Published on: May 11, 2023

ವಿಶ್ವ ರೆಡ್‌ ಕ್ರಾಸ್‌ ದಿನ

ವಿಶ್ವ ರೆಡ್‌ ಕ್ರಾಸ್‌ ದಿನ

ಸುದ್ದಿಯಲ್ಲಿ ಏಕಿದೆ? ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಮೇ 8 ರಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ..

2023 ರ ವಿಷಯ: ನಾವು ಮಾಡುವ ಪ್ರತಿಯೊಂದೂ ಕಾರ್ಯವು ಹೃದಯದಿಂದ ಬರುತ್ತದೆ.” ಇದು ತಮ್ಮ ಸುತ್ತಲಿನ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಮೊದಲು ತಲುಪುವ  “ಪಕ್ಕದ ಮನೆಯ ವ್ಯಕ್ತಿ” ಸೇರಿದಂತೆ ಸಮುದಾಯಗಳಲ್ಲಿನ ವ್ಯಕ್ತಿಗಳನ್ನು ಗೌರವಿಸುವ ಗುರಿಯನ್ನು ಹೊಂದಿದೆ.

ಉದ್ದೇಶ

  • ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ನಂಬಿಕೆಗಳು ಮತ್ತು ತತ್ವಗಳನ್ನು ಗೌರವಿಸಲು ‘ವಿಶ್ವ ರೆಡ್​ ಕ್ರಾಸ್ ದಿನ’ ಈ ದಿನವನ್ನು ಆಚರಿಸಲಾಗುತ್ತದೆ. ಅಗತ್ಯವಿರುವ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸ್ವಯಂಸೇವಕರು ಮತ್ತು ಕಾರ್ಮಿಕರ ಕೊಡುಗೆಯನ್ನು ಈ ದಿನದಂದು ಸ್ಮರಿಸಲಾಗುತ್ತದೆ.
  • ಮೊದಲ ಆಚರಣೆ : ವಿಶ್ವ ರೆಡ್ ಕ್ರಾಸ್ ದಿನ’ವನ್ನು ‘ರೆಡ್ ಕ್ರೆಸೆಂಟ್ ಡೇ’ ಎಂದೂ ಕರೆಯುತ್ತಾರೆ. ಈ ದಿನವನ್ನು 1948 ರಲ್ಲಿಮೊದಲ ಬಾರಿಗೆ ಆಚರಿಸಲಾಯಿತು.

ಇತಿಹಾಸ ಮತ್ತು ಸ್ಥಾಪಕರು

  • ವಿಶ್ವ ರೆಡ್‌ ಕ್ರಾಸ್‌ ಸಂಸ್ಥೆಯನ್ನು ಹೆನ್ರಿ ಡ್ಯೂನಾಂಟ್‌ ಎಂಬುವರು 1863ರಲ್ಲಿ ಹುಟ್ಟು ಹಾಕಿದರು. 1859ರಲ್ಲಿ ಇಟಲಿ, ಫ್ರಾನ್ಸ್‌ ಹಾಗೂ ಆಸ್ಟ್ರೀಯ ದೇಶಗಳ ನಡುವೆ ನಡೆದ ‘ಸಲ್ಫರಿನೊ’ ಯುದ್ಧದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ವಯಂ ಸೇವಾ ಸಂಸ್ಥೆಯಾದ ರೆಡ್‌ ಕ್ರಾಸ್‌ ಅನ್ನು ಸ್ಥಾಪಿಸಿದರು. ನಂತರ ಇದು ಅಂತಾರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆ, ಅಂತಾರಾಷ್ಟ್ರೀಯ ರೆಡ್‌ ಕ್ರಾಸ್‌ ಒಕ್ಕೂಟ ಹಾಗೂ ರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆಯಾಗಿ ಇಡೀ ಪ್ರಪಂಚದಾದ್ಯಂತ ಸ್ಥಾಪನೆಯಾಯಿತು.
  • ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್‌ಕ್ರಾಸ್‌ನ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಜನಿಸಿದ್ದು 1828ರ ಮೇ 8ರಂದು. ಅವರು ತಮ್ಮ ಕೆಲಸಗಳಿಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸಹ ಪಡೆದಿದ್ದರು. ರೆಡ್‌ಕ್ರಾಸ್ ಒಂದು ಸ್ವತಂತ್ರ ಮಾನವೀಯ ಸಂಸ್ಥೆಯಾಗಿದ್ದು ಅದು ಸಶಸ್ತ್ರ ಸಂಘರ್ಷ ಮತ್ತು ಇತರ ಹಿಂಸಾಚಾರದ ಸಂತ್ರಸ್ತರಿಗೆ ಸಹಾಯ ಮತ್ತು ರಕ್ಷಣೆ ನೀಡುತ್ತದೆ. ಯುದ್ಧ ಸೇರಿದಂತೆ ಕಷ್ಟದ ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ಮಾನವೀಯ ನೆರವು ನೀಡುವುದು ರೆಡ್​ ಕ್ರಾಸ್​ನ ಧ್ಯೇಯೋದ್ದೇಶಗಳಲ್ಲಿ ಒಂದು.

ಕಾರ್ಯಗಳು: ರೆಡ್ ಕ್ರಾಸ್ ಆಂದೋಲನವು ಪ್ರಪಂಚದಾದ್ಯಂತದ ಪ್ರತಿಯೊಂದು ದೇಶದಲ್ಲಿ ರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳನ್ನು ಸೇರಿಸಲು ವಿಸ್ತರಿಸಿದೆ. ಈ ಸಂಸ್ಥೆಗಳು ವಿಪತ್ತು ಪರಿಹಾರ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಬೆಂಬಲ ಸೇರಿದಂತೆ ವ್ಯಾಪಕ ಶ್ರೇಣಿಯ ಮಾನವೀಯ ಸೇವೆಗಳನ್ನು ಒದಗಿಸುತ್ತವೆ.

ರೆಡ್‌ಕ್ರಾಸ್‌ ಲಾಂಛನ

  • ಬಿಳಿ ಬಣ್ಣದ ಹಿನ್ನೆಲೆಯ ಮೇಲೆ ಕೆಂಪು ಕ್ರಾಸ್‌ ಹೊಂದಿರುವ ಲಾಂಛನವು ರೆಡ್‌ ಕ್ರಾಸ್‌ ಸಂಸ್ಥೆಯ ಸಂಕೇತ ಚಿಹ್ನೆಯಾಗಿದೆ. ಕ್ರಾಸ್‌ನ ಎಲ್ಲ ಬಾಹುಗಳು ಪರಸ್ಪರ ಸಮವಾಗಿವೆ. ಈ ಚಿಹ್ನೆಯನ್ನು ಯುದ್ಧ ತಟಸ್ಥ ಸಂಕೇತವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತದೆ. ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನವನ್ನು ಬಳಸಬಹುದಾಗಿದೆ. ಯುದ್ಧಕಾಲದಲ್ಲಿ, ಸೇನಾ ದಂಗೆಯ ಸಮಯದಲ್ಲಿ, ಅಗತ್ಯವಿರುವ ಸೇವೆ, ಉಪಕಾರ ಮತ್ತು ತುರ್ತು ವೈದ್ಯಕೀಯ ನೆರವು ಇತ್ಯಾದಿಗಳನ್ನು ಒದಗಿಸುವಾಗ, ಈ ಸೇವಾ ಕಾರ್ಯದಲ್ಲಿ ತೊಡಗಿರುವರು. ಯುದ್ಧದಿಂದ ಹೊರತಾದವರು ಎಂಬ ಸಂಕೇತವನ್ನು ಈ ಲಾಂಛನದಿಂದ ಸೂಚಿಸುತ್ತದೆ.

ಆಚರಣೆ:

  • ವಿಶ್ವ ರೆಡ್ ಕ್ರಾಸ್ ದಿನದಂದು, ರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳು, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್ (IFRC), ಮತ್ತು ICRC ಯಿಂದ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಈ ಚಟುವಟಿಕೆಗಳು ರಕ್ತದಾನ, ಪ್ರಥಮ ಚಿಕಿತ್ಸಾ ತರಬೇತಿ, ನಿಧಿಸಂಗ್ರಹಣೆ ಅಭಿಯಾನಗಳು, ಸಾರ್ವಜನಿಕ ಜಾಗೃತಿ ಅಭಿಯಾನಗಳು ಮತ್ತು ಅತ್ಯುತ್ತಮ ಸ್ವಯಂಸೇವಕರ ಗುರುತಿಸುವಿಕೆ ಮತ್ತು ಮಾನವೀಯ ಸಾಧನೆಗಳನ್ನು ಒಳಗೊಂಡಿರಬಹುದು.

ಮೂಲತತ್ತ್ವಗಳು

  • ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಣೆ ನಡೆಸುವ ರೆಡ್‌ಕ್ರಾಸ್‌ ಸಂಸ್ಥೆಯ ಮೂಲ ಧ್ಯೇಯಗಳೆಂದರೆ ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥೆ, ಸ್ವಾತಂತ್ರ್ಯ, ಏಕತೆಯಾಗಿದೆ.

ಭಾರತದಲ್ಲಿ ರೆಡ್‌ಕ್ರಾಸ್‌

  • ಭಾರತದಲ್ಲಿ ಶಾಸನಸಭೆಯ ವಿಧೇಯಕದ ಪ್ರಕಾರ 1920ರಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಆರಂಭವಾಯಿತು. ಇದರ ಕೇಂದ್ರ ಕಚೇರಿ ಹೊಸದಿಲ್ಲಿಯಲ್ಲಿದ್ದು, ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. 1921ರಲ್ಲಿ ಕರ್ನಾಟಕದ ಶಾಖೆ ಆರಂಭವಾಯಿತು. ಸಂಸ್ಥೆಯು ಪ್ರಕೃತಿ ವಿಕೋಪ, ಆರೋಗ ಕಾರ‍್ಯಕ್ರಮಗಳಲ್ಲಿ ಸಕ್ರಿಯ ಸೇವೆ ಒದಗಿಸುತ್ತಿದೆ.