Published on: March 23, 2023

ಹಸುಗಳಿಗೂ ಬಾಡಿಗೆ ತಾಯಿ ಪದ್ಧತಿ

ಹಸುಗಳಿಗೂ ಬಾಡಿಗೆ ತಾಯಿ ಪದ್ಧತಿ

ಸುದ್ದಿಯಲ್ಲಿ ಏಕಿದೆ? ಬಾಡಿಗೆ ತಾಯಿ ವೈದ್ಯಕೀಯ ಪದ್ಧತಿಯನ್ನು ಈಗ ಹಸುಗಳ ಮೇಲೆಯೂ ಪ್ರಯೋಗಿಸಲಾಗಿದ್ದು, ಉತ್ತರ ಪ್ರದೇಶ ಹಸುಗಳಲ್ಲಿ ಬಾಡಿಗೆ ತಾಯ್ತನದ ಸಂಶೋಧನೆಯಿಂದ 26 ಆಕಳು ಕರುಗಳು ಜನ್ಮ ನೀಡಿವೆ.

ಮುಖ್ಯಾಂಶಗಳು

  • ಉತ್ತರ ಪ್ರದೇಶದ ಬರೇಲಿಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಪರೂಪದ ಸಂಶೋಧನೆಯನ್ನು ನಡೆಸಿ ಯಶಸ್ಸು ಕಂಡಿದ್ದಾರೆ.
  • ಹಸುಗಳಲ್ಲಿ ಬಾಡಿಗೆ ತಾಯ್ತನದ ವಿಧಾನವನ್ನು ಪರೀಕ್ಷಿಸುವ ಮೂಲಕ ಉತ್ಕೃಷ್ಟ ತಳಿಗಳ ಸಂತಾನೋತ್ಪತ್ತಿಗೆ ಹೊಸ ಮಾರ್ಗ ಕಂಡುಕೊಳ್ಳಲಾಗಿದೆ.
  • 2018ರಲ್ಲಿ ಶುರುವಾದ ಸಂಶೋಧನೆಯಿಂದ ಬಾಡಿಗೆ ತಾಯ್ತನದ ವಿಧಾನದ ಮೂಲಕ ಈವರೆಗೂ 26 ಆಕಳು ಕರುಗಳು ಜನ್ಮ ಪಡೆದಿವೆ.

ಉದ್ದೇಶ   

  • ಹಸುಗಳಲ್ಲಿ ಬಾಡಿಗೆ ತಾಯ್ತನದ ವಿಧಾನದ ಮೂಲಕ ಭವಿಷ್ಯದಲ್ಲಿ ಹೆಚ್ಚು ಹಾಲು ಕೊಡುವ ಕರುಗಳು ಜನ್ಮತಾಳುವಂತೆ ಮಾಡಿದೆ.

ಭ್ರೂಣ ಸೃಷ್ಟಿ ಹೇಗೆ?

  • ಉತ್ತಮ ತಳಿಯ ಎತ್ತಿನಿಂದ ವೀರ್ಯವನ್ನು ಪಡೆದು, ಆಯ್ಕೆ ಮಾಡಿದ ಹೆಚ್ಚು ಹಾಲು ಕೊಡುತ್ತಿರುವ ಹಸುವಿನಿಂದ ಅಂಡಾಣುವನ್ನು ಪಡೆದು ಭ್ರೂಣ ಸೃಷ್ಟಿಸಲಾಗುತ್ತದೆ. ಪ್ರಯೋಗಾಲಯದಲ್ಲಿ ಸೃಷ್ಟಿಯಾದ ಭ್ರೂಣವನ್ನು ಕಡಿಮೆ ಹಾಲು ಉತ್ಪಾದಿಸುತ್ತಿರುವ ಹಸುವಿನ ಗರ್ಭಕ್ಕೆ ಸೇರಿಸಲಾಗುತ್ತದೆ. ಆ ಹಸುವಿನ ಗರ್ಭದಲ್ಲಿ ಬೆಳೆದು ಹುಟ್ಟುವ ಕರು ಉತ್ಕೃಷ್ಟ ತಳಿಯದ್ದಾಗಿರುತ್ತದೆ.

ಪ್ರಯೋಜನ

  • ಅಧಿಕ ಹಾಲು ಉತ್ಪಾದಿಸುವ ಸಾಮರ್ಥ್ಯ: ಆ ಕರುಗಳು ಮುಂದೆ ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ. ಉತ್ಕೃಷ್ಟ ತಳಿಯ ಹಸುವು ಒಂದು ಕರುವಿಗೆ ಮಾತ್ರ ಜನ್ಮ ನೀಡಿದರೆ, ಅದರ ಅಂಡಾಣು ಬಳಸಿ ಭ್ರೂಣ ಸೃಷ್ಟಿಸಿ, ಬಾಡಿಗೆ ತಾಯ್ತನದ ಬಳಕೆ ಮಾಡುವ ಮೂಲಕ ಉತ್ತಮ ತಳಿಯ ಹೆಚ್ಚು ಕರುಗಳನ್ನು ಪಡೆಯಬಹುದಾಗಿದೆ.
  • ರೈತರ ಆದಾಯ ಹೆಚ್ಚಳ: ಈ ವಿಧಾನವು ರೈತರಿಗೆ ಅಧಿಕ ಆದಾಯ ಪಡೆಯಲು ಅನುವು ಮಾಡಿಕೊಡಲಿದೆ. ಹೆಚ್ಚು ಹಾಲು ಕೊಡುವ ಹಸುಗಳನ್ನು ಸಾಕುವ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಇದರಿಂದ ದೇಶದಲ್ಲಿ ಹಾಲು ಉತ್ಪಾದನೆಯ ಪ್ರಮಾಣವು ಏರಿಕೆಯಾಗಲಿದೆ.

ಏನಿದು ಬಾಡಿಗೆ ತಾಯ್ತನ?

  • ಮಹಿಳೆ ತನ್ನದಲ್ಲದ ಭ್ರೂಣವನ್ನು ತನ್ನ ಗರ್ಭದಲ್ಲಿ ಪೂರ್ಣಾವಧಿಗೆ ಇಟ್ಟುಕೊಂಡು, ಪೊರೆದು ಮಗುವನ್ನು ಹೆತ್ತು ಕೊಡುವುದು, ಎಂದರೆ, ತನ್ನ ಗರ್ಭವನ್ನು ಇತರರಿಗೆ ಬಾಡಿಗೆಗೆ ಕೊಡುವುದು. ಈ ಕೆಲಸಕ್ಕಾಗಿ ಮಹಿಳೆ ಹಣ ಪಡೆಯುವುದರಿಂದ ಇದು ‘ಬಾಡಿಗೆ ತಾಯ್ತನ’ ಎನ್ನಲಾಗುತ್ತದೆ.

ನಿಮಗಿದು ತಿಳಿದಿರಲಿ

  • ಕಳೆದ ವರ್ಷ ತಿರುಪತಿಯ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಒಂದು ಹಸು ಬಾಡಿಗೆ ತಾಯ್ತನದ ಮೂಲಕ ವರ್ಷಕ್ಕೆ 10ಕ್ಕೂ ಹೆಚ್ಚು ಕರುಗಳಿಗೆ ಜನ್ಮ ನೀಡುವ ಸಂಶೋಧನೆ ಕೈಗೊಳ್ಳಲಾಗಿದೆ.