Published on: April 18, 2022

ಭಾರತದ ಬಡತನ ಶೇ 12.3ರಷ್ಟು ಕುಸಿತ

ಭಾರತದ ಬಡತನ ಶೇ 12.3ರಷ್ಟು ಕುಸಿತ

ಸುದ್ಧಿಯಲ್ಲಿ ಏಕಿದೆ? ಭಾರತದ ಕಡು ಬಡತನ ಪ್ರಮಾಣವು 2011ರಲ್ಲಿ ಇದ್ದುದಕ್ಕಿಂತ 2019ರಲ್ಲಿ ಶೇ 12.3ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್ ನೀತಿ ಸಂಶೋಧನೆಯ ಪ್ರಾಥಮಿಕ ವರದಿ ಹೇಳಿದೆ.

ವರದಿಯಲ್ಲಿ ಏನಿದೆ ?

  • 2011ರಲ್ಲಿ ಶೇ 22.5ರಷ್ಟು ದಾಖಲಾಗಿದ್ದ ಭಾರತದ ಬಡತನ ದರವು 2019ರಲ್ಲಿ ಶೇ 10.2ಕ್ಕೆ ಕುಸಿತ ಕಂಡಿದೆ. ಅದರಲ್ಲಿಯೂ ಗ್ರಾಮೀಣ ಭಾಗಗಳಲ್ಲಿ ಗಣನೀಯ ಪ್ರಮಾಣದಲ್ಲಿ ಬಡತನ ಇಳಿಕೆಯಾಗಿದೆ
  • ನಗರ ಭಾರತಕ್ಕೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಬಡತನ ಇಳಿಕೆ ಅಧಿಕ ಪ್ರಮಾಣದಲ್ಲಿ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 2011ರಲ್ಲಿ ಶೇ 26.3ರಷ್ಟಿದ್ದ ಬಡತನ ದರ, 2019ರಲ್ಲಿ ಶೇ 11.6ಕ್ಕೆ ತಗ್ಗಿದೆ. ಹಾಗೆಯೇ ನಗರ ಪ್ರದೇಶಗಳಲ್ಲಿ ಶೇ 14.2ರಷ್ಟಿದ್ದ ಬಡತನವು 2019ರ ವೇಳೆಗೆ ಶೇ 6.3ಕ್ಕೆ ಕುಸಿದಿದೆ ಎಂದು ಅದು ತಿಳಿಸಿದೆ.
  • “2011- 2019ರ ಅವಧಿಯಲ್ಲಿ ಗ್ರಾಮೀಣ ಮತ್ತು ನಗರ ಬಡತನವು ಕ್ರಮವಾಗಿ ಶೇ 14.7 ಮತ್ತು ಶೇ 7.9ರಷ್ಟು ಇಳಿಕೆಯಾಗಿದೆ” ಎಂದು ವಿಶ್ವ ಬ್ಯಾಂಕ್‌ ಸಮೀಕ್ಷೆಯ ವರದಿ ‘ಭಾರತದಲ್ಲಿನ ಬಡತನ ಕಳೆದ ಒಂದು ದಶಕದಲ್ಲಿ ಇಳಿಕೆಯಾಗಿದೆ, ಆದರೆ ಈ ಹಿಂದೆ ಅಂದುಕೊಂಡಷ್ಟರ ಮಟ್ಟಿಗೆ ಅಲ್ಲ’ ಎಂದು ತಿಳಿಸಿದೆ.
  • ಅರ್ಥಶಾಸ್ತ್ರಜ್ಞರಾದ ಸುತೀರ್ಥ ಸೇನ್ ರಾಯ್ ಮತ್ತು ರಾಯ್ ವ್ಯಾನ್ ಡೆರ್ ವೀಡೆ ಅವರು ಜಂಟಿಯಾಗಿ ಈ ವರದಿ ಬರೆದಿದ್ದಾರೆ.
  • ವಿಶ್ವ ಬ್ಯಾಂಕ್ ನೀತಿ ಸಂಶೋಧನಾ ಸಮೀಕ್ಷೆ ವರದಿಯು ಅಭಿವೃದ್ಧಿ ಕುರಿತಾದ ಆಲೋಚನೆಗಳನ್ನು ವಿನಿಮಯ ಮಾಡಲು ಉತ್ತೇಜನ ನೀಡುವ ಮತ್ತು ಸಂಶೋಧನೆಯ ಪ್ರಗತಿಯಲ್ಲಿ ಕಂಡುಕೊಂಡ ಅಂಶಗಳನ್ನು ತ್ವರಿತವಾಗಿ ಪ್ರಸಾರ ಮಾಡುವ ಗುರಿ ಹೊಂದಿದೆ.
  • ಅಧ್ಯಯನದ ಪ್ರಕಾರ, ಸಣ್ಣ ಪ್ರಮಾಣದ ಜಮೀನು ಹೊಂದಿರುವ ರೈತರು ಅಧಿಕ ಆದಾಯ ಬೆಳವಣಿಗೆ ಕಂಡಿದ್ದಾರೆ. “ಅತಿ ಚಿಕ್ಕ ಭೂಮಿಗಳನ್ನು ಹೊಂದಿರುವ ರೈತರ ವಾಸ್ತವ ಆದಾಯಗಳು 2013 ಮತ್ತು 2019ರ ಎರಡು ಸಮೀಕ್ಷೆ ಸುತ್ತುಗಳ ಅವಧಿ ನಡುವೆ ಶೇ 10ರಷ್ಟು ವಾರ್ಷಿಕ ಬೆಳವಣಿಗೆ ಕಂಡಿವೆ. ಅತಿ ದೊಡ್ಡ ಭೂಮಿ ಹೊಂದಿರುವ ರೈತರ ಆದಾಯವು ಶೇ 2ರಷ್ಟು ಹೆಚ್ಚಳವಾಗಿದೆ”
  • ವಿಶ್ವ ಬ್ಯಾಂಕ್‌ನ ಸಂಶೋಧನಾ ವರದಿ ಪ್ರಕಾರ, ಭಾರತದ ನಗರ ಬಡತನ 2016ರಲ್ಲಿ ಶೇ 2ರಷ್ಟು ಹೆಚ್ಚಳವಾಗಿತ್ತು. ಇದಕ್ಕೆ ಅಪನಗದೀಕರಣ ಕಾರಣವಾಗಿತ್ತು. 2019ರಲ್ಲಿ ಗ್ರಾಮೀಣ ಬಡತನ 10 ಮೂಲ ಅಂಶಗಳಷ್ಟು ಏರಿಕೆಯಾಗಿತ್ತು. ಆರ್ಥಿಕ ನಿಧಾನಗತಿ ಇದಕ್ಕೆ ಕಾರಣವಾಗಿತ್ತು
  • ಈ ವರದಿಯು ಅನುಭೋಗ ಅಸಮಾನತೆ ಬಗ್ಗೆ ಕುಡ ಮಾತನಾಡಿದೆ. “2011ರಿಂದ ಅನುಭೋಗ ಅಸಮಾನತೆಯಲ್ಲಿ ಅಲ್ಪ ಬದಲಾವಣೆಯನ್ನು ನಾವು ಗಮನಿಸಿದ್ದೇವೆ. ಆದರೆ ಬಿಡುಗಡೆಯಾಗದ 2017ರ ಎನ್‌ಎಸ್‌ಎಸ್‌ಒ ಸಮೀಕ್ಷೆಯಲ್ಲಿ ವರದಿ ಮಾಡಿದ್ದಕ್ಕಿಂತ ಕಡಿಮೆ ಇದೆ. 2015- 2019ರ ಅವಧಿಯಲ್ಲಿ ರಾಷ್ಟ್ರೀಯ ಲೆಕ್ಕ ಅಂಕಿ ಅಂಶದಲ್ಲಿ ವರದಿಯಾದ ವೆಚ್ಚದ ಖಾಸಗಿ ಅಂತಿಮ ಅನುಭೋಗದ ಬೆಳವಣಿಗೆ ಆಧಾರದಲ್ಲಿನ ಹಿಂದಿನ ಲೆಕ್ಕಾಚಾರಗಳಿಗಿಂತ ಬಡತನ ಇಳಿಕೆಯು ಕಡಿಮೆ ಇದೆ” ಎಂದು ಹೇಳಿದೆ.

ವರದಿಯ ಮಹತ್ವ

  • ಭಾರತವು ಇತ್ತೀಚಿನ ಅವಧಿಯಲ್ಲಿ ಬಡತನ ಕುರಿತಾದ ಅಧಿಕೃತ ಅಂದಾಜು ಹೊಂದಿಲ್ಲದ ಕಾರಣ ವಿಶ್ವ ಬ್ಯಾಂಕ್ ವರದಿಯು ಬಹಳ ಮುಖ್ಯವಾಗಿದೆ. ಕೊನೆಯ ಬಾರಿ ಬಡತನ ಪ್ರಮಾಣದ ವರದಿಯನ್ನು 2011ರಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (ಎನ್‌ಎಸ್‌ಎಸ್‌ಒ) ಬಿಡುಗಡೆ ಮಾಡಿತ್ತು. ಆ ಸಂದರ್ಭದಲ್ಲಿ ಸರ್ಕಾರ ಕೂಡ ಬಡತನ ಮತ್ತು ಅಸಮಾನತೆಯ ಅಧಿಕೃತ ಅಂದಾಜು ಬಿಡುಗಡೆ ಮಾಡಿತ್ತು.