Published on: August 31, 2023

ಸ್ಮಾರ್ಟ್‌ ಸಿಟಿ ಪ್ರಶಸ್ತಿ

ಸ್ಮಾರ್ಟ್‌ ಸಿಟಿ ಪ್ರಶಸ್ತಿ

ಸುದ್ದಿಯಲ್ಲಿ ಏಕಿದೆ? ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯವು ಪ್ರಶಸ್ತಿಗಳ ಪಟ್ಟಿಯನ್ನು  ಪ್ರಕಟಿಸಿದೆ. ಸತತ ಆರನೇ ಬಾರಿಯೂ ಮಧ್ಯಪ್ರದೇಶದ ಇಂದೋರ್‌ ನಗರಕ್ಕೆ 2022ನೇ ಸಾಲಿನ ರಾಷ್ಟ್ರೀಯ ಸ್ಮಾರ್ಟ್‌ ಸಿಟಿಗಳ ಪೈಕಿ ಮೊದಲ ಸ್ಥಾನ ನೀಡಲಾಗಿದೆ.

ಮುಖ್ಯಾಂಶಗಳು

  • ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯವು ಇಂಡಿಯಾ ಸ್ಮಾರ್ಟ್‌ ಸಿಟೀಸ್‌ ಅವಾರ್ಡ್‌ ಕಾಂಟೆಸ್ಟ್‌ (ಐಎಸ್‌ಎಸಿ) ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, ಇಂದೋರ್‌ ನಗರವು ದೇಶದ 100 ಸ್ಮಾರ್ಟ್‌ ಸಿಟಿಗಳ ಪೈಕಿ ಮೊದಲ ಸ್ಥಾನ ಗಳಿಸಿದೆ.
  • 2ನೇ ಸ್ಮಾರ್ಟ್‌ ಸಿಟಿ ಎಂಬ ಹೆಗ್ಗಳಿಕೆಗೆ ಗುಜರಾತ್‌ನ ಸೂರತ್‌ ಮತ್ತು 3ನೇ ಸ್ಥಾನವನ್ನು ಉತ್ತರಪ್ರದೇಶದ ಆಗ್ರಾ ಪಡೆದಿದೆ.
  • ‘ಉತ್ತಮ ಮಾದರಿ ರಸ್ತೆ’ ನಿರ್ಮಾಣಕ್ಕಾಗಿ ‘ಉತ್ತಮ ವಾತಾವರಣ ನಿರ್ಮಾಣ’ ವಿಭಾಗದಲ್ಲಿ ಕೊಯಮತ್ತೂರ್ ಉತ್ತಮ ಸಿಟಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
  • ಆರ್ಥಿಕತೆಯ ವಿಭಾಗದಲ್ಲಿ ಜಬಲ್ಪುರ ಮೊದಲ ಸ್ಥಾನ ಪಡೆದಿದ್ದರೆ, ಎರಡು ಹಾಗೂ ಮೂರನೇ ಸ್ಥಾನವನ್ನು ಇಂದೋರ್ ಹಾಗೂ ಲಕ್ನೋ ಪಡೆದಿವೆ. ‘ಪಬ್ಲಿಕ್ ಬೈಕ್ ಶೇರಿಂಗ್ ಜೊತೆಗೆ ಸೈಕಲ್ ಟ್ರ್ಯಾಕ್’ಗೆ ಚಲನಶೀಲತೆಯ ವಿಭಾಗದಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಚಂಢೀಗಡ ಪಡೆದುಕೊಂಡಿದೆ.
  • ‘ಗಾಳಿಯ ಗುಣಮಟ್ಟ ಅಭಿವೃದ್ಧಿ ಹಾಗೂ ಅಹಿಲ್ಯಾ ವಾನ್ ಮತ್ತು ವರ್ಟಿಕಲ್ ಗಾರ್ಡನ್’ ಕಾರಣಕ್ಕಾಗಿ ‘ನಗರ ಎನ್ವಿರಾನ್ ಮೆಂಟ್’ ವಿಭಾಗದಲ್ಲಿ ಇಂದೋರ್ಗೆ ಮತ್ತೊಂದು ಉತ್ತಮ ಸಿಟಿ ಪ್ರಶಸ್ತಿಯೂ ಲಭಿಸಿದೆ.
  • ಸಂರಕ್ಷಣಾ ಸ್ಥಳದ ಅಭಿವೃದ್ಧಿ ಹಾಗೂ ಹಳೆಯ ನಗರಗಳಿಗೆ ಇ-ಆಟೋ ಪೂರೈಕೆ ಉಪಕ್ರಮಕ್ಕೆ ಶಿವಮೊಗ್ಗ ಹಾಗೂ ಜಮ್ಮು ಮತ್ತು ಕಾಶ್ಮೀ ರ ಪ್ರಶಸ್ತಿ ಪಡೆದಿವೆ.

ಮಧ್ಯಪ್ರದೇಶ ಬೆಸ್ಟ್‌ ರಾಜ್ಯ

  • ಸ್ಮಾರ್ಟ್‌ ಸಿಟಿ ಮಿಷನ್‌ ಅಡಿಯಲ್ಲಿ ವಿಶಿಷ್ಟ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿ ಮಾಡಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶಕ್ಕೆ ‘ಬೆಸ್ಟ್‌ ಸ್ಟೇಟ್‌ ಅವಾರ್ಡ್‌’ ಸಿಕ್ಕಿದೆ. 2022ರ ಸ್ವಚ್ಛ ಸರ್ವೇಕ್ಷಣ ಯೋಜನೆ ಅಡಿಯಲ್ಲಿ ಸ್ವಚ್ಛ ರಾಜ್ಯ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಪಾತ್ರವಾಗಿತ್ತು. ಉತ್ತಮ ರಾಜ್ಯಗಳ ಸಾಲಿನಲ್ಲಿ ತಮಿಳುನಾಡು 2ನೇ ಸ್ಥಾನ, ರಾಜಸ್ಥಾನ ಮತ್ತು ಉತ್ತರಪ್ರದೇಶ 3ನೇ ಸ್ಥಾನವನ್ನು ಹಂಚಿಕೊಂಡಿವೆ.

ಕೇಂದ್ರಾಡಳಿತ ಪ್ರದೇಶಗಳ ಸ್ಥಿತಿ

  • ಕೇಂದ್ರಾಡಳಿತ ಪ್ರದೇಶಗಳ ಪೈಕಿ ‘ಬೆಸ್ಟ್‌ ಯೂನಿಯನ್‌ ಟೆರಿಟರಿ’ ಪ್ರಶಸ್ತಿಯನ್ನು ಚಂಡೀಗಢ ಪಡೆದುಕೊಂಡಿದೆ. 96 ನಾಗರಿಕ ಸೇವೆಗಳನ್ನು ಇ-ಆಡಳಿತದ ಮೂಲಕ ಪರಿಣಾಮಕಾರಿಯಾಗಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಚಂಡೀಗಢ ಆಡಳಿತಕ್ಕೆ ಈ ಪ್ರಶಸ್ತಿ ನೀಡಲಾಗಿದೆ.

ಕರ್ನಾಟಕದ ಸ್ಥಿತಿ

  • ನಗರ ಪರಿಸರ ಅಭಿವೃದ್ಧಿ ವಿಭಾಗದಲ್ಲಿ ಶಿವಮೊಗ್ಗ ನಗರಕ್ಕೆ (ಕನ್ಸರ್ವೆನ್ಸಿಗಳ ಅಭಿವೃದ್ಧಿ) ಪ್ರಶಸ್ತಿ ಲಭಿಸಿದೆ.
  • ಇನ್ನೋವೇಟಿಂಗ್‌ ಇಂಡಿಯಾ ಪ್ರಶಸ್ತಿಗೆ (ಒಳಚರಂಡಿ ನವೀಕರಣ) ಹುಬ್ಬಳ್ಳಿ-ಧಾರವಾಡ ಭಾಜನವಾಗಿದೆ.
  • ದಕ್ಷಿಣ ವಲಯದಲ್ಲಿ ಝೋನಲ್‌ ಬೆಸ್ಟ್‌ ಸ್ಮಾರ್ಟ್‌ ಸಿಟಿ ಪ್ರಶಸ್ತಿಗೆ ಬೆಳಗಾವಿ ಭಾಜನವಾಗಿದೆ.

ಸ್ಮಾರ್ಟ್‌ ಸಿಟೀಸ್‌ ಮಿಷನ್‌

  • ಜೂನ್ 25, 2015ರಂದು ಸ್ಮಾರ್ಟ್ ಸಿಟಿ ಮಿಷನ್ ಲೋಕಾರ್ಪಣೆಗೊಂಡಿದೆ. ಇದರ ಮುಖ್ಯ ಉದ್ದೇಶ ಮೂಲಸೌಕರ್ಯಗಳನ್ನು ಒದಗಿಸುವುದು, ಸ್ವಚ್ಛತೆ ಹಾಗೂ ಸುಸ್ಥಿರ ವಾತಾವರಣ ಮತ್ತು ಜನರಿಗೆ ಉತ್ತಮ ಗುಣಮಟ್ಟದ ಜೀವನವನ್ನು ತ್ವರಿತ ಪರಿಹಾರದ ಮೂಲಕ ನೀಡುವುದಾಗಿದೆ.
  • ಮಾದರಿ ಬದಲಾವಣೆಯ ಮೂಲಕ ದೇಶದಲ್ಲಿ ನಗರದ ಅಭಿವೃದ್ಧಿಯನ್ನು ಉತ್ತಮಗೊಳಿಸುವುದು ಈ ಪಾರದರ್ಶಕ ಮಿಷನ್ನ ಉದ್ದೇಶವಾಗಿದೆ. ಇಲ್ಲಿಯವರೆಗೆ ಮಿಷನ್ನ ಅಡಿಯಲ್ಲಿ ರೂ. 1, 10,365 ಕೋಟಿ ವೆಚ್ಚದಲ್ಲಿ 6,041 ಯೋಜನೆಗಳು ಸಂಪೂರ್ಣಗೊಂಡಿವೆ. ಜೂನ್ 30, 2024ರ ವೇಳೆಗೆ 60, 095 ಕೋಟಿ ಮೌಲ್ಯದ 1,894 ಯೋಜನೆಗಳು ಪೂರ್ಣಗೊಳ್ಳಲಿವೆ.