‘ಎಜುಕೇಟ್ ಗರ್ಲ್ಸ್’ಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ 2025
‘ಎಜುಕೇಟ್ ಗರ್ಲ್ಸ್’ಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ 2025
ಸುದ್ದಿ – ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಅವಿರತವಾಗಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆ ‘ಎಜುಕೇಟ್ ಗರ್ಲ್ಸ್’ಗೆ 2025ರ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ಪ್ರಶಸ್ತಿಯು ಶಿಕ್ಷಣದ ಮೂಲಕ ಹೆಣ್ಣುಮಕ್ಕಳನ್ನು ಶೋಷಣೆಯಿಂದ ಮುಕ್ತಗೊಳಿಸುವ ಸಂಸ್ಥೆಯ ಕಾರ್ಯಕ್ಕೆ ಸಂದ ಗೌರವವಾಗಿದೆ. ಈ ಸಂಸ್ಥೆಯನ್ನು ಸಫೀನಾ ಹುಸೇನ್ ಅವರು 2007ರಲ್ಲಿ ಸ್ಥಾಪಿಸಿದ್ದರು. ಭಾರತದಿಂದ ಈ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಸಂಸ್ಥೆಯಾಗಿದೆ.
ಪ್ರಮುಖಾಂಶಗಳು:
- ಪ್ರಶಸ್ತಿ ವಿಜೇತ ಸಂಸ್ಥೆ: ಎಜುಕೇಟ್ ಗರ್ಲ್ಸ್ (ಮೂಲ ಹೆಸರು: ‘ದಿ ಫೌಂಡೇಶನ್ ಟು ಎಜುಕೇಟ್ ಗರ್ಲ್ಸ್ ಗ್ಲೋಬಲಿ’).
- ಸ್ಥಾಪಕರು: ಸಫೀನಾ ಹುಸೇನ್.
- ಸ್ಥಾಪನೆಯ ವರ್ಷ: 2007.
- ಪ್ರಶಸ್ತಿಯ ಉದ್ದೇಶ: ಹೆಣ್ಣುಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಅವರನ್ನು ಶೋಷಣೆಯಿಂದ ಮುಕ್ತಗೊಳಿಸುವ ಕಾರ್ಯಕ್ಕಾಗಿ.
- ಪ್ರದಾನ ಸಮಾರಂಭ: 67ನೇ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 7ರಂದು ಫಿಲಿಫೈನ್ಸ್‌ನ ಮನಿಲಾದಲ್ಲಿ ನಡೆಯಲಿದೆ.
- ಇತರ ಪ್ರಶಸ್ತಿ ವಿಜೇತರು: ಭಾರತದಿಂದ ಪರಿಸರ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಮಾಲ್ಲೀಪ್ಪೆನ ಶಾಹಿನಾ ಅಲಿ ಮತ್ತು ಫಿಲಿಫೈನ್ಸ್‌ನ ಫ್ಲಾವಿಯಾನೊ ವಿಲ್ಲಾನುಯೆವಾ ಅವರಿಗೂ ಈ ಪ್ರಶಸ್ತಿ ಲಭಿಸಿದೆ.
ಮಹತ್ವ:
‘ಎಜುಕೇಟ್ ಗರ್ಲ್ಸ್‘ಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿರುವುದು ಭಾರತದ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣಾ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು. ಇದು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಹಿಂದುಳಿದ ಸಮುದಾಯಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಮಹತ್ವವನ್ನು ಜಾಗತಿಕವಾಗಿ ಎತ್ತಿ ಹಿಡಿಯುತ್ತದೆ. ಸಫೀನಾ ಹುಸೇನ್ ಅವರ ಪ್ರಕಾರ, ಈ ಪ್ರಶಸ್ತಿಯು ಜನರ ಸಹಭಾಗಿತ್ವದಿಂದ ಆರಂಭವಾದ ಚಳವಳಿಗೆ ಸಂದ ಜಾಗತಿಕ ಮನ್ನಣೆಯಾಗಿದೆ ಮತ್ತು ಲಕ್ಷಾಂತರ ಬಾಲಕಿಯರು ತಮ್ಮ ಶಿಕ್ಷಣದ ಹಕ್ಕನ್ನು ಮರಳಿ ಪಡೆಯಲು ಇದು ಪ್ರೇರಣೆ ನೀಡುತ್ತದೆ.
