ಡಿಪಿಐಐಟಿ ವರದಿ: ಜನರೇಟಿವ್ ಎಐ (GenAI) ಮತ್ತು ಹಕ್ಕುಸ್ವಾಮ್ಯದ ಸಂಕೀರ್ಣತೆಗಳು
ಡಿಪಿಐಐಟಿ ವರದಿ: ಜನರೇಟಿವ್ ಎಐ (GenAI) ಮತ್ತು ಹಕ್ಕುಸ್ವಾಮ್ಯದ ಸಂಕೀರ್ಣತೆಗಳು
ಸುದ್ದಿ – ಜನರೇಟಿವ್ ಎಐ (GenAI) ಮಾದರಿಗಳಿಗೆ ತರಬೇತಿ ನೀಡಲು ಹಕ್ಕುಸ್ವಾಮ್ಯ ಹೊಂದಿರುವ ಕೃತಿಗಳನ್ನು ಪರವಾನಗಿ ಇಲ್ಲದೆ ಬಳಸುವುದು ಮತ್ತು ಎಐ (AI) ರಚಿಸಿದ ಔಟ್ಪುಟ್ಗಳ ಕರ್ತೃತ್ವ ಅಥವಾ ರಕ್ಷಣೆಯ ಅಸ್ಪಷ್ಟತೆಯಿಂದಾಗಿ ಹಕ್ಕುಸ್ವಾಮ್ಯದ ಕಾಳಜಿಗಳು ಉದ್ಭವಿಸಿವೆ. ಭಾರತೀಯ ಹಕ್ಕುಸ್ವಾಮ್ಯ ಕಾನೂನಿನಲ್ಲಿರುವ ಅಂತರಗಳು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿವೆ. ಎಐ ತರಬೇತಿಗಾಗಿ ಕಾಯಿದೆಬದ್ಧ ಪ್ರವೇಶವನ್ನು ಖಚಿತಪಡಿಸುವುದು ಮತ್ತು ಅದೇ ಸಮಯದಲ್ಲಿ ರಚನೆಕಾರರಿಗೆ (Creators) ನ್ಯಾಯಯುತ ಪರಿಹಾರವನ್ನು ಒದಗಿಸಲು ‘ಶಾಸನಬದ್ಧ ಸಂಭಾವನೆ ಹಕ್ಕುಗಳ’ (Statutory Remuneration Rights) ಜೊತೆಗೆ ‘ಮಿಶತ ನಿಯಂತ್ರಣ ಮಾದರಿ’ಯನ್ನು (Hybrid Regulatory Model) ಈ ವರದಿಯು ಶಿಫಾರಸು ಮಾಡುತ್ತದೆ. ಕೃತಕ ಬುದ್ಧಿಮತ್ತೆಯು (AI) ಸಾಂಪ್ರದಾಯಿಕ ‘ಕರ್ತೃತ್ವ’ ಅಥವಾ ಮಾಲೀಕತ್ವದ ಕಲ್ಪನೆಗಳನ್ನು ಪ್ರಶ್ನಿಸುತ್ತಿದ್ದು, ಇದು ಪ್ರಸ್ತುತ ಕಾನೂನು ಮತ್ತು ನೈತಿಕ ವಲಯದಲ್ಲಿ ಅತ್ಯಂತ ವಿವಾದಾತ್ಮಕ ವಿಷಯವಾಗಿ ಹೊರಹೊಮ್ಮಿದೆ.
GenAI ಮತ್ತು ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು: ಈ ತಂತ್ರಜ್ಞಾನದ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಎರಡು ಹಂತಗಳಲ್ಲಿ ಸಮಸ್ಯೆಗಳು ಕಂಡುಬರುತ್ತವೆ:
- ಇನ್ಪುಟ್ ಹಂತದ ಬಳಕೆ – ಹಕ್ಕುಸ್ವಾಮ್ಯದ ಸಾಮಗ್ರಿ ಬಳಕೆ: ಹಕ್ಕುಸ್ವಾಮ್ಯ ಹೊಂದಿರುವ ವಿಷಯವನ್ನು ಎಐ ತರಬೇತಿಯಲ್ಲಿ ಬಳಸುವಾಗ, ಮೂಲ ಹಕ್ಕುಸ್ವಾಮ್ಯ ಹೊಂದಿರುವವರಿಂದ ಯಾವುದೇ ಪರವಾನಗಿ ಪಡೆಯದಿರುವುದು ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ.
- ಔಟ್ಪುಟ್ ಹಂತ – ಎಐ ರಚಿತ ಕೃತಿಗಳ ಮೇಲಿನ ಹಕ್ಕುಗಳು:
- ಎಐ (AI) ರಚಿಸಿದ ಕೃತಿಗಳಿಗೆ ಹಕ್ಕುಸ್ವಾಮ್ಯ ನೀಡಬಹುದೇ ಎಂಬುದನ್ನು ನಿರ್ಧರಿಸುವುದು.
- ಎಐ ರಚಿಸಿದ ವಿಷಯದಲ್ಲಿ ‘ಕರ್ತೃತ್ವ’ವನ್ನು (Authorship) ಗುರುತಿಸುವುದು.
- ಎಐ ಕೃತಿಗಳಲ್ಲಿ ನೈತಿಕ ಹಕ್ಕುಗಳ ಅನ್ವಯಿಸುವಿಕೆ.
ನಿಯಂತ್ರಕ ಸಮಸ್ಯೆಗಳು:
- ಎಐ (AI) ತರಬೇತಿಗೆ ಕಾನೂನು ವಿನಾಯಿತಿಗಳ ಕೊರತೆ: ಪ್ರಸ್ತುತ ಭಾರತೀಯ ಹಕ್ಕುಸ್ವಾಮ್ಯ ಕಾನೂನು, ಪಠ್ಯ ಮತ್ತು ದತ್ತಾಂಶ ಗಣಿಗಾರಿಕೆ (Text and Data Mining) ಅಥವಾ ಎಐ ತರಬೇತಿ ಚಟುವಟಿಕೆಗಳಿಗೆ ಯಾವುದೇ ನಿರ್ದಿಷ್ಟ ವಿನಾಯಿತಿಯನ್ನು ಒದಗಿಸಿಲ್ಲ.
- ನ್ಯಾಯಯುತ ವ್ಯವಹಾರದ ಅಸ್ಪಷ್ಟತೆ: ಹಕ್ಕುಸ್ವಾಮ್ಯ ಕಾಯಿದೆ, 1957 ರ ಸೆಕ್ಷನ್ 52(1)(a) ಅಡಿಯಲ್ಲಿ ಸಂಶೋಧನೆ, ವಿಮರ್ಶೆ ಮತ್ತು ವರದಿಯ ಉದ್ದೇಶಗಳಿಗಾಗಿ ಇರುವ ‘ನ್ಯಾಯಯುತ ವ್ಯವಹಾರ’ದ ವ್ಯಾಪ್ತಿಯು ಎಐ ತರಬೇತಿಗೆ ಅನ್ವಯಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ. ಇದು ಕಾನೂನು ಅನಿಶ್ಚಿತತೆಯನ್ನು ಸೃಷ್ಟಿಸುತ್ತದೆ.
ವರದಿಯ ಪ್ರಮುಖ ಶಿಫಾರಸುಗಳು:
- ಮಿಶತ ನಿಯಂತ್ರಣ ಮಾದರಿಯ ಅಳವಡಿಕೆ: ಎಐ ತರಬೇತಿಗಾಗಿ ಹಕ್ಕುಸ್ವಾಮ್ಯ ಹೊಂದಿರುವ ವಿಷಯಗಳ ಲಭ್ಯತೆಯನ್ನು ಹಕ್ಕಿನ ವಿಷಯವಾಗಿ (Matter of Right) ಖಚಿತಪಡಿಸುವುದು ಮತ್ತು ಅದೇ ಸಮಯದಲ್ಲಿ ಹಕ್ಕುಸ್ವಾಮ್ಯ ಹೊಂದಿರುವವರಿಗೆ ನ್ಯಾಯಯುತ ಪರಿಹಾರವನ್ನು ಒದಗಿಸುವ ‘ಹೈಬ್ರಿಡ್ ಮಾದರಿ’ಯನ್ನು ಅಳವಡಿಸಿಕೊಳ್ಳುವುದು.
- ಹಕ್ಕುಸ್ವಾಮ್ಯ ಮಾಲೀಕರಿಗೆ ಶಾಸನಬದ್ಧ ಸಂಭಾವನೆ ಹಕ್ಕುಗಳು: ತಮ್ಮ ಕೃತಿಗಳನ್ನು ಎಐ ತರಬೇತಿಗೆ ಬಳಸಿದ್ದಕ್ಕಾಗಿ ಹಕ್ಕುಸ್ವಾಮ್ಯ ಮಾಲೀಕರು ಗೌರವಧನ ಪಡೆಯಲು ಶಾಸನಬದ್ಧ ಹಕ್ಕನ್ನು ಹೊಂದಿರಬೇಕು.
ಇತರೆ ದೇಶಗಳು ಅನುಸರಿಸುತ್ತಿರುವ ಮಾದರಿಗಳು: ವಿಶ್ವದಾದ್ಯಂತ ಈ ಸಮಸ್ಯೆಯನ್ನು ನಿರ್ವಹಿಸಲು ವಿವಿಧ ಮಾದರಿಗಳನ್ನು ಬಳಸಲಾಗುತ್ತಿದೆ:
- ಸ್ವಯಂಪ್ರೇರಿತ ಪರವಾನಗಿ: ಹಕ್ಕುಸ್ವಾಮ್ಯ ಮಾಲೀಕರು ತಮ್ಮ ಕೃತಿಗಳ ಬಳಕೆಯನ್ನು ಅನುಮತಿಸಲು ಅಥವಾ ನಿರಾಕರಿಸಲು ಪೂರ್ಣ ನಿಯಂತ್ರಣವನ್ನು ಹೊಂದಿರುವ ಮಾದರಿ.
- ವಿಸ್ತೃತ ಸಾಮೂಹಿಕ ಪರವಾನಗಿ: ಸಾಮೂಹಿಕ ನಿರ್ವಹಣಾ ಸಂಸ್ಥೆಗಳು ಒಂದು ವರ್ಗದ ಸದಸ್ಯರು ಮತ್ತು ಸದಸ್ಯರಲ್ಲದವರ ಪರವಾಗಿ ಪರವಾನಗಿಗಳನ್ನು ನೀಡುವ ವ್ಯವಸ್ಥೆ. (ಉದಾಹರಣೆಗೆ: ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ ಮತ್ತು ಜರ್ಮನಿ).
- ಪಠ್ಯ ಮತ್ತು ದತ್ತಾಂಶ ಗಣಿಗಾರಿಕೆ ವಿನಾಯಿತಿ: ಹಕ್ಕುಸ್ವಾಮ್ಯ ಹೊಂದಿರುವ ಕೃತಿಗಳ ನಕಲು ಅಥವಾ ಬಳಕೆಗೆ ಅನುಮತಿಸುವ ಶಾಸನಬದ್ಧ ವಿನಾಯಿತಿ. (ಉದಾಹರಣೆಗೆ: ಸಿಂಗಾಪುರ).
