Published on: October 20, 2021
ಮಾತಾಡ್ ಮಾತಾಡ್ ಕನ್ನಡ
ಮಾತಾಡ್ ಮಾತಾಡ್ ಕನ್ನಡ
ಸುದ್ಧಿಯಲ್ಲಿ ಏಕಿದೆ? ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಚೇರಿ, ಉದ್ಯಮ, ಅಂಗಡಿ ಮುಂಗಟ್ಟು, ಮನೆ– ಮನೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸಂಪೂರ್ಣ ಕನ್ನಡದಲ್ಲಿ ಮಾತನಾಡುವ, ಬರೆಯುವ ಹಬ್ಬದ ರೀತಿಯಲ್ಲಿ ‘ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ.
- ಈ ಅಭಿಯಾನದ ಸಂದರ್ಭದಲ್ಲಿ ಎಲ್ಲರೂ ಕನ್ನಡದಲ್ಲೇ ಮಾತನಾಡುವುದು, ಕನ್ನಡದಲ್ಲೇ ವ್ಯವಹರಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಕನ್ನಡವನ್ನೇ ಬಳಸುವುದು, ಕನ್ನಡೇತರರಿಗೆ ಕನ್ನಡ ಕಲಿಸುವುದು, ಕನ್ನಡದಲ್ಲೇ ಸಹಿ ಮಾಡುವುದು, ಐಟಿ–ಬಿಟಿ ಕಂಪನಿಗಳಲ್ಲಿ ಕನ್ನಡದಲ್ಲೇ ಮಾತನಾಡುವುದು ಮತ್ತು ಎಲ್ಲ ಮಾಧ್ಯಮಗಳಲ್ಲಿಯೂ ಸರಿಯಾದ ಕನ್ನಡವನ್ನೇ ಬಳಸುವ ಮೂಲಕ ಕನ್ನಡ ಹಬ್ಬದ ವಾತಾವರಣ ಸೃಷ್ಟಿಸೋಣ.
- ಭಾಷೆ, ಸಂಸ್ಕೃತಿ, ಉಡುಗೆ ತೊಡುಗೆ ಮೂಲಕ ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇದರಿಂದ ಭಾಷೆಯ ಮಹತ್ವವೂ ಗೊತ್ತಾಗುತ್ತದೆ. ಜಾಗತೀಕರಣದ ಪರಿಣಾಮ ನೆಲದ ಭಾಷೆ ಹಿಂದಕ್ಕೆ ಸರಿದು ಅನ್ಯ ಭಾಷೆ ಮುನ್ನೆಲೆಗೆ ಬಂದಿದೆ. ಇದನ್ನು ಯುವ ಪೀಳಿಗೆಗೆ ತಿಳಿಸಬೇಕು ಎಂಬ ಉದ್ದೇಶದಿಂದಲೇ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲ ವ್ಯಕ್ತಿಗಳಿಗೂ ಮತ್ತು ಮನೆಗಳಿಗೂ ಕನ್ನಡ ಭಾಷೆಯ ಮಹತ್ವ ತಿಳಿಸುವುದೇ ಗುರಿಯಾಗಿದೆ
- ಈ ಅಭಿಯಾನಕ್ಕೆ 24 ರಂದು ಚಾಲನೆ ನೀಡಲಾಗುವುದು. ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯಗಳ ಜನರು ಒಂದು ವಾರದಲ್ಲಿ 100 ಕನ್ನಡ ವಾಕ್ಯಗಳನ್ನು ಕಲಿಯುವ ಮೂಲಕ ಕನ್ನಡದ ಹಬ್ಬದಲ್ಲಿ ಪಾಲ್ಗೊಳ್ಳಬೇಕು