Published on: December 16, 2021
ಆರ್ಎನ್ಆರ್-15048 ಎನ್ನುವ ಭತ್ತದ ತಳಿ
ಆರ್ಎನ್ಆರ್-15048 ಎನ್ನುವ ಭತ್ತದ ತಳಿ
ಸುದ್ಧಿಯಲ್ಲಿ ಏಕಿದೆ ? ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ವೈಕೆಮೊಳೆ ಮತ್ತು ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ನೂರು ಜನ ರೈತರಿಗೆ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಹೈದರಾಬಾದ್ ಹಾಗೂ ತೆಲಂಗಾಣದಲ್ಲಿರುವ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಿದ್ದಪಡಿಸಿರುವ RNR -15048 ಎನ್ನುವ ಭತ್ತದ ತಳಿಯನ್ನು ಪರಿಚಯಿಸಿಕೊಟ್ಟಿದೆ. ತನ್ನ ವಿಶೇಷ ಗುಣಲಕ್ಷಣಗಳಿಂದ ಈ ತಳಿ ಗಮನ ಸೆಳೆದಿದೆ.
ಭತ್ತದ ವಿಶೇಷತೆಗಳು
- ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯುವ ಇದು ರೋಗ ನಿರೋಧಕ ಹಾಗೂ ಇತರೆ ರೋಗಗಳನ್ನು ತಡೆಗಟ್ಟುವ ಗುಣ ಹೊಂದಿದೆ. ಇದರ ಧಾನ್ಯದ ಹಾಗೂ ಅಕ್ಕಿಯ ಗುಣಮಟ್ಟ ಬೇರೆ ತಳಿಗಳಿಗಿಂತ ಉತ್ತಮವಾಗಿದೆ. ಆರ್ ಎನ್ ಆರ್ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಹೀಗಾಗಿ ಇದನ್ನು ಡಯಾರೈಸ್ ಎಂದೂ ಕರೆಯಲಾಗುತ್ತದೆ. ಅಲ್ಲದೆ ಈ ತಳಿಯ ಒಂದು ಕ್ವಿಂಟಾಲ್ ಭತ್ತದಿಂದ ಸುಮಾರು 65 ಕೆ.ಜಿಯಷ್ಟು ಅಕ್ಕಿ ಉತ್ಪಾದನೆಯಾಗಲಿದೆ.
- ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ನಾಲ್ಕು ವರ್ಷಗಳ ಹಿಂದೆಯಷ್ಟೆ ಪರಿಚಯಿಸಿರುವ ಈ ತಳಿಯು ಕೇವಲ 125 ದಿನಗಳಲ್ಲಿ ಕಟಾವಿಗೆ ಬರುವುದಲ್ಲದೇ, ಇದರಿಂದ ಒಂದು ಎಕರೆಯಲ್ಲಿ ಸುಮಾರು 40 ಕ್ವಿಂಟಾಲ್ ಇಳುವರಿಯನ್ನು ತೆಗೆಯಬಹುದಾಗಿದೆ. ಮಣ್ಣಿನ ಸಾರ ಕಡಿಮೆ ಹಾಗೂ ಕಪ್ಪು ಮಣ್ಣು ಪ್ರದೇಶದಲ್ಲಿ ಒಂದು ಎಕರೆಗೆ ಸುಮಾರು 25 ರಿಂದ 30 ಕ್ವಿಂಟಾಲ್ ಇಳುವರಿ ಕೊಡುವ ಸಾಮರ್ಥ್ಯ ಈ ತಳಿಗೆ ಇದೆ. ಇದಕ್ಕೆ ಯಾವುದೇ ರೋಗ ಭಾಧಿಸುವುದಿಲ್ಲ ಎನ್ನುವುದು ವಿಶೇಷ. ಅಲ್ಲದೇ ಕಳೆ ನಿರ್ವಹಣೆ ಕೂಡ ಸುಲಭವಾಗಿದ್ದು, ಈ ಪದ್ಧತಿಯಲ್ಲಿ ಕಳೆ ನಿರ್ವಹಣೆಗೆ ಕೇವಲ 1 ರಿಂದ 2 ಸಾವಿರ ರೂ.ಗಳವರೆಗೆ ಮಾತ್ರ ಖರ್ಚಾಗಲಿದೆ. ಹೀಗಾಗಿ ಇದರ ನಿರ್ವಹಣೆಯೂ ಸುಲಭ, ಖರ್ಚು ಕೂಡ ಕಡಿಮೆ.