Published on: March 17, 2024

ಬ್ಯಾಟರಿ ವಿನಿಮಯ ನೀತಿ ಉಪಕ್ರಮ

ಬ್ಯಾಟರಿ ವಿನಿಮಯ ನೀತಿ ಉಪಕ್ರಮ

ಸುದ್ದಿಯಲ್ಲಿ ಏಕಿದೆ? 2070ರ ವೇಳೆಗೆ ಶೂನ್ಯ ಹೊರಸೂಸುವಿಕೆಯ ಗುರಿ ಸಾಧಿಸಲು ಪಳೆಯುಳಿಕೆಯೇತರ ಇಂಧನಗಳ ಬಳಕೆ ಅವಶ್ಯಕ, ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಮತ್ತಷ್ಟು ಗ್ರಾಹಕ ಸ್ನೇಹಿಯಾಗಿಸಲು ಕೇಂದ್ರ ಸರಕಾರವು ಬ್ಯಾಟರಿ ವಿನಿಮಯ ಹೊಸ ನೀತಿ ತಂದಿದೆ. ಈ ಬ್ಯಾಟರಿ ವಿನಿಮಯ ನೀತಿಯ ಉಪಕ್ರಮವು ಫೆಬ್ರುವರಿ 2022ರಲ್ಲಿ ನೀತಿ (NITI) ಆಯೋಗದಲ್ಲಿ ನಡೆದ ಚರ್ಚೆಯ ಪರಿಣಾಮವಾಗಿದೆ.

ನೀತಿಯ ಮುಖ್ಯ ಗುರಿಗಳು

  • ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ವಿನಿಮಯ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇವಿ) ಕಡೆಗೆ ಜನರ ಒಲವು ಹೆಚ್ಚಿಸುವ ಗುರಿಯನ್ನು ಹೊಂದಿದೆ.
  • ಭಾರತದಲ್ಲಿ ಬ್ಯಾಟರಿ ವಿನಿಮಯ ನೀತಿಯು ಬ್ಯಾಟರಿ ಚಾರ್ಜ್ ಮಾಡುವ ಹಳೆಯ ಪದ್ಧತಿಯಲ್ಲಿ ಇರುವ ಆರಂಭಿಕ ವೆಚ್ಚಗಳು, ತಗಲುವ ಸಮಯ, ಚಾರ್ಜ್ ಮಾಡಲು ಬೇ ಕಾದ ಜಾಗ, ಪ್ರಯಾಣದ ವೇಳೆಯ ಆತಂಕಗಳು ಇತ್ಯಾದಿ ಆತಂಕಗಳನ್ನು ಕಡಿಮೆ ಮಾಡಬಲ್ಲ ವಿವಿಧ ತಂತ್ರಜ್ಞಾನಗಳು ಮತ್ತು ಹೊಸ ವ್ಯವಹಾರದ ಮಾದರಿಗಳ ಆನ್ವೇಷಣೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ.

ಬ್ಯಾಟರಿ ವಿನಿಮಯ ಅಥವಾ ಬ್ಯಾಟರಿ ಸ್ವಾಪಿಂಗ್ ಎಂದರೇನು?

ಬ್ಯಾಟರಿ ವಿನಿಮಯವು ಸಾಂಪ್ರದಾಯಿಕ ಇವಿ ಬ್ಯಾಟರಿ ಚಾರ್ಜ್ ಮಾಡುವ ಪದ್ಧತಿಗಿಂತ ಹೆಚ್ಚು ಅನುಕೂಲಕರವಾಗಿದ್ದು ಶಕ್ತಿ ಮುಗಿದಿರುವ ಅಂದರೆ, ಡಿಸ್ಚಾರ್ಜ್ ಆಗಿರುವ ಬ್ಯಾಟರಿಯನ್ನು ಕೊಟ್ಟು ಚಾರ್ಜ್ ಆಗಿರುವ ಬ್ಯಾಟರಿಯನ್ನು ಪಡೆದುಕೊಳ್ಳುವುದೇ ಈ ವ್ಯವಸ್ಥೆಯಾಗಿದೆ

ಪದ್ಧತಿ ಮತ್ತು ವ್ಯವಸ್ಥೆಗೆ ಉತ್ತೇಜನ ನೀಡಲು ನೀತಿ ಆಯೋಗವು ಕೈಗೊಂಡ ಕ್ರಮಗಳು

ನೀತಿ ಆಯೋಗವು ಈಗಿರುವ ‘ಫೇಮ್’(FAME- Faster Adoption and Manufacturing of Hybrid and Electric Vehicles) ಅಂದರೆ, ಹೈಬ್ರಿಡ್ ಮತ್ತು ವಿದ್ಯುತ್ ಚಾಲಿತ ವಾಹನಗಳ ತ್ವರಿತ ಹೊಂದಾಣಿಕೆ ಮತ್ತು ಉತ್ಪಾದನೆಗೆ ಸಂಬಂಧಿಸಿದ ಉಪಕ್ರಮ ಹಾಗೂ ಪಿಎಲ್ಐ (Production-Linked Incentive) ಅಂದರೆ, ಉತ್ಪಾದನೆ ಆಧರಿತ ಉತ್ತೇಜಕದಂ ಥ ಉಪಕ್ರಮಗಳನ್ನು ಒಳಗೊಂಡಿರುವ ಹೊಸ ರೂಪುರೇಷೆಗಳ ಚೌಕಟ್ಟನ್ನು ರೂಪಿಸಿದೆ.

ಅನುಕೂಲತೆಗಳು

  • ಇದು ಸಮಯದ ಉಳಿತಾಯ ಮತ್ತು ಸ್ಥಳಾವಕಾಶವನ್ನು ಕಡಿಮೆಮಾಡುತ್ತದೆ, ಅಗ್ಗವೂ ಆಗಿದೆ.
  • ‘ಸೇವೆಯಾಗಿ ಬ್ಯಾಟರಿ’(Battery As a Service) ಮುಂತಾದ ಪರಿಕಲ್ಪನೆಯೊಂದಿಗೆ ವಿನೂತನ ಉದ್ಯೋಗಶೀಲತೆಗೂ ಇದು ಉತ್ತೇಜನ ನೀಡುತ್ತದೆ.
  • ಹೆಚ್ಚುವರಿಯಾಗಿ ದೂರದ ಪ್ರಯಾಣದ ಸಂದರ್ಭದಲ್ಲಿ ದಾರಿಯ ಮಧ್ಯೆ ಬ್ಯಾಟರಿ ಮುಗಿಯುವ ಆತಂಕವನ್ನು ದೂರಮಾಡುತ್ತದೆ. ಮಾತ್ರವಲ್ಲ, ವಿದ್ಯುತ್ ಚಾಲಿತ ವಾಣಿಜ್ಯ ವ್ಯವಹಾರಗಳ ವಾಹನಗಳು ಮತ್ತು ಗುಂಪು ವಾಹನಗಳಿಗೆ (pool) ಹೆಚ್ಚು ಕಾರ್ಯ ಸಾಧುವಾದ ಮತ್ತು ವಾಸ್ತವಿಕವಾದ ಬದಲಿ ವ್ಯವಸ್ಥೆಯನ್ನು ಒದಗಿಸುತ್ತದೆ.
  • ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಂತಹ ಚಿಕ್ಕ ಬ್ಯಾಟರಿ ಹೊಂದಿರುವ ವಾಹನಗಳು ಈ ಪದ್ಧತಿಯಿಂದ ಲಾಭ ಪಡೆಯುವ ನಿರೀಕ್ಷೆಯಿದೆ. ಯಾಕೆಂದರೆ ಈ ಬ್ಯಾಟರಿಗಳು ಹೆಚ್ಚು ದಕ್ಷವಾಗಿದ್ದು, ಅನುಕೂಲಕರವಾಗಿದೆ.