Published on: July 16, 2023

ಅನ್ನಭಾಗ್ಯ ಯೋಜನೆ

ಅನ್ನಭಾಗ್ಯ ಯೋಜನೆ

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ರಾಜ್ಯ ಸರ್ಕಾರ 2023 ಜುಲೈ 1ರಿಂದ ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿದೆ. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವ ಯೋಜನೆ ಇದಾಗಿದೆ. ಆದರೆ, ಅಕ್ಕಿ ದಾಸ್ತಾನು ಕೊರತೆಯಿಂದ 5 ಕೆಜಿ ಅಕ್ಕಿ ನೀಡಿ, ಇನ್ನುಳಿದ ಐದು ಕೆಜಿ ಅಕ್ಕಿಯ ಬದಲು ಹಣ ನೀಡುತ್ತಿದೆ.

ಮುಖ್ಯಾಂಶಗಳು

  • ಹಣ ನೀಡುವುದು ತಾತ್ಕಾಲಿಕವಷ್ಟೇ ಅಕ್ಕಿ ಕೊರತೆ ಸಮಸ್ಯೆ ನೀಗಿದ ಬಳಿಕ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಸದ್ಯಕ್ಕೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ ತಲಾ 170 ರೂಪಾಯಿಯನ್ನು ನೀಡಲಾಗುತ್ತಿದೆ.
  • ಯೋಜನೆಯನ್ನು ಬಡವರು ಮತ್ತು ನಿರ್ಗತಿಕರಿಗಾಗಿ ರೂಪಿಸಲಾಗಿದೆ. ಆದರೆ, ಆರ್ಥಿಕ ಸ್ಥಿತಿವಂತರೂ ಕೂಡ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರ್ಕಾರಕ್ಕೆ ಗಮನಕ್ಕೆ ಬಂದಿದ್ದು, ಅನರ್ಹ ರೇಷನ್ ಕಾರ್ಡ್ ರದ್ದುಗೊಳಿಸುವ ಹಿನ್ನಲೆಯಲ್ಲಿ ರೇಷನ್​ ಕಾರ್ಡ್​ ಅನ್ನು ಆಧಾರ್​ಗೆ ಲಿಂಕ್ ಮಾಡಲಾಗುತ್ತಿದೆ.
  • ರೇಷನ್​ ಕಾರ್ಡ್​ ಮಾತ್ರವಲ್ಲದೆ, ಬ್ಯಾಂಕ್‌ ಖಾತೆಗೂ ಆಧಾರ್ ಲಿಂಕ್‌ ಕಡ್ಡಾಯವಾಗಿ ಆಗಿರಬೇಕು. ಮನೆಯ ಮುಖ್ಯಸ್ಥರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ.

ಮಾರ್ಗಸೂಚಿಗಳು

  • ಅಂತ್ಯೋದಯ ಕಾರ್ಡು ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಕ್ಕೆ ನಗದು ವರ್ಗಾವಣೆ ಸೌಲಭ್ಯ ಸಿಗುವುದಿಲ್ಲ. ಈಗಾಗಲೇ ಅಂತ್ಯೋದಯ ಕಾರ್ಡ್‌ನಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಜನ ಹೊಂದಿರುವ ಕುಟುಂಬಗಳು 30 ಕೆಜಿ ಅಕ್ಕಿ ಪಡೆಯುತ್ತಿರುವುದರಿಂದ ಅವರಿಗೆ ಹಣ ನೀಡದಿರಲು ನಿರ್ಧರಿಸಿದೆ.
  • ಮೂರಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರಿದ್ದರೆ ಮಾತ್ರ ಹೆಚ್ಚುವರಿ ಸದಸ್ಯರಿಗೆ ಹಣ ಸಿಗಲಿದೆ. 4 ಸದಸ್ಯರು ಇರುವ ಕುಟುಂಬಕ್ಕೆ 170 ರೂ. ಐವರು ಸದಸ್ಯರಿದ್ದರೆ 340 ರೂ., ಆರು ಸದಸ್ಯರಿದ್ದರೆ 510 ರೂ.ಗಳನ್ನು ನೀಡಲಾಗುವುದು. ಹೆಚ್ಚಿನ ಸದಸ್ಯರು ಇದ್ದಲ್ಲಿ ಇದೇ ಅನುಪಾತದಲ್ಲಿ ದುಡ್ಡನ್ನು ನೀಡಲಾಗುತ್ತದೆ.
  • ಕಳೆದ ಮೂರು ತಿಂಗಳುಗಳಲ್ಲಿ ಪಡಿತರ ಸೌಲಭ್ಯ ಪಡೆದಿದ್ದರೆ ಮಾತ್ರ ಅನ್ನಭಾಗ್ಯ ನಗದು ವರ್ಗಾವಣೆಗೆ ಕುಟುಂಬ ಅರ್ಹವಾಗಲಿದೆ.
  • ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಬಿಪಿಎಲ್‌ ಕುಟುಂಬಗಳನ್ನು ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲು ಸರ್ಕಾರ ನಿರ್ಧರಿಸಿದೆ. ಕುಟುಂಬದ ಮುಖ್ಯಸ್ಥರನ್ನು ಕುಟುಂಬಗಳು ಆಯ್ಕೆ ಮಾಡಿಕೊಳ್ಳಬೇಕು. ಮಹಿಳಾ ಸದಸ್ಯರಿರುವ ಬಿಪಿಎಲ್‌ ಕಾರ್ಡ್‌ಗಳಲ್ಲಿ ಮಹಿಳೆಯರನ್ನು ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಬೇಕು. ಪ್ರಮುಖವಾಗಿ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಣೆ ಮಾಡಬೇಕು.

ಹಿನ್ನೆಲೆ

  • ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 2013 ರಿಂದ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತಂದಿದ್ದರು. ಒಂದು ರೂ.ಗೆ ಒಂದು ಕೆ.ಜಿ ಆಹಾರಧಾನ್ಯ ನೀಡುವ ಯೋಜನೆಯಾಗಿದೆ.

ಅಂತ್ಯೋದಯ ಅನ್ನ ಯೋಜನೆ

  • ಕೇಂದ್ರ ಸರ್ಕಾರವು ಎರಡು ಹೊತ್ತು ಊಟಕ್ಕೆ ಗತಿಯಿಲ್ಲದ ಅತ್ಯಂತ ಕಡು ಬಡವರಿಗಾಗಿ ಅಂತ್ಯೋದಯ ಅನ್ನ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಸದರಿ ಯೋಜನೆಯನ್ನು ಆಗಸ್ಟ್ 2002 ರಿಂದ ಜಾರಿಗೊಳಿಸಲಾಗಿದೆ. ಬಡತನ ರೇಖೆಯಲ್ಲಿ ಅತ್ಯಂತ ಕೆಳಗಿನ ಸ್ತರದ ಕುಟುಂಬಗಳಾದ ಭೂ ರಹಿತ ಕೃಷಿ ಕಾರ್ಮಿಕರು, ವಿಧವೆಯು ಮುಖ್ಯಸ್ಥರಾಗಿರುವ ಕುಟುಂಬಗಳು, ಯಾವುದೇ ನಿರ್ದಿಷ್ಟ ವರಮಾನವಿಲ್ಲದ ಹೆಚ್.ಐ.ವಿ. ಪೀಡಿತರು/ಬಾಧಿತರು ಇರುವ ಕುಟುಂಬಗಳು, ಯಾವುದೇ ನಿಗದಿತ ವರಮಾನವಿಲ್ಲದ ವೃದ್ಧರು ಮುಖ್ಯಸ್ಥರಾಗಿರುವ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತಾರೆ.