Published on: March 23, 2023

ವಿಶ್ವಸಂಸ್ಥೆಯ ಜಾಗತಿಕ ಜಲ ಅಭಿವೃದ್ಧಿ ವರದಿ 2023

ವಿಶ್ವಸಂಸ್ಥೆಯ ಜಾಗತಿಕ ಜಲ ಅಭಿವೃದ್ಧಿ ವರದಿ 2023

ಸುದ್ದಿಯಲ್ಲಿ ಏಕಿದೆ? “ನೀರಿಗಾಗಿ ಪಾಲುದಾರಿಕೆ ಮತ್ತು ಸಹಕಾರ” ವರದಿಯನ್ನು ವಿಶ್ವಸಂಸ್ಥೆ 2023 ಜಲ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗಿದೆ.

ವರದಿಯಲ್ಲಿರುವ ಅಂಶಗಳು

  • ಏಷ್ಯಾದಲ್ಲಿ ಶೇ 80ರಷ್ಟು ಜನರು ಅಂತರ್ಜಲ ತೀರಾ ಕಡಿಮೆ ಇರುವ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಮುಖ್ಯವಾಗಿ ಈಶಾನ್ಯ ಚೀನಾ, ಭಾರತ ಮತ್ತು ಪಾಕಿಸ್ತಾನಗಳಲ್ಲಿ ಅಂತರ್ಜಲ ಸರಿಯಾಗಿ ಲಭ್ಯವಾಗುತ್ತಿಲ್ಲ.
  • “ನೀರಿನ ತತ್ವಾರ ಎದುರಿಸುತ್ತಿರುವ ಜಾಗತಿಕ ನಗರ ಜನಸಂಖ್ಯೆಯ ಪ್ರಮಾಣವು 2016ರಲ್ಲಿನ 933 ಮಿಲಿಯನ್‌ನಿಂದ (ಜಾಗತಿಕ ನಗರ ಜನಸಂಖ್ಯೆಯ ಮೂರನೇ ಎರಡು) 2050ರ ವೇಳೆಗೆ 1.7 ರಿಂದ 2.4 ಬಿಲಿಯನ್ ಜನಸಂಖ್ಯೆಗೆ ತಲುಪಲಿದೆ. ಭಾರತವು ಇದರಲ್ಲಿ ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕುವ ಸಂಭವವಿದೆ” ಎಂದು ವರದಿ ವಿವರಿಸಿದೆ.
  • ಜಾಗತಿಕವಾಗಿ 2 ಬಿಲಿಯನ್ ಜನರಿಗೆ ಸುರಕ್ಷಿತ ಕುಡಿಯುವ ನೀರು ಸಿಗುತ್ತಿಲ್ಲ. 3.6 ಬಿಲಿಯನ್ ಜನರಿಗೆ ಸುರಕ್ಷಿತ ನೈರ್ಮಲ್ಯ ವ್ಯವಸ್ಥೆ ಲಭಿಸುತ್ತಿಲ್ಲ”.
  • ಕೇವಲ ನಗರಗಳು ಹಾಗೂ ಕೈಗಾರಿಕಾ ಬೆಳವಣಿಗೆಯಿಂದ ಕೃಷಿಯವರೆಗೆ ಜಗತ್ತಿನ ನೀರಿನ ಪೂರೈಕೆಯ ಶೇ 70ರಷ್ಟು ಬಳಕೆಯಾಗುತ್ತಿದೆ”.

ಉಪಾಯಗಳು

  • “ಜಾಗತಿಕ ಜಲ ಬಿಕ್ಕಟ್ಟು ನಿಯಂತ್ರಣ ತಪ್ಪಿ ಹೋಗುವುದನ್ನು ತಡೆಯಲು ಪ್ರಬಲವಾದ ಅಂತಾರಾಷ್ಟ್ರೀಯ ಯಾಂತ್ರಿಕತೆಯನ್ನು ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
  • ನೀರು ನಮ್ಮ ಸಾಮಾನ್ಯ ಭವಿಷ್ಯ. ಅದನ್ನು ಸಮಾನವಾಗಿ ಹಂಚಿಕೆ ಮಾಡುವುದು ಮತ್ತು ಅದರ ಸುಸ್ಥಿರತೆಯನ್ನು ನಿಭಾಯಿಸಲು ಜತೆಯಾಗಿ ಕೆಲಸ ಮಾಡುವುದು ಅವಶ್ಯಕವಾಗಿದೆ.
    “ಈಗ ಎದುರಾಗುತ್ತಿರುವ ಅನಿಶ್ಚಿತತೆಗಳನ್ನು ನಾವು ಈಗಲೇ ಬಗೆಹರಿಸಲು ಮುಂದಾಗದೆ ಇದ್ದರೆ, ಖಂಡಿತವಾಗಿಯೂ ಜಾಗತಿಕ ಬಿಕ್ಕಟ್ಟು ತಲೆದೋರುತ್ತದೆ. ನೀರಿನ ಲಭ್ಯತೆ ಕಡಿಮೆಯಾಗುತ್ತಿರುವುದು ಒಂದೆಡೆಯಾದರೆ, ಅದಕ್ಕೆ ಬೇಡಿಕೆ ಹೆಚ್ಚುತ್ತಿರುವುದು ಮತ್ತೊಂದು.
  • ನೀರು ದೇಶಗಳ ನಡುವಿನ ಸಂಘರ್ಷದ ಅಂಶವೂ ಹೌದು. ಈ ಕುರಿತಾದ ವಿವಾದಗಳನ್ನು ಸಮರ್ಪಕವಾಗಿ ಬಗೆಹರಿಸುವುದು ಬಹಳ ಅಗತ್ಯವಾಗಿದೆ. ಇದಕ್ಕಾಗಿ ಪಾಲುದಾರಿಕೆ ಮತ್ತು ಸಹಕಾರಕ್ಕೆ ಆದ್ಯತೆ ನೀಡಬೇಕು ಎಂದಿರುವ ವರದಿ, ಭಾರತ ಮತ್ತು ನೇಪಾಳ ನಡುವಿನ ಪಂಚೇಶ್ವರ ಬಹು ಉದ್ದೇಶ ಯೋಜನೆ ಕುರಿತಾದ ಮಹಾಕಾಳಿ ಒಪ್ಪಂದವನ್ನು ಉದಾಹರಣೆಗಾಗಿ ನೀಡಿದೆ.

ವರದಿ ಪ್ರಕಾರ  ಭಾರತದ  ಸ್ಥಿತಿ

  • 2016ರಲ್ಲಿ 933 ಮಿಲಿಯನ್ ನಗರ ಜನರು ನೀರಿನ ಕೊರತೆಯಿಂದ ಸಂಕಷ್ಟಕ್ಕೆ ತುತ್ತಾಗಿದ್ದು, 2050ರ ವೇಳೆಗೆ ಇದು 1.7- 2.4 ಬಿಲಿಯನ್‌ ಜನರಿಗೆ ತಲುಪಲಿದೆ. ಇದರ ಅತಿ ಕೆಟ್ಟ ಪರಿಣಾಮ ಭಾರತದ ಮೇಲೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಇನ್ನು ಎರಡೂವರೆ ದಶಕಗಳಲ್ಲಿ ಭಾರತದಲ್ಲಿ ಕುಡಿಯುವ ನೀರೇ ಸಿಗುವುದಿಲ್ಲ.

ಇದಕ್ಕೆ ಕಾರಣ : ಕೆರೆಗಳು ಮುಚ್ಚುತ್ತಿವೆ, ನದಿ ಮತ್ತು ಕೊಳ್ಳಗಳು ಬತ್ತುತ್ತಿವೆ, ಹಳ್ಳಿಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇವುಗಳ ಜತೆಗೆ ಇರುವ ನೀರೂ ಕಲುಷಿತಗೊಳ್ಳುತ್ತಿದೆ.