Published on: January 7, 2023

ಚುಟುಕು ಸಮಾಚಾರ – 7 ಜನವರಿ 2023

ಚುಟುಕು ಸಮಾಚಾರ – 7 ಜನವರಿ 2023

  • ರಾಜ್ಯ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ರಾಜ್ಯ ಕೃಷಿ ಇಲಾಖೆ ವತಿಯಿಂದ ಜನವರಿ 20 ರಿಂದ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ -2023′ ಹಮ್ಮಿಕೊಳ್ಳಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ಒದಗಿಸಲು ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಸಾವಯವ ಮತ್ತು ಸಿರಿಧಾನ್ಯ ಮಾರುಕಟ್ಟೆ ವಿಸ್ತರಣೆ ಜೊತೆಗೆ ಆರೋಗ್ಯಕರ ಜವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಆಯೋಜಿಸಲಾಗಿದೆ.
  • ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ಉತ್ತೇಜನ ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಮೈಕ್ರೋಸಾಫ್ಟ್ ಒಪ್ಪಂದಕ್ಕೆ (MoU) ಸಹಿ ಹಾಕಿವೆ.
  • ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಮುಖ ಕ್ರಮದಲ್ಲಿ ಕೇಂದ್ರ ಚುನಾವಣಾ ಆಯೋಗವು ದೇಶೀಯ ವಲಸೆ ಮತದಾರರಿಗಾಗಿ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು (ಆರ್ವಿಎಂ) ಅಭಿವೃದ್ಧಿಪಡಿಸಿದೆ.
  • ಮಾನವ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ‘ಹಸಿರು ಅಂತ್ಯಕ್ರಿಯೆ‘ಗೆ ಅಮೆರಿಕ ನ್ಯೂಯಾರ್ಕ್ ರಾಜ್ಯ ಒಪ್ಪಿಗೆ ನೀಡಿದೆ. ಈ ಕ್ರಿಯೆಯನ್ನು ‘ಹ್ಯೂಮನ್ ಕಾಂಪೋಸ್ಟಿಂಗ್‘ ಎನ್ನಲಾಗುತ್ತದೆ.2019ರಲ್ಲಿ ವಾಷಿಂಗ್ಟನ್ ಈ ‘ಹಸಿರು ಸಂಸ್ಕಾರ‘ಕ್ಕೆ ಅನುಮತಿ ನೀಡಿದ ಮೊದಲ ರಾಜ್ಯವಾಗಿತ್ತು. ಬಳಿಕ ಕೊಲಾರಡೋ, ಒರಿಗನ್, ವೆರ್ಮೋಂಟ್ ಹಾಗೂ ಕ್ಯಾಲಿಫೋರ್ನಿಯಾ ಕೂಡ ಇದನ್ನು ಕಾನೂನು ಬದ್ಧಗೊಳಿಸಿದ್ದವು. ಸದ್ಯ ನ್ಯೂಯಾರ್ಕ್ ಕೂಡ ಹ್ಯೂಮನ್ ಕಾಂಪೋಸ್ಟಿಂಗ್ಗೆ ಅನುಮತಿ ಕೊಟ್ಟಿದೆ.
  • ಡಿಬಿಎಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ: ಪ್ರಸ್ತುತ 9 ಅಥವಾ 10 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸುವುದನ್ನು ಬೆಂಬಲಿಸಲು ಡಿಬಿಎಸ್ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ವಿದ್ಯಾರ್ಥಿವೇತನವು ಪೊಲೀಸ್ ಸಿಬ್ಬಂದಿಯ (ಸಬ್-ಇನ್‌ಸ್ಪೆಕ್ಟರ್ ಮತ್ತು ಕೆಳಗಿನ ಶ್ರೇಣಿ) ಮಕ್ಕಳಿಗೆ ಮೀಸಲಾಗಿದೆ. ಅರ್ಹತೆ: ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಅಥವಾ ಪುದುಚೆರಿಯಲ್ಲಿ ನೆಲೆಸಿರುವ ಪೊಲೀಸ್ ಸಿಬ್ಬಂದಿಯ (ಸಬ್-ಇನ್‌ಸ್ಪೆಕ್ಟರ್ ಮತ್ತು ಕೆಳಗಿನ ಶ್ರೇಣಿ) ಮಕ್ಕಳಿಗಾಗಿ ಮುಕ್ತವಾಗಿದೆ. ಅರ್ಜಿದಾರರು ಪ್ರಸ್ತುತ 9 ಅಥವಾ 10 ನೇ ತರಗತಿಗೆ ದಾಖಲಾಗಿರಬೇಕು. ಆರ್ಥಿಕ ಸಾಹಯ ವಾರ್ಷಿಕ ರೂ. 20,000 (3 ವರ್ಷಗಳ ವರೆಗೆ)
  • ಸಿಂಗಪುರ ದೇಶದಲ್ಲಿ ಕೋವಿಡ್‌–19 ನಿರ್ವಹಣೆ ಹಾಗೂ ಕೋವಿಡ್‌ ಲಸಿಕೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದನ್ನು ಪರಿಗಣಿಸಿ, ಭಾರತ ಮೂಲದ ಆರೋಗ್ಯಾಧಿಕಾರಿ ದಿನೇಶ್ ವಾಸು ದಾಸ್‌ ಎಂಬುವವರನ್ನು ಸಿಂಗಪುರ ಸರ್ಕಾರವು ‘ಪಬ್ಲಿಕ್ ಸರ್ವೀಸ್‌ ಸ್ಟಾರ್‌’ ಪ್ರಶಸ್ತಿಗೆ ಆಯ್ಕೆ ಮಾಡಿದೆ.
  • ಭಾರತ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯ ಮಾನದಂಡಗಳಲ್ಲಿ ಯೋ ಯೋ ಫಿಟ್‌ನೆಸ್ ಪರೀಕ್ಷೆಯನ್ನು ಮರಳಿ ಸೇರ್ಪಡೆ ಮಾಡಲಾಗಿದೆ. ಯೋ ಯೋ ಟೆಸ್ಟ್ :ಏರೋಬಿಕ್ ಫಿಟ್‌ನೆಸ್‌ ಪರೀಕ್ಷೆ ಮಾದರಿ ಇದಾಗಿದೆ. ಇದರಲ್ಲಿ ವೇಗದ ಓಟಕ್ಕೆ ಒತ್ತು ನೀಡಲಾಗಿದೆ. 20 ಮೀಟರ್‌ ಅಂತರದ ಓಟಗಳನ್ನು ಏರ್ಪಡಿಸಿ, ಪ್ರತಿ ಹಂತದಲ್ಲಿಯೂ ವೇಗವನ್ನು ಹೆಚ್ಚಿಸಲು ಸೂಚಿಸಲಾಗುತ್ತದೆ. ವೇಗ ಸಾಮರ್ಥ್ಯವನ್ನು ದಾಖಲಿಸಿ ಪಾಯಿಂಟ್ ನೀಡಲಾಗುತ್ತದೆ.