಲಾ ಹೂವುಗಳ ಪೈಕಿ ಅದರ ಗಾತ್ರ ದೊಡ್ಡದಾಗಿದೆ. ನಾಲ್ಕು ಅಡಿಗಳಿಗಿಂತ ಹೆಚ್ಚು ವ್ಯಾಸದ ಮತ್ತು 10 ಕೆಜಿ ತೂಕದ ರಾಫ್ಲೇಷಿಯಾ ಹೂವುಗಳನ್ನು ಶವದ ಹೂವುಗಳು ಎಂದೂ ಕರೆಯುತ್ತಾರೆ. ಏಕೆಂದರೆ ಅವು ಕೊಳೆತ ಶವದಂತೆ ವಾಸನೆ ಬೀರುತ್ತವೆ. ಇಂಡೋನೇಷ್ಯಾದ ಸುಮಾತ್ರದ ಕಾಡುಗಳಲ್ಲಿ ಕಂಡುಬರುವ ಈ ರಾಫ್ಲೇಷಿಯಾ ಹೂವುಗಳನ್ನು ಡಾ. ಜೋಸೆಫ್ ಅರ್ನಾಲ್ಡ್ ತಂಡವು 1971 ರಿಂದ 1974 ರ ಅವಧಿಯಲ್ಲಿ ಕಂಡುಹಿಡಿದಿದೆ. ಹೂವಿನ ಆಕಾರದಲ್ಲಿರುವ ಈ ಸಸ್ಯಕ್ಕೆ ಈ ತಂಡದ ನಾಯಕ ಸರ್ ಥಾಮಸ್ ಸ್ಟ್ಯಾಮ್‌ಫೋರ್ಡ್ ರಾಫೆಲ್ಸ್ ಹೆಸರಿಡಲಾಗಿದೆ. ಇಲ್ಲಿಯವರೆಗೆ 26 ಜಾತಿಯ ರಾಫ್ಲೇಷಿಯಾ ಸಸ್ಯಗಳನ್ನು (ಹೂಗಳು) ಕಂಡುಹಿಡಿಯಲಾಗಿದೆ. ಇವುಗಳಲ್ಲಿ 10 ಜಾತಿ ವಿಶ್ವದ ಅತಿ ದೊಡ್ಡ ಜಾತಿ ಸಸ್ಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಂಡೋನೇಷ್ಯಾ ಜೊತೆಗೆ, ಮಲೇಷ್ಯಾ ಮತ್ತು ಫಿಲಿಪೈನ್ಸ್‌ನಲ್ಲಿ ರಾಫ್ಲೇಷಿಯಾ ಜಾತಿಗಳು ಕಂಡುಬಂದಿವೆ. ವಿಶ್ವದ ಅತಿ ದೊಡ್ಡ ಹೂವಾದ ರಾಫ್ಲೇಷಿಯಾದ ದೊಡ್ಡ ಜಾತಿ ಅಳಿವಿನ ಅಂಚಿನಲ್ಲಿದೆ. ಹವಾಮಾನ ಬದಲಾವಣೆ ಮತ್ತು ಪರಿಸರದ ಹಾನಿಯಿಂದಾಗಿ ಈ ಹೂವುಗಳಿಗೆ ಅಪಾಯ ಹೆಚ್ಚುತ್ತಿದೆ. ಅಳಿವಿನ ಅಪಾಯದಲ್ಲಿರುವ ಸಸ್ಯಗಳ ಪಟ್ಟಿಯಲ್ಲಿ ರಾಫ್ಲೇಷಿಯಾದ ಒಂದು ಜಾತಿಯನ್ನು ಮಾತ್ರ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN)ಗೆ ಸೇರಿಸಲಾಗಿದೆ.