Published on: July 4, 2025

ಚುಟುಕು ಸಮಾಚಾರ : 4th ಜುಲೈ 2025

ಚುಟುಕು ಸಮಾಚಾರ : 4th ಜುಲೈ 2025

  • ಅಂಧತ್ವ ಮುಕ್ತ ಕರ್ನಾಟಕದ ಗುರಿಯೊಂದಿಗೆ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಶಾಕಿರಣ ಯೋಜನೆಯಡಿ 393 ಶಾಶ್ವತ ದೃಷ್ಟಿ ಕೇಂದ್ರಗಳನ್ನು ಉದ್ಘಾಟಿಸಲಾಗಿದೆ. ದೃಷ್ಟಿದೋಷ ಹೊಂದಿದವರು ತಪಾಸಣೆ ಮಾಡಿಸಿಕೊಂಡು, ಉಚಿತವಾಗಿ ಕನ್ನಡಕಗಳನ್ನ ಪಡೆಯಬಹುದಾಗಿದೆ. ಅಲ್ಲದೇ ಕಣ್ಣಿನ ಪೊರೆ ಶಸ್ತ್ರಚುಕಿತ್ಸೆಯನ್ನ ಉಚಿತವಾಗಿ ಕಲ್ಪಿಸಲಾಗುತ್ತಿದೆ.
  • ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ತಾಯಂದಿರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಬಲಪಡಿಸಲು ₹48 ಕೋಟಿಗೂ ಹೆಚ್ಚಿನ ಅನುದಾನವನ್ನು ಇನ್ಫೋಸಿಸ್ ಫೌಂಡೇಷನ್ ಒದಗಿಸಲಿದೆ. ಇದಕ್ಕಾಗಿ, ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳ ತಾಯಂದಿರು ಮತ್ತು ಮಕ್ಕಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಗುರಿ ಹೊಂದಲಾಗಿದೆ. ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಚಟುವಟಿಕೆಗಳನ್ನು ಇನ್ನೊಸಿಸ್ ಫೌಂಡೇಷನ್ ನಿರ್ವಹಿಸುತ್ತದೆ.
  • ಮಾಸ್ಕೊದಲ್ಲಿ ತನ್ನ ರಾಯಭಾರಿಯನ್ನು ನೇಮಿಸಲು ಅಫ್ಘಾನಿಸ್ತಾನಕ್ಕೆ ಒಪ್ಪಿಗೆ ನೀಡಿರುವ ರಷ್ಯಾ, ತಾಲಿಬಾನ್ ಆಡಳಿತವನ್ನು ಮಾನ್ಯ ಮಾಡಿದ ಮೊದಲ ರಾಷ್ಟ್ರ ಎನಿಸಿದೆ. 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿದ್ದ ಯುಎಸ್ ಸೇನಾ ಪಡೆಗಳು 2021ರ ಆಗಸ್ಟ್ನಲ್ಲಿ ಹೊರನಡೆದ ಬಳಿಕ ತಾಲಿಬಾನ್ ಅಧಿಕಾರ ಚುಕ್ಕಾಣಿ ಹಿಡಿದಿದೆ. ಅಂದಿನಿಂದ ಈ ಗುಂಪು ದೇಶವನ್ನು ನಿಯಂತ್ರಿಸುತ್ತಿದ್ದರೂ, ಹೆಚ್ಚಿನ ಅಂತರರಾಷ್ಟ್ರೀಯ ಸಮುದಾಯವು ಮಾನವ ಹಕ್ಕುಗಳು, ಮಹಿಳಾ ಶಿಕ್ಷಣ ಮತ್ತು ರಾಜಕೀಯ ಒಳಗೊಳ್ಳುವಿಕೆಯ ಬಗ್ಗೆ ಕಳವಳಗಳನ್ನು ಉಲ್ಲೇಖಿಸಿ ಔಪಚಾರಿಕ ಮಾನ್ಯತೆಯನ್ನು ತಡೆಹಿಡಿದಿದೆ. ಆಗಿನಿಂದ ಬೇರಾವ ರಾಷ್ಟ್ರವೂ ತಾಲಿಬಾನ್ ಸರ್ಕಾರವನ್ನು ಮಾನ್ಯ ಮಾಡಿಲ್ಲ.
  • ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಮೃತಪಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಕಾರಣ ‘ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ’ ಹೃದ್ರೋಗ ಪತ್ತೆಗೆ ಆದ್ಯತೆ ನೀಡಿದ್ದು, ಎರಡು ವರ್ಷಗಳಲ್ಲಿ 7.49 ಲಕ್ಷ ಮಂದಿಗೆ ಇಸಿಜಿ ಪರೀಕ್ಷೆ (ಎಲೆಕ್ಟೋಕಾರ್ಡಿಯೋಗ್ರಾಮ್) ಮಾಡಲಾಗಿದೆ. ವ್ಯಕ್ತಿಗೆ ಹೃದಯಾಘಾತ ಸಂಭವಿಸಿದ ಒಂದು ಗಂಟೆ ನಿರ್ಣಾಯಕವಾಗಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ತಾಲ್ಲೂಕು ಮಟ್ಟದಲ್ಲಿಯೇ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ‘ಸ್ಟೆಮಿ’ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಕಾರ್ಯಕ್ರಮದಡಿ ಈ ಯೋಜನೆ ಪ್ರಾರಂಭಿಸಲಾಗಿದೆ.