Published on: June 20, 2023

ಭಾರತದ ಜಿಡಿಪಿ ದರ

ಭಾರತದ ಜಿಡಿಪಿ ದರ

ಸುದ್ದಿಯಲ್ಲಿ ಏಕಿದೆ? ಭಾರತದ ಆರ್ಥಿಕತೆಯು 2022-23ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 6.1 ಪ್ರತಿಶತದಷ್ಟು ವಿಸ್ತರಿದೆ. ಈ ಮೂಲಕ ಹಣಕಾಸು ವರ್ಷದ ವಾರ್ಷಿಕ ಬೆಳವಣಿಗೆ ದರವು ಶೇಕಡಾ 7.2 ರಷ್ಟು ದಾಖಲಾಗಿದೆ.

ಮುಖ್ಯಾಂಶಗಳು

  • ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೇ ತ್ರೈಮಾಸಿಕದ ಜಿಡಿಪಿ 43.62 ಲಕ್ಷ ಕೋಟಿ ರೂಪಾಯಿ ಇದೆ.
  • 2021-22ರ ನಾಲ್ಕನೇ ತ್ರೈಮಾಸಿಕದಲ್ಲಿ ಈ ಮೊತ್ತವು 41.12 ಲಕ್ಷ ಕೋಟಿ ರೂ. ಇತ್ತು.
  • 2022-23 ಹಣಕಾಸು ವರ್ಷದಲ್ಲಿ ಒಟ್ಟು ಭಾರತದ ಜಿಡಿಪಿ 3.75 ಲಕ್ಷ ಕೋಟಿ ಡಾಲರ್ (307.87 ಲಕ್ಷ ಕೋಟಿ ರೂಪಾಯಿ) ತಲುಪುವ ಮೂಲಕ ದಾಖಲೆ ಬರೆಯಿತು. ಇದರೊಂದಿಗೆ ಭಾರತವು ವಿಶ್ವದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆ ಸ್ಥಾನದಲ್ಲಿ ಮುಂದುವರಿಯಿತು. ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ- ಮೊದಲ ನಾಲ್ಕು ಸ್ಥಾನದಲ್ಲಿವೆ.

ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಗೆ ಸಹಾಯಕವಾಗಿರುವ ಅಂಶಗಳು

  • ಭಾರತವು ಬಲವಾದ ಆರ್ಥಿಕ ಅಡಿಪಾಯ, ದೇಶೀಯ ಬೇಡಿಕೆ, ಎಚ್ಚರಿಕೆಯ ಹಣಕಾಸು ನಿರ್ವಹಣೆ, ಹೆಚ್ಚಿನ ಉಳಿತಾಯ ದರಗಳು ಮತ್ತು ಅನುಕೂಲಕರ ಜನಸಂಖ್ಯಾ ಪ್ರವೃತ್ತಿಗಳಿಂದಾಗಿ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ.
  • ಪ್ರಸ್ತುತ ವರ್ಷದಲ್ಲಿ ಜಿಡಿಪಿ ದರ  : ಪ್ರಸಕ್ತ 2023-24ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.6.5 ಇರಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದೆ. ಮೊದಲ ತ್ರೖೆಮಾಸಿಕದಲ್ಲಿ ಶೆ. 7.6 ಬೆಳವಣಿಗೆ ಅಂದಾಜಿಸಲಾಗಿದೆ.

ಕೊಡುಗೆ ನೀಡುವ ಕ್ಷೇತ್ರಗಳು: 

  • ಬಂಡವಾಳ ಸರಕುಗಳ ಆಮದು ಹೆಚ್ಚಳವಾಗಿರುವುದು. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ಅಂದಾಜು 20 ಪ್ರತಿಶತದಷ್ಟು ಏರಿಕೆಯಾಗಿದೆ. ಇದು ಖಾಸಗಿ ವಲಯದ ಬಂಡವಾಳ ಸಾಮರ್ಥ್ಯ ಸುಧಾರಿಸುವುದನ್ನು ಸೂಚಿಸುತ್ತದೆ.
  • ಭಾರತದ ಜಿಡಿಪಿಗೆ ಕೊಡುಗೆ ನೀಡುತ್ತಿರುವ ಪ್ರಮುಖ ಕ್ಷೇತ್ರಗಳೆಂದರೆ ಕೃಷಿ, ಕೈಗಾರಿಕೆ ಮತ್ತು ಸೇವೆಗಳು. ಕೃಷಿಯು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಉದ್ಯಮವು ಉತ್ಪಾದನೆ, ನಿರ್ಮಾಣವನ್ನು ಒಳಗೊಂಡಿರುತ್ತದೆ. ಸೇವೆಗಳು ಹಣಕಾಸು, ಆರೋಗ್ಯ, ಶಿಕ್ಷಣ ಮತ್ತು ಪ್ರವಾಸೋದ್ಯಮ ದಂತಹ ಕ್ಷೇತ್ರಗಳನ್ನು ಒಳಗೊಂಡಿವೆ.

ಜಿಡಿಪಿ ಲೆಕ್ಕಾಚಾರ

  • ಜಿಡಿಪಿ ಎಂಬುದು ಒಂದು ನಿರ್ದಿಷ್ಟ ಅವಧಿಯಲ್ಲಿ ಆ ದೇಶದಲ್ಲಿ ಉತ್ಪಾದಿಸಲಾದ ಎಲ್ಲ ಅಂತಿಮ ಸೇವೆಗಳು ಮತ್ತು ಉತ್ಪನ್ನಗಳ ಒಟ್ಟು ಮಾರುಕಟ್ಟೆ ಮೌಲ್ಯವಾಗಿದೆ. ಸರಳವಾಗಿ ಹೇಳುವುದಾದರೆ ಒಂದು ಹಣಕಾಸು ವರ್ಷದಲ್ಲಿ ಒಂದು ದೇಶದ ಒಟ್ಟು ಆದಾಯ ಇದಾಗಿದೆ. ಜಿಡಿಪಿಯನ್ನು ಈ ಸೂತ್ರವನ್ನು ಬಳಸಿಕೊಂಡು ಲೆಕ್ಕಹಾಕಲಾಗುತ್ತದೆ.

ವೈ= ಸಿ + ಐ + ಜಿ + (ಎಕ್ಸ್ – ಎಂ)

  • ಸಿ – ಒಟ್ಟಾರೆ ಸೇವೆಯನ್ನು (ಉತ್ಪನ್ನಗಳ ಖರೀದಿ ಮತ್ತು ಬಳಸಿಕೊಳ್ಳುವ ಸೇವೆ) ಬಿಂಬಿಸುತ್ತದೆ. ಇದು ಸೇವೆಗಳು, ಬಾಳಿಕೆ ಬರದ ಸರಕುಗಳು (ತಕ್ಷಣವೇ ಬಳಸಲು ಖರೀದಿಸುವ ವಸ್ತುಗಳು) ಮತ್ತು ಬಾಳಿಕೆ ಬರುವ ಸರಕುಗಳ ಮೇಲಿನ ಖರ್ಚು ಒಳಗೊಂಡಿರುತ್ತದೆ.
  • ಐ – ಹೂಡಿಕೆಯನ್ನು ಸೂಚಿಸುತ್ತದೆ. ಇದು ವಸತಿ ಮತ್ತು ಸಲಕರಣೆಗಳ ಮೇಲೆ ಖರ್ಚು ಮಾಡುವುದನ್ನು ಒಳಗೊಂಡಿರುತ್ತದೆ. ಒಟ್ಟು ರಫ್ತು ಮತ್ತು ಆಮದುಗಳ ನಡುವಿನ ವ್ಯತ್ಯಾಸವನ್ನು ನಿವ್ವಳ ರಫ್ತು ಎಂದು ಕರೆಯಲಾಗುತ್ತಿದ್ದು, ಇದನ್ನು (ಎಕ್ಸ್ – ಎಂ) ಎಂದು ಸೂಚಿಸಲಾಗುತ್ತದೆ.
  • ಜಿ – ಎನ್ನುವುದು ಸರ್ಕಾರಿ ವೆಚ್ಚವನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಉದ್ಯೋಗಿಗಳ ಸಂಬಳ, ರಸ್ತೆಗಳ ನಿರ್ವಣ, ರೈಲ್ವೆ, ವಿಮಾನ ನಿಲ್ದಾಣಗಳು, ಶಾಲೆಗಳು ಮತ್ತು ಮಿಲಿಟರಿ ವೆಚ್ಚಗಳು ಸೇರಿವೆ.
  • ವೈ – ಎಂಬುದು ಒಟ್ಟು ದೇಶೀಯ ಉತ್ಪನ್ನವನ್ನು (ಜಿಡಿಪಿ) ಪ್ರತಿನಿಧಿಸುತ್ತದೆ.

ಜಿಡಿಪಿ ಬೆಳವಣಿಗೆ ದರ: 

  • ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರವು ಒಂದು ನಿರ್ದಿಷ್ಟ ಅವಧಿಯಲ್ಲಿ ಜಿಡಿಪಿ ಹೆಚ್ಚಾಗುವ ವೇಗವನ್ನು ಸೂಚಿಸುತ್ತದೆ. ಇದನ್ನು ಸಾಮಾನ್ಯವಾಗಿ ವಾರ್ಷಿಕವಾಗಿ ಅಥವಾ ತ್ರೖೆಮಾಸಿಕವಾಗಿ ಅಳೆಯಲಾಗುತ್ತದೆ. ಒಂದು ಅವಧಿಯ ಜಿಡಿಪಿಯನ್ನು ಹಿಂದಿನ ಅವಧಿಯ ಜಿಡಿಪಿಯೊಂದಿಗೆ ಹೋಲಿಸಿ ಲೆಕ್ಕ ಹಾಕಿ ಶೇಕಡಾವಾರು ಪ್ರಮಾಣದಲ್ಲಿ ನೀಡಲಾಗುತ್ತದೆ. ಇದು ದೇಶದ ಆರ್ಥಿಕ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಆರ್ಥಿಕ ಆರೋಗ್ಯದ ಚಿತ್ರಣವನ್ನು ಒದಗಿಸುತ್ತದೆ. ಜಿಡಿಪಿ ಬೆಳವಣಿಗೆ ದರ ಸಕಾರಾತ್ಮಕವಾಗಿದ್ದರೆ ಆರ್ಥಿಕತೆ ಬೆಳೆಯುತ್ತಿದೆ ಎಂದರ್ಥ. ಇದು ಋಣಾತ್ಮಕವಾಗಿದ್ದರೆ, ಆರ್ಥಿಕತೆಯು ಕುಗ್ಗುತ್ತಿದೆ ಅಥವಾ ಹಿಂಜರಿತದಲ್ಲಿದೆ ಎಂದರ್ಥ.
  • ತಲಾದಾಯ ಲೆಕ್ಕಾಚಾರ ಹಾಕಲು ಜಿಡಿಪಿಯೇ ಮೂಲ ಆಧಾರ: ತಲಾದಾಯ ಎಂಬುದು ದೇಶದ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಗಳಿಸುವ ಸರಾಸರಿ ಆದಾಯವಾಗಿರುತ್ತದೆ. ತಲಾದಾಯ ಲೆಕ್ಕಾಚಾರ ಹಾಕಲು ಜಿಡಿಪಿಯೇ ಮೂಲ ಆಧಾರ. ದೇಶದ ಒಟ್ಟು ಆದಾಯವನ್ನು ಪ್ರತಿನಿಧಿಸುವ ಜಿಡಿಪಿ ಮೊತ್ತವನ್ನು ದೇಶದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ತಲಾದಾಯ ಲಭ್ಯವಾಗುತ್ತದೆ. 2022-23ರಲ್ಲಿ ಭಾರತದ ಜಿಡಿಪಿ 3.75 ಲಕ್ಷ ಕೋಟಿ ಡಾಲರ್ (307.87 ಲಕ್ಷ ಕೋಟಿ ರೂಪಾಯಿ). ಇದನ್ನು ಒಟ್ಟು ಜನಸಂಖ್ಯೆಯಾದ 141 ಕೋಟಿಯಿಂದ ಭಾಗಿಸಿದಾಗ ಪ್ರಸ್ತುತ ಭಾರತೀಯರ ತಲಾದಾಯವು ಅಂದಾಜು 2660 ಡಾಲರ್ (2.18 ಲಕ್ಷ ರೂ.) ಆಗುತ್ತದೆ.

ನಿಮಗಿದು ತಿಳಿದಿರಲಿ

  • ಈ ಬೆಳವಣಿಗೆ ದರವು ಸದ್ಯ ವಿಶ್ವದಲ್ಲಿಯೇ ಅತ್ಯಧಿಕವಾದುದು. ಆರ್ಥಿಕವಾಗಿ ಮುಂಚೂಣಿಯಲ್ಲಿರುವ ಬೇರಾವ ದೇಶವೂ ಇಷ್ಟು ಬೆಳವಣಿಗೆ ದರವನ್ನು ದಾಖಲಿಸಿಲ್ಲ. ಈ ಮೂಲಕ ವಿಶ್ವದ ಅತ್ಯಂತ ವೇಗವಾಗಿ ವಿಸ್ತರಿಸುವ ಮತ್ತು ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಭಾರತವು ಸ್ಥಾನವನ್ನು ಪಡೆದುಕೊಂಡಿದೆ.
  • ಕೋವಿಡ್ ಸಾಂಕ್ರಾಮಿಕದ ಪರಿಣಾಮದಿಂದ ಭಾರತದ ಆರ್ಥಿಕತೆ ಚೇತರಿಸಿಕೊಂಡಿದ್ದು, 2021-22ನೇ ಹಣಕಾಸು ವರ್ಷದಲ್ಲಿ ಶೇ. 9.1ರಷ್ಟು ಬೆಳವಣಿಗೆಯ ದರವನ್ನು ಸಾಧಿಸಿತು. ನಂತರವೂ ಇದೇ ವೇಗ ಮುಂದುವರಿದಿದ್ದು, ಜಾಗತಿಕ ಆರೋಗ್ಯ ಬಿಕ್ಕಟ್ಟಿನಿಂದ ಉಂಟಾದ ಅಡೆತಡೆಗಳಿಂದ ಚೇತರಿಸಿಕೊಳ್ಳುವ ಭಾರತದ ಸಾಮರ್ಥ್ಯವನ್ನು ಸೂಚಿಸುತ್ತದೆ.