Published on: August 3, 2023

‘ಲೋಕ ಸ್ಪಂದನ’ ಕ್ಯೂಆರ್ ಕೋಡ್

‘ಲೋಕ ಸ್ಪಂದನ’ ಕ್ಯೂಆರ್ ಕೋಡ್

ಸುದ್ದಿಯಲ್ಲಿ ಏಕಿದೆ?  ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರ ಕಾರ್ಯ ವೈಖರಿ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ‘ಲೋಕ ಸ್ಪಂದನ’ ಕ್ಯೂಆರ್ ಕೋಡ್ ವ್ಯವಸ್ಥೆ ರೂಪಿಸಲಾಗಿದೆ.

ಏನಿದು ವ್ಯವಸ್ಥೆ?

  • ‘ಠಾಣೆಗೆಹೋದ ಸಂದರ್ಭದಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಎಫ್ಐಆರ್ ದಾಖಲಿಸಲು ಸತಾಯಿಸುತ್ತಾರೆ. ಕೆಲವರು ಹಣ ಹೇಳುತ್ತಾರೆ. ಹೀಗಾಗಿ, ಪೊಲೀಸರ ವರ್ತನೆಯಿಂದ ನೋವು ಉಂಟಾಗುತ್ತಿದೆ’ ಎಂಬುದು ಬಹುತೇಕ ಸಾರ್ವಜನಿಕರ ಅಭಿಪ್ರಾಯವಾಗಿತ್ತು. ಜನರ ಸಮಸ್ಯೆ ಆಲಿಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದ ಬೆಂಗಳೂರು ಬಂಡೇ ಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್, ತಮ್ಮ ಠಾಣೆಯಲ್ಲಿ ‘ದರ್ಪಣ’ ಕ್ಯೂಆರ್ ಕೋಡ್ ವ್ಯವಸ್ಥೆ ರೂಪಿಸಿದ್ದರು. ಠಾಣೆಗೆ ಬರುವ ಜನ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಿಬ್ಬಂದಿ ವರ್ತನೆ ವಿರುದ್ಧ ದೂರು ನೀಡಲಾರಂಭಿಸಿದ್ದರು. ಇದರಿಂದ ಎಚ್ಚೆತ್ತ ಸಿಬ್ಬಂದಿ, ಅಮಾನತಾಗುವ ಭಯದಲ್ಲಿ ಜನರ ಜೊತೆ ಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ವ್ಯವಸ್ಥೆ ಯಶಸ್ವಿಯಾದ್ದರಿಂದ ಇದೇ ವ್ಯವಸ್ಥೆಯನ್ನು ‘ಪ್ರತಿಯೊಂದು ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗುತ್ತಿದೆ ದರ್ಪಣ ವ್ಯವಸ್ಥೆಯನ್ನು ‘ಲೋಕ ಸ್ಪಂದನ’ ಎಂಬುದಾಗಿ ನಾಮಕರಣ ಮಾಡಲಾಗಿದೆ.

ವ್ಯವಸ್ಥೆ ಬಳಕೆ ಹೇಗೆ:

  • ಪೊಲೀಸ್ ಠಾಣೆ ಹಾಗೂ ಅಧಿಕಾರಿಗಳ ಕಚೇರಿಯ ಪ್ರವೇಶ ದ್ವಾರದಲ್ಲಿ ‘ಲೋಕ ಸ್ಪಂದನ’ ಕ್ಯೂಆರ್ ಕೋಡ್ ಅಳವಡಿಸಲಾಗಿರುತ್ತದೆ. ಠಾಣೆ ಹಾಗೂ ಕಚೇರಿಗೆ ಹೋದ ಸಂದರ್ಭದಲ್ಲಿ ಜನರು, ತಮ್ಮ ಮೊಬೈಲ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಆಗಲೇ ಪ್ರತ್ಯೇಕ ಲಿಂಕ್ ತೆರೆದುಕೊಳ್ಳುತ್ತದೆ. ಹೆಸರು ಹಾಗೂ ವಿಳಾಸ ನಮೂದಿಸಬೇಕು. ಯಾವ ಕೆಲಸಕ್ಕೆ ಬಂದಿದ್ದಿರಾ? ಸಿಬ್ಬಂದಿ ವರ್ತನೆ ಹೇಗಿತ್ತು? ನಿಮ್ಮ ಸಮಸ್ಯೆ ಆಲಿಸಿದ್ದಾರೆಯೇ? ಏನಾದರೂ ದೂರು ನೀಡಬೇಕು? ಎಂಬಿತ್ಯಾದಿ ಮಾಹಿತಿಯನ್ನು ಜನರು ಭರ್ತಿ ಮಾಡಬೇಕು. ಜನರ ಅಭಿಪ್ರಾಯಗಳು, ಆಯಾ ಜಿಲ್ಲೆಯ ಎಸ್ಪಿ, ಕಮಿಷನರೇಟ್ ವ್ಯಾಪ್ತಿಯ ಡಿಸಿಪಿಗಳಿಗೆ ಹೋಗುತ್ತವೆ. ಏನಾದರೂ ಗಂಭೀರ ದೂರುಗಳಿದ್ದರೆ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಿದ್ದಾರೆ.