Published on: June 1, 2023

ನೂತನ ಸಂಸತ್‌ ಭವನ

ನೂತನ ಸಂಸತ್‌ ಭವನ

ಸುದ್ದಿಯಲ್ಲಿ ಏಕಿದೆ? ‘ಸೆಂಟ್ರಲ್‌ ವಿಸ್ತಾ’ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ನೂತನ ಸಂಸತ್‌ ಭವನವನ್ನು  ಉದ್ಘಾಟನೆ ಮಾಡಲಾಯಿತು. ಭವನವು ತ್ರಿಕೋನಾಕೃತಿಯಲ್ಲಿದೆ.

ಮುಖ್ಯಾಂಶಗಳು

  • ಚೋಳರ ಕಾಲದ ಐತಿಹಾಸಿಕ ಸೆಂಗೊಲ್‌ (ರಾಜದಂಡ) ಅನ್ನು ಲೋಕಸಭೆ ಸ್ಪೀಕರ್‌ ಆಸನದ ಸಮೀಪ ಪ್ರತಿಷ್ಠಾಪಿಸಲಾಯಿತು. (ದೇಶ ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ಬ್ರಿಟೀಷ್‌ ವೈಸ್‌ರಾಯ್‌ ಅವರಿಂದ ಮೊದಲ ಪ್ರಧಾನಿ ನೆಹರು ಅಧಿಕಾರ ಹಸ್ತಾಂತರ ಸಂಕೇತವಾಗಿ ಪಡೆದುಕೊಂಡಿದ್ದ ರಾಜದಂಡ.)
  • ಅಖಂಡ ಭಾರತದ ಚಿತ್ರಣವನ್ನು ನೂತನ ಸಂಸತ್ ಭವನದ ಗೋಡೆಗಳ ಮೇಲೆ ಕಲಾವಿದರು ಅರಳಿಸಿದ್ದು, ಭಾರತವನ್ನು ಆಳಿದ ರಾಜ ಮನೆತನಗಳು ಸೇರಿದಂತೆ ಹಲವು ವಿವರಗಳಿವೆ. ಈ ಕಲೆಯ ಹಿಂದೆ ಪ್ರಾಚೀನ ಭಾರತದ ಪ್ರಭಾವ ಇದೆ. ಈ ಅಖಂಡ ಭಾರತ ಪರಿಕಲ್ಪನೆಯು ಅವಿಭಜಿತ ಭಾರತ ಭೂಖಂಡವನ್ನ ಪ್ರತಿನಿಧಿಸುತ್ತದೆ. ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ ದೇಶ, ಶ್ರೀಲಂಕಾ, ಮಯನ್ಮಾರ್ ಹಾಗೂ ಥೈಲ್ಯಾಂಡ್ ದೇಶಗಳು ಪ್ರಾಚೀನ ಅಖಂಡ ಭಾರತ ಪರಿಕಲ್ಪನೆ ಅಡಿ ಬರುತ್ತವೆ.
  • ಈ ಸಂಭ್ರಮದ ಸನ್ನಿವೇಶದ ಸ್ಮರಣಾರ್ಥ ಭಾರತ ಸರ್ಕಾರವು ಅಂಚೆ ಚೀಟಿ ಹಾಗೂ 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದೆ. ನಾಣ್ಯದ ಒಂದು ಮುಖದಲ್ಲಿ ನಾಲ್ಕು ತಲೆ ಸಿಂಹ ಇರುವ ಅಶೋಕ ಸ್ಥಂಭ ಮಧ್ಯದಲ್ಲಿ ಇರಲಿದೆ. ದೇವನಾಗರಿ ಲಿಪಿಯಲ್ಲಿ ಭಾರತ ಎಂದು ಬರೆಯಲಾಗಿದೆ. ಜೊತೆಯಲ್ಲೇ ಇಂಗ್ಲಿಷ್ ಭಾಷಣೆಯಲ್ಲಿ ಇಂಡಿಯಾ ಎಂದು ಬರೆಯಲಾಗಿದೆ. ನಾಣ್ಯದ ಮತ್ತೊಂದು ಮುಖದಲ್ಲಿ ನೂತನ ಸಂಸತ್ ಭವನ ಕಟ್ಟಡವನ್ನು ಚಿತ್ರಿಸಲಾಗಿದೆ.
  • ವಿನ್ಯಾಸಕಾರರು: ಎಚ್‌ಸಿಪಿ ಡಿಸೈನ್‌ ಪ್ಲ್ಯಾನಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಪ್ರೈ.ಲಿ. ಬಿಮಲ್‌ ಪಟೇಲ-ಕಟ್ಟಡದ ವಾಸ್ತುಶಿಲ್ಪಿ.
  • ನಿರ್ಮಾಣ : ಟಾಟಾ ಪ್ರಾಜೆಕ್ಟ್ ಲಿಮಿಟೆಡ್
  • ಒಟ್ಟು ವಿಸ್ತೀರ್ಣ: 64,500 ಚ.ಮೀ
  • ವೆಚ್ಚ: 1200 ಕೋಟಿ ರೂ.

ಭವನದ ವೈಶಿಷ್ಟ್ಯಗಳು

  • ಭವನದ ಮೇಲೆ ರಾಷ್ಟ್ರೀಯ ಲಾಂಛನದ ಕಂಚಿನ ಪ್ರತಿರೂಪವಿದೆ. ಇದರ ತೂಕ ಅಂದಾಜು 9,500 ಕೆ.ಜಿ, 6.5 ಮೀಟರ್ ಎತ್ತರ. ಕೋನಾರ್ಕ್ನ ಸೂರ್ಯ ದೇವಾಲಯದ ಚಕ್ರದ ಮಾದರಿಯೊಂದಿಗೆ ಬಹುಮುಖಿ ಕೌಟಿಲ್ಯನ ಭಾವಚಿತ್ರವನ್ನು ಕಟ್ಟಡದಲ್ಲಿ ಸ್ಥಾಪಿಸಲಾಗಿದೆ.
  • ಕಾಗದ ರಹಿತ ಸದನ: ಕಾಗದ ಪತ್ರಗಳ ಬಳಕೆಯನ್ನು ಶೂನ್ಯಕ್ಕಿಳಿಸುವ ಉದ್ದೇಶದೊಂದಿಗೆ ಅಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಪ್ರತಿ ಡೆಸ್ಕ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಗ್ಯಾಜೆಟ್‌ ಅಳವಡಿಸಲಾಗಿದೆ. ಸಚಿವರು ಮತ್ತು ಕಾರ್ಯದರ್ಶಿಗಳ ನಡುವಿನ ಸಂವಾದಕ್ಕಾಗಿ ರಾಷ್ಟ್ರೀಯ ಇ- ವಿಧಾನ್‌ ಆ್ಯಪ್‌ ಅಳವಡಿಸಲಾಗಿದೆ. ಇ-ಹಾಜರಾತಿ ಹೊಂದಿರುವ ಕೊಠಡಿ, ಮತದಾನಕ್ಕೆ ಅನುಕೂಲವಾಗುವಂತೆ ಬಯೊಮೆಟ್ರಿಕ್‌ ವ್ಯವಸ್ಥೆ, ಸಂಸದರ ಕೊಠಡಿಗಳಿಗೆ ಡಿಜಿಟಲ್‌ ಇಂಟರ್‌ಫೇಸ್‌ ಸಂಪರ್ಕ ರೂಪಿಸಲಾಗಿದೆ.

ಆಸನ ಸಾಮರ್ಥ್ಯ

  • ಲೋಕಸಭೆ ಚೇಂಬರ್‌ 3015 ಚ.ಮೀ. ಪ್ರದೇಶದಲ್ಲಿ ನಿರ್ಮಾಣವಾಗಿದೆ. ಈಗಿನ 543 ಸ್ಥಾನಗಳ ಬದಲಾಗಿ 888 ಸ್ಥಾನಗಳ ವ್ಯವಸ್ಥೆ ಇದೆ. ರಾಷ್ಟ್ರೀಯ ಪಕ್ಷಿ ನವಿಲು ಥೀಮ್‌ನಲ್ಲಿ ನಿರ್ಮಿಸಲಾಗಿದೆ.
  • ರಾಜ್ಯಸಭೆಯನ್ನು ಕಮಲ ಹೂವಿನ ವಿನ್ಯಾಸದಲ್ಲಿ ರೂಪಿಸಲಾಗಿದ್ದು, ಈಗಿನ 250 ಆಸನಗಳ ಬದಲಿಗೆ 388 ಆಸನ ವ್ಯವಸ್ಥೆ ಮಾಡಲಾಗಿದೆ.
  • ದ್ವಾರಗಳು: ‘ಜ್ಞಾನ ದ್ವಾರ’, ‘ಶಕ್ತಿ ದ್ವಾರ’, ‘ಕರ್ಮ ದ್ವಾರ’ ಎಂಬ ಮೂರು ದ್ವಾರ ರೂಪಿಸಲಾಗಿದೆ. ಸಂಸದರು ಮತ್ತು ವಿಐಪಿಗಳಿಗೆ ಒಂದು ದ್ವಾರವಿದ್ದರೆ, ಅಧಿಕಾರಿಗಳು, ಜನತೆ, ಪ್ರವಾಸಿಗರಿಗೆ ಪ್ರತ್ಯೇಕ ದ್ವಾರವಿದೆ.
  • ಸುಸ್ಥಿರ ಅಭಿವೃದ್ಧಿಗೆ ಮುನ್ನುಡಿ

ಹಳೆಯ ದೇಸಿ ಸಂಪ್ರದಾಯ, ವೈವಿಧ್ಯತೆಯನ್ನ ಸಮ್ಮಿಶ್ರಣಗೊಳಿಸಿ ಆಧುನಿಕ ತಂತ್ರಜ್ಞಾನದೊಂದಿಗೆ ಪರಿಸರ ಸ್ನೇಹಿಯಾಗಿ ನೂತನ ಸಂಸತ್‌ ಭವನ ನಿರ್ಮಿಸಲಾಗಿದೆ. ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯಲ್ಲಿ ಹೊಸ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಶೇ.30ರಷ್ಟು ವಿದ್ಯುತ್‌ ಉಳಿತಾಯ ಮಾಡುವ ರೀತಿಯಲ್ಲಿ ಸೋಲಾರ್‌ ಪೆನಾಲ್‌ ಅಳವಡಿಸಲಾಗಿದೆ. ಮಳೆ ನೀರು ಕೊಯ್ಲಿಗೆ ಆದ್ಯತೆ ನೀಡಲಾಗಿದೆ. ಭೂಕಂಪದ ಯಾವ ಪರಿಣಾಮಗಳಿಗೂ ಜಗ್ಗದಂತೆ ಸದೃಢವಾಗಿ ನಿರ್ಮಾಣ ಮಾಡಲಾಗಿದೆ.

  • ‘ಏಕ ಭಾರತ ಶ್ರೇಷ್ಠ ಭಾರತ’ ದ ಪ್ರತಿಬಿಂಬ

ಹೊಸ ಸಂಸತ್‌ ಭವನವನ್ನು ಏಕ ಭಾರತ, ಶ್ರೇಷ್ಠ ಭಾರತ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಹಲವು ವಸ್ತುಗಳನ್ನು ತಂದು ಕಟ್ಟಡ ಕಟ್ಟಲಾಗಿದೆ. ಒಂದೊಂದು ವಸ್ತುಗಳು ಅದರದೇ ಆದ ಪ್ರತ್ಯೇಕ ಇತಿಹಾಸವಿದೆ. ಎಲ್ಲಾ ರಾಜ್ಯಗಳಿಂದ ಒಂದೊಂದು ವಸ್ತುವನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ “ಏಕ್ ಭಾರತ್, ಶ್ರೇಷ್ಠ ಭಾರತ್” ಎಂದು ನೂತನ ಸಂಸತ್ ಭವನಕ್ಕೆ ನಾಮಕರಣ ಮಾಡಲಾಗಿದೆ.