Published on: November 4, 2022

ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್ ಡಿವೈಸ್

ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್ ಡಿವೈಸ್

ಸುದ್ದಿಯಲ್ಲಿ ಏಕಿದೆ? 

ಹೆದ್ದಾರಿಗಳಲ್ಲಿ ಅಪಘಾತಗಳು, ವಾಹನಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಘಟನೆಗಳನ್ನು ತಪ್ಪಿಸಲು ಶಾಲಾ ವಾಹನಗಳೂ ಸೇರಿದಂತೆ ಸುಮಾರು 6.87 ಲಕ್ಷ ಸಾರ್ವಜನಿಕ ಸಾರಿಗೆ ವಾಹನಗಳಿಗೆ ವಾಹನ ಚಲನೆ ನಿಗಾ ಉಪಕರಣಗಳು (ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್ ಡಿವೈಸ್) ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸಲು ಸರ್ಕಾರ ತೀರ್ಮಾನಿಸಿದೆ.

ಮುಖ್ಯಾಂಶಗಳು

  • ಕೇಂದ್ರ ಸಹಭಾಗಿತ್ವದ ಈ ಯೋಜನೆಗೆ ₹30 ಕೋಟಿ ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
  • ಇದಕ್ಕೆ ಕೇಂದ್ರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40 ರಷ್ಟು ಅನುದಾನ ನೀಡುತ್ತದೆ.
  • ರಾಜ್ಯದ ಸಾರ್ವಜನಿಕ ಸಾರಿಗೆ ಸೇವೆಯಲ್ಲಿರುವ ಬಸ್‌ಗಳು, ಕ್ಯಾಬ್‌, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಸೇರಿ ವಿವಿಧ ರೀತಿಯ ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೆ ಈ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸಲಾಗುವುದು.
  • ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದ್ದು,ಅದರ ಪ್ರಕಾರ ಎಲ್ಲ ರಾಜ್ಯಗಳಿಗೂ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಲು ನೆರವು ನೀಡುತ್ತಿದೆ. ಇದಕ್ಕೆ ಕ್ಲೌಡ್‌ ಸರ್ವಿಸ್‌ ಸೇವೆಯನ್ನೂ ಕೇಂದ್ರವೇ ನೀಡುತ್ತದೆ.

ಪ್ರಯೋಜನ :

  • ವಾಹನಗಳು ನಿಗದಿತ ವೇಗದಲ್ಲಿ ಮತ್ತು ನಿಗದಿತ ರಸ್ತೆಯಲ್ಲಿ ಸಾಗುತ್ತಿದೆಯೇ? ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲ್ಲಿಸಿದ್ದಾರೆಯೇ? ವಾಹನ ಸಂಚಾರದಲ್ಲಿ ಅನಗತ್ಯ ವಿಳಂಬವಾಗುತ್ತಿದೆಯೇ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆಯೇ ಮುಂತಾದ ಚಟುವಟಿಕೆಗಳನ್ನು ನಿಯಂತ್ರಣ ಕೊಠಡಿಗಳಿಂದ ಗಮನಿಸಲಾಗುವುದು ಮತ್ತು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
  • ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳು ವೇಗದಲ್ಲಿ ಚಲಿಸಿ ಅಪಘಾತಕ್ಕೆ ಕಾರಣವಾಗುತ್ತಿವೆ. ಇಂತಹ ಅಪಘಾತಗಳನ್ನು ನಿಯಂತ್ರಿಸಲು ವಾಹನಗಳು ಸಂಚರಿಸುತ್ತಿರುವ ಹಾದಿಯ ಮೇಲೆ ಕಣ್ಣಿಟ್ಟು ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಿದೆ.