Published on: February 13, 2023
ಬೇಹುಗಾರಿಕಾ ಬಲೂನು
ಬೇಹುಗಾರಿಕಾ ಬಲೂನು
ಸುದ್ದಿಯಲ್ಲಿ ಏಕಿದೆ? ಚೀನಾ ಕಳುಹಿಸಿದ ಬೇಹುಗಾರಿಕಾ ಬಲೂನು ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿದೆ.
ಮುಖ್ಯಾಂಶಗಳು
- ಪ್ರಕರಣವನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿದೆ. ಉಪಗ್ರಹ ಮತ್ತು ಇತರ ಅತ್ಯಾಧುನಿಕ ಬೇಹುಗಾರಿಕಾ ಸಾಧನಗಳಿರುವ ಈ ಕಾಲದಲ್ಲಿಯೂ ಗೂಢಚಾರಿಕೆಗೆ ಬಲೂನುಗಳನ್ನು ಬಳಸಲಾಗುತ್ತಿದೆ.
- ಚೀನಾದ ಶಂಕಿತ ಬೇಹುಗಾರಿಕಾ ಬಲೂನು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕವು ಚೀನಾದ ಆರು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಈ ಕಂಪನಿಗಳು ಚೀನಾದ ಅಂತರಿಕ್ಷ ಕಾರ್ಯಕ್ರಮಗಳೊಂದಿಗೆ ನಂಟು ಹೊಂದಿವೆ ಎಂದೂ ಆರೋಪಿಸಿದೆ. ಕಾರಣ : ‘ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ(ಪಿಎಲ್ಎ) ಅಂತರಿಕ್ಷ ಕಾರ್ಯಕ್ರಮಗಳಿಗೆ ನೆರವು ನೀಡುತ್ತಿದ್ದ ಕಾರಣಕ್ಕೆ ಈ ಆರು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ’.
ಬಲೂನು ಬೇಹುಗಾರಿಕೆ ಕುರಿತು
- ಸ್ಥಳೀಯ ಹವಾಮಾನ ಅಧ್ಯಯನಕ್ಕಾಗಿ ಬಲೂನುಗಳನ್ನು ಬಳಸುವುದು ಸಾಮಾನ್ಯ ಸಂಗತಿ. ಬಲೂನುಗಳನ್ನು ಬೇಹುಗಾರಿಕೆಗೂ ಬಳಸಲಾಗುತ್ತಿದೆ.
- ಈ ಬಲೂನುಗಳಲ್ಲಿ ಉಪಕರಣಗಳು: ಕ್ಯಾಮೆರಾ, ರೇಡಾರ್ ಮತ್ತು ಇತರ ಉಪಕರಣಗಳನ್ನು ಅವಳಡಿಸಲಾಗುತ್ತದೆ.
- ಕೆಳಮುಖ ಮಾಡಿ ಅಳವಡಿಸಲಾಗಿರುವ ಕ್ಯಾಮೆರಾ ಮತ್ತು ಇತರ ಸಾಧನಗಳು ನೆಲದಲ್ಲಿ ನಡೆಯುವ ಚಟುವಟಿಕೆಗಳ ಮಾಹಿತಿಯನ್ನು ಫೋಟೊ ಮೂಲಕ ಸಂಗ್ರಹಿಸುತ್ತವೆ.
- ಈ ಬಲೂನುಗಳಲ್ಲಿರುವ ಸಾಧನಗಳು ಸೌರಶಕ್ತಿಯಿಂದ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ. ಬಲೂನುಗಳು ಅಥವಾ ಹವಾಮಾನ ಅಧ್ಯಯನ ಬಲೂನುಗಳು ನಾಗರಿಕ ವಿಮಾನಗಳು ಹಾರಾಟ ನಡೆಸುವುದಕ್ಕಿಂ ತ ಬಹಳ ಎತ್ತರದಲ್ಲಿ ಸಂಚರಿಸುತ್ತವೆ. ಸಾಮಾನ್ಯವಾಗಿ ನಾಗರಿಕ ವಿಮಾನಗಳ ಹಾರಾಟದ ಗರಿಷ್ಠ ಎತ್ತರ 42,000 ಅಡಿಗಳು. ಆದರೆ, ಬಲೂನುಗಳು ಸುಮಾರು 80 ಸಾವಿರ ಅಡಿಯಿಂದ 1.20 ಲಕ್ಷ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತವೆ.
ಬಲೂನು ಬಳಕೆಯ ಉದ್ದೇಶವೇನು?
- ಬಲೂನುಗಳನ್ನು ಬಳಸಲು ತಗಲುವ ವೆಚ್ಚ ಅತ್ಯಂತ ಕಡಿಮೆ.
- ಇವುಗಳನ್ನು ಹಾರಿಬಿಡಲು ಉಡ್ಡಯನ ವಾಹನದಂತಹ ಸಂಕೀರ್ಣ ವ್ಯವಸ್ಥೆಯ ಅಗತ್ಯ ಇಲ್ಲ.
- ಉಪಗ್ರಹಕ್ಕಿಂತ ಹೆಚ್ಚು ಹತ್ತಿರದಿಂದ ನೆಲದಲ್ಲಿರುವ ಸ್ಥಾವರಗಳ ಮೇಲೆ ನಿಗಾ ಇರಿಸುವುದು ಸಾಧ್ಯವಾಗುತ್ತದೆ. ಬಲೂನುಗಳನ್ನು ಹಿಂದಕ್ಕೆ ಕರೆಸಿಕೊಳ್ಳಬಹುದು, ದುರಸ್ತಿ ಮಾಡಬಹುದು ಮತ್ತು ಮರುಬಳಕೆ ಕೂಡ ಸಾಧ್ಯವಿದೆ.
- ಉಪಗ್ರಹವನ್ನು ಒಂದು ಬಾರಿ ಕಕ್ಷೆಗೆ ಸೇರಿಸಿದ ಬಳಿಕ, ಅದು ಯಾವ ಹೊತ್ತಿನಲ್ಲಿ ಯಾವ ಪ್ರದೇಶವನ್ನು ಹಾದು ಹೋಗುತ್ತದೆ ಎಂಬುದರ ಮೇಲೆ ನಿಗಾ ಇರಿಸಲು ಸಾದ್ಯವಿದೆ. ಆದರೆ ಬಲೂನುಗಳನ್ನು ಗುರುತಿಸುವುದು ಕಷ್ಟ. ಮೃದುವಾದ ವಸ್ತುಗಳನ್ನು ಬಳಸಿ ಬಲೂನುಗಳನ್ನು ತಯಾರಿಸಲಾಗುತ್ತದೆ. ಆದ್ದರಿಂದ ಅವುಗಳು ರೇಡಾರ್ ಕಣ್ಣಿಗೂ ಬೀಳುವುದಿಲ್ಲ.
- ಅಲ್ಲದೆ, ಬಲೂನುಗಳನ್ನು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಇರಿಸುವುದಕ್ಕೂ ಸಾಧ್ಯವಿದೆ.
- ಅತ್ಯಾಧುನಿಕ ಬೇಹುಗಾರಿಕೆ ಸಾಧನಗಳನ್ನು ಈ ಬಲೂನುಗಳಲ್ಲಿ ಅಳವಡಿಸಲು ಸಾಧ್ಯವಿದೆ.
- ಬಲೂನು ಅಗ್ಗದ ವಸ್ತುವಾದ ಕಾರಣ, ಸಂಪೂರ್ಣವಾಗಿ ನಾಶವಾಗಿ ಹೋದರೂ ದೊಡ್ಡ ನಷ್ಟವೇನೂ ಆಗದು.
ಈ ಬಲೂನಗಳ ಹಿನ್ನೆಲೆ
- ಆಸ್ಟ್ರೀಯಾ ಮತ್ತು ನೆದರ್ಲ್ಯಾಂಡ್ ಮೇಲೆ ಫ್ರಾನ್ಸ್ 1794ರಲ್ಲಿ ನಡೆಸಿದ ಫ್ಲಿಯುರೂಸ್ ಯುದ್ಧದಲ್ಲಿ ಮೊದಲ ಬಾರಿಗೆ ಬೇಹುಗಾರಿಕೆಗೆ ಬಲೂನುಗಳನ್ನು ಬಳಸಲಾಯಿತು ಎಂದು ಹೇಳಲಾಗುತ್ತಿದೆ. 1860ರ ದಶಕದಲ್ಲಿ ಅಮೆರಿಕದ ಆಂತರಿಕ ಯುದ್ಧದ ಸಂದರ್ಭದಲ್ಲಿಯೂ ಬಲೂನುಗಳನ್ನು ಬಳಸಲಾಗಿತ್ತು.
ಹೇಗೆ ತಯಾರಿಸಲಾಗುತ್ತದೆ?
- ಫ್ಯಾಬ್ರಿಕ್ಗಳನ್ನು ಬಳಸಿ ನಿರ್ಮಿಸಲಾಗುತ್ತದೆ. ಆಗಸಕ್ಕೆ ಹಾರಿಬಿಟ್ಟ ಕೆಲವೇ ಗಂಟೆಗಳಲ್ಲಿ, ಲ್ಯಾಟೆಕ್ಸ್ ಬಲೂನುಗಳು ಸಿಡಿದುಹೋಗತ್ತವೆ. ಲ್ಯಾಟೆಕ್ಸ್ ಬಲೂನುಗಳನ್ನು ದೀರ್ಘಾ ವಧಿಯ ಪ್ರಯಾಣ ಅಥವಾ ಕಾರ್ಯಾಚರಣೆಗೆ ಬಳಸಲು ಸಾಧ್ಯವಿಲ್ಲ. ಆದರೆ, ಚೀನಾದ ಬಲೂನನ್ನು ಪಾಲಿಯುರೇಥಿನ್ ಫಿಲ್ಮ್ಗಳನ್ನು ಬಳಸಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಬೇಹುಗಾರಿಕೆಗೆ ಬಳಸುವ ಬಲೂನನ್ನು ಪಾಲಿಯುರೇಥಿನ್ ಫಿಲ್ಮ್ಗಳಿಂದ ನಿರ್ಮಿಸಲಾಗಿರುತ್ತದೆ.
ಈ ಬಲೂನನ್ನು ಹೊದೆದುರಿಳಸಲು ಕಾರಣ (ಅಮೇರಿಕಾದ ಸಮರ್ಥನೆ)
- ‘ಸಾಮಾನ್ಯವಾಗಿ ವಾತಾವರಣ ಅಧ್ಯಯನ ಬಲೂನುಗಳ ಎತ್ತರವು 20 ಅಡಿಗಳಷ್ಟು ಇರುತ್ತದೆ. ಅಂತಹ ಬಲೂನುಗಳಿಗೆ ಹೋಲಿಸಿದರೆ, ಚೀನಾದ ಬಲೂನಿನ ಗಾತ್ರ ತೀರಾ ದೊಡ್ಡದು. ಚೀನಾದ ಬಲೂನಿನ ಎತ್ತರ ಅಂದಾಜು 200 ಅಡಿಗಳಷ್ಟು ಇತ್ತು. ಬಲೂನಿನ ದೊಡ್ಡ ಗಾತ್ರವೇ, ಅದು ವಾತಾವರಣ ಅಧ್ಯಯನ ಬಲೂನು ಅಲ್ಲ ಎಂಬುದನ್ನು ಸೂಚಿಸುತ್ತದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಚೀನಾದ ಬಲೂನು ಅದು ಹೊರಟಲ್ಲಿಂದ, ಅಮೆರಿಕದ ಮೊಂಟಾನಾ ತಲುಪುವರೆಗೂ ಅಂದಾಜು 200 ದಿನಗಳನ್ನು ಆಗಸದಲ್ಲೇ ಕಳೆದಿದೆ. ಇದು ಸಹ ಈ ಬಲೂನು ವಾತಾವರಣ ಅಧ್ಯಯನದ ಉದ್ದೇಶದ್ದಲ್ಲ ಎಂಬುದನ್ನು ಸೂಚಿಸುತ್ತದೆ’.
- ‘ವಾತಾವರಣ ಅಧ್ಯಯನ ಉದ್ದೇಶದ ಬಲೂನುಗಳಲ್ಲಿ ಹಾರಾಟದ ದಿಕ್ಕು, ವೇಗವನ್ನು ನಿಯಂತ್ರಿಸುವ ಸವಲತ್ತುಗಳು ಇರುವುದಿಲ್ಲ. ಆದರೆ, ಚೀನಾದ ಈ ದೊಡ್ಡ ಬಲೂನು, ಪದೇ–ಪದೇ ದಿಕ್ಕು ಮತ್ತು ವೇಗವನ್ನು ಬದಲಿಸಿದ್ದನ್ನು ಗಮನಿಸಲಾಗಿದೆ. ಅಲಾಸ್ಕಾದ ವಾಯುಗಡಿಯನ್ನು ದಾಟಿ ಹೋಗುವಾಗ ಈ ಬಲೂನು ಸಾಮಾನ್ಯ ವೇಗದಲ್ಲೇ ಇತ್ತು. ಆದರೆ, ಕೆನಡ ಮತ್ತು ಅಮೆರಿಕದ ಐಡಾಹೊ ರಾಜ್ಯದ ಗಡಿ ಪ್ರದೇಶದಲ್ಲಿ ಹಲವು ಗಂಟೆಗಳವರೆಗೆ ಈ ಬಲೂನು ಇದ್ದಲ್ಲೇ ಇತ್ತು. ನಂತರ ಅದು ವೇಗವಾಗಿ ಅಮೆರಿಕದ ವಾಯುಗಡಿಯನ್ನು ಪ್ರವೇಶಿಸಿತು. ಮೊಂಟಾನಾ ರಾಜ್ಯದ ಬಿಲ್ಲಿಂಗ್ಸ್ ನಗರದ ಮೇಲೆ ಬಲೂನು ತೀರಾ ನಿಧಾನವಾಗಿ ಹಾರಾಟ ನಡೆಸಿತ್ತು. ಬಿಲ್ಲಿಂಗ್ಸ್ ನಗರದಿಂದ ಕೆಲವೇ ಕಿ.ಮೀ.ನಷ್ಟು ದೂರದಲ್ಲಿ ವಾಯುನೆಲೆ ಇದೆ. ಈ ಕಾರಣದಿಂದಲೇ ಅದು ಬೇಹುಗಾರಿಕಾ ಬಲೂನು ಎಂಬ ಶಂಕೆ ಬಲವಾಯಿತು’ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಚೀನಾದ ಸಮರ್ಥನೆ : ಈ ಬಲೂನು ‘ವಾಯುಮಾಪನ’ ಉದ್ದೇಶದ, ವಾತಾವರಣ ಅಧ್ಯಯನ ಬಲೂನು, ಅದು ಬೇಹುಗಾರಿಕಾ ಬಲೂನು ಅಲ್ಲ, ಹವಾಮಾನ ಅಧ್ಯಯನಕ್ಕಾಗಿ ಕಳುಹಿಸಿದ್ದ ಬಲೂನು ಎಂದಿದೆ. ಅದು ತನ್ನ ಪಥವನ್ನು ಬಿಟ್ಟು ಅಮೆರಿಕದ ವಾಯುಪ್ರದೇಶ ಪ್ರವೇಶಿಸಿದೆ ಎಂದು ಚೀನಾ ಹೇಳಿದೆ.