Published on: September 21, 2023

ಪಿಎಂ ವಿಶ್ವಕರ್ಮ ಯೋಜನೆ

ಪಿಎಂ ವಿಶ್ವಕರ್ಮ ಯೋಜನೆ

ಸುದ್ದಿಯಲ್ಲಿ ಏಕಿದೆ? ಸೆಪ್ಟೆಂಬರ್ 17 ವಿಶ್ವಕರ್ಮ ಜಯಂತಿಯಂದು ಪಿಎಂ ವಿಶ್ವಕರ್ಮ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

ಮುಖ್ಯಾಂಶಗಳು

  • ಎರಡು ಹಂತಗಳಲ್ಲಿ ಮೂರು ಲಕ್ಷ ರೂ ಸಾಲ ನೀಡುವ ಈ ಯೋಜನೆಯು ಲಕ್ಷಾಂತರ ಕರಕುಶಲ ಕರ್ಮಿಗಳಿಗೆ ನೆರವಾಗಲಿದೆ.
  • ಮುಂದಿನ ಐದು ವರ್ಷಗಳ ಅವಧಿಯಲ್ಲಿ ಯೋಜನೆಗಾಗಿ ಕೇಂದ್ರ ಸರ್ಕಾರ 13,000 ಕೋಟಿ ರೂ. ಹಣ ಮೀಸಲಿಟ್ಟಿದೆ.
  • ಯೋಜನೆ ಅಡಿಯಲ್ಲಿ ಫಲಾನುಭವಿಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಿಎಂ ವಿಶ್ವಕರ್ಮ ಪೋರ್ಟಲ್‌ ಆಧಾರಿತ ಬಯೋಮೆಟ್ರಿಕ್‌ ಬಳಸಿ ನೋಂದಣಿ ಮಾಡಲಾಗುತ್ತದೆ. ಮೊದಲ ವರ್ಷ ಐದು ಲಕ್ಷ ಕುಟುಂಬಗಳನ್ನು ಇದು ಒಳಗೊಳ್ಳುತ್ತದೆ. ಮುಂದಿನ ಐದು ವರ್ಷಗಳಲ್ಲಿ 30 ಲಕ್ಷ ಕುಟುಂಬಗಳಿಗೆ ಇದರ ಲಾಭ ಸಿಗಲಿದೆ.
  • ಯೋಜನೆಯು ‘ಲೋಕಲ್ ಫಾರ್ ವೋಕಲ್’ ಎಂಬ ಸರ್ಕಾರದ ದೃಷ್ಟಿಕೋನಕ್ಕೆ ಒತ್ತು ನೀಡುತ್ತದೆ

ಉದ್ದೇಶ

  • ಭಾರತದ ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಈ ಯೋಜನೆ ಆರಂಭಿಸಿದೆ. ಆರಂಭದಲ್ಲಿ 18 ಕಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.
  • ಆಧುನಿಕ ಮಾರುಕಟ್ಟೆಗಾಗಿ ತಂತ್ರಜ್ಞಾನದೊಂದಿಗೆ ಕುಶಲಕರ್ವಿುಗಳ ಕೌಶಲ ವರ್ಧಿಸುವ ಉದ್ದೇಶ ಹೊಂದಿದೆ.
  • ವಿಶ್ವಕರ್ಮ ಯೋಜನೆಯಿಂದ ಉದ್ಯೋಗಸೃಷ್ಟಿಗೆ ಸಹಾಯಕವಾಗುವ ನಿರೀಕ್ಷೆ: ಭಾರತದಲ್ಲಿ ಮುಂದಿನ ಐದು ವರ್ಷದಲ್ಲಿ 30 ಲಕ್ಷ ಕುಶಲಕರ್ಮಿ ಕುಟುಂಬಗಳನ್ನು ತಲುಪುವ ಗುರಿ ಈ ಯೋಜನೆಯದ್ದು. ಪ್ರತೀ ವರ್ಷ 15,000 ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಕುಶಲಕರ್ಮಿಗಳ ಬದುಕು ಹಸನಾಗಿಸುವುದಲ್ಲದೇ, ಭಾರತದ ಸಾಂಪ್ರದಾಯಿಕ ಕಲಾ ಶ್ರೀಮಂತಿಕೆ ಇನ್ನಷ್ಟು ಉಜ್ವಲಗೊಳ್ಳಲು ಹಾಗೂ ಜಾಗತಿಕ ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸಲು ಇದು ನೆರವಾಗಬಹುದು.

ಯೋಜನೆಯ ವಿವರ

ಜಾಮೀನುರಹಿತ ಸಾಲ

  • ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಶೇ 5ರ ಬಡ್ಡಿದರದಲ್ಲಿ 1 ಲಕ್ಷ ರೂ (18 ತಿಂಗಳ ಮರುಪಾವತಿ ಅವಧಿಯೊಂದಿಗೆ) ಸಾಲ ನೀಡಲಾಗುತ್ತದೆ.
  • ಬಳಿಕ ಹೆಚ್ಚುವರಿಯಾಗಿ (30 ತಿಂಗಳ ಮರುಪಾವತಿಯ ಎರಡನೇ ಹಂತದ ಅವಧಿ) 2 ಲಕ್ಷ ರೂ.ವರೆಗೂ ಸಾಲ ನೀಡುವ ವ್ಯವಸ್ಥೆ ರೂಪಿಸಲಾಗಿದೆ.
  • ಇದಕ್ಕೆ ಯಾವುದೇ ಮೇಲಾಧಾರ ನೀಡಬೇಕಾದ ಅಗತ್ಯವಿಲ್ಲ. ಫಲಾನುಭವಿಗಳಿಗೆ ಶೇಕಡಾ 5 ಬಡ್ಡಿ ವಿಧಿಸಲಾಗುತ್ತದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ಶೇ. 8ರವರೆಗಿನ ಗರಿಷ್ಠ ಬಡ್ಡಿಯ ಕೊಡುಗೆಯನ್ನು ನೀಡಲಿದೆ. ಸಾಲದ ಗ್ಯಾರಂಟಿ ಶುಲ್ಕವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.
  • ಕರಕುಶಲ ಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದೊಂದಿಗೆ 30 ಲಕ್ಷ ಕುಟುಂಬಗಳಿಗೆ ಶೇ 5 ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.
  • 5ರಿಂದ 7 ದಿನದ (40 ಗಂಟೆ) ಮೂಲಭೂತ ತರಬೇತಿ ನಂತರ ಸರ್ಟಿಫಿಕೇಟ್ ಮತ್ತು ಐಡಿ ಕಾರ್ಡ್ ಹಾಗೂ ಕೌಶಲ ಪರಿಶೀಲನೆ ಮೂಲಕ ವಿಶ್ವಕರ್ಮ ಎಂದು ಮಾನ್ಯತೆ ನೀಡುವ ಲಾಭವೂ ಈ ಯೋಜನೆಯಲ್ಲಿದೆ.
  • ಅರ್ಹತೆ : ಕುಟುಂಬ ಆಧಾರಿತ 18 ಕಸಬುಗಳಲ್ಲಿ ಯಾವುದಾದ ರೊಂದರಲ್ಲಿ, ಅಸಂಘಟಿತ ವಲಯದಲ್ಲಿ, ಸ್ವ-ಉದ್ಯೋಗದ ಆಧಾರದಲ್ಲಿ ತೊಡಗಿಸಿಕೊಂಡು ಕೈಗಳು ಮತ್ತು ಸಲಕರಣೆಗಳೊಂದಿಗೆ ಕೆಲಸ ಮಾಡುವ ವ್ಯಕ್ತಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಯೋಜನೆಯ ಪಟ್ಟಿಯಲ್ಲಿ ಆ ಕಸಬು ನಮೂದಾಗಿರಬೇಕು.

18 ಕುಶಲಕರ್ಮಿಗಳು ಯೋಜನೆ ವ್ಯಾಪ್ತಿಗೆ

  • ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಬಡಗಿ, ಶಿಲ್ಪ ರಚನಾಕಾರರು, ಚಮ್ಮಾರ, ಮೇಸ್ತ್ರಿ, ಬುಟ್ಟಿ ತಯಾರಿಸುವರು, ದೋಬಿಗಳು, ಸವಿತ ಸಮಾಜ (ಕ್ಷೌರಿಕರು), ಗೊಂಬೆ ತಯಾರಕರು, ದರ್ಜಿ, ಮೀನುಗಾರಿಕೆ ಬಲೆ ಹೆಣೆಯುವವರು, ಹೂವಿನ ಹಾರ ರೂಪಿಸುವವರು ಸೇರಿದಂತೆ 18 ಬಗೆಯ ಸಾಂಪ್ರದಾಯಿಕ ಕರಕುಶಲ ಕಲೆಯಲ್ಲಿ ತೊಡಗಿರುವ ಕುಶಲ ಕರ್ಮಿಗಳು ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.

ನಿಮಗಿದು ತಿಳಿದಿರಲಿ

  • ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಒಳಗೊಂಡಿರದ ಕುಶಲಕರ್ವಿುಗಳನ್ನು ರಾಜ್ಯದ ಯೋಜನೆಯಲ್ಲಿ ಸೇರಿಸಲು ಅರುಣಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ.