Published on: April 6, 2023

ಅಪರೂಪದ ಖನಿಜಗಳ ಪತ್ತೆ

ಅಪರೂಪದ ಖನಿಜಗಳ ಪತ್ತೆ

ಸುದ್ದಿಯಲ್ಲಿ ಏಕಿದೆ? ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಹೈದರಾಬಾದ್‌ನ ತಜ್ಞರು 16 ಬಗೆಯ ಅಮೂಲ್ಯ ಖನಿಜಗಳನ್ನು ಪತ್ತೆ ಮಾಡಿದ್ದಾರೆ.

ಮುಖ್ಯಾಂಶಗಳು

 • ಅನಂತಪುರ ಜಿಲ್ಲೆಯಲ್ಲಿ ಹೇರಳವಾಗಿ ಸಿಗುವ ಸೈನೇಟ್ಸ್ ಎಂದು ಕರೆಯಲಾಗುವ ಅಸಂಪ್ರದಾಯಿಕ ಕಲ್ಲುಗಳ ಸಂಶೋಧನೆ ನಡೆಸಿದ ವೇಳೆ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಗೆ ಅತ್ಯಮೂಲ್ಯ ಖನಿಜಗಳ ನಿಕ್ಷೇಪ ಪತ್ತೆಯಾಗಿದೆ.
 • ಸಿಕ್ಕಿರುವ ಈ ಖನಿಜಗಳನ್ನು ಲೋಹ ಶಾಸ್ತ್ರೀಯವಾಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಲ್ಕಲೈನ್ ಸೈನೇಟ್ ಸಂಕೀರ್ಣಗಳ ಪರಿಣಾಮಕಾರಿ ಅಧ್ಯಯನ ನಡೆಸಲಾಗುತ್ತಿದೆ. ಅಲ್ಕಲೈನ್ ಸೈನೇಟ್ ಸಂಕೀರ್ಣಗಳು ಸಾಮಾನ್ಯವಾಗಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪಶ್ಚಿಮ ಹಾಗೂ ನೈರುತ್ಯ ಭಾಗಗಳಲ್ಲಿ ಕಂಡು ಬರುತ್ತದೆ.
 • ಈ ಹಿಂದೆ ಭೂಗರ್ಭ ಸರ್ವೇಕ್ಷಣಾ ಇಲಾಖೆ ಕೂಡಾ ಈ ಭಾಗದಲ್ಲಿ ಅಪರೂಪದ ಖನಿಜಗಳ ಇರುವಿಕೆ ಬಗ್ಗೆ ಸೂಚನೆ ನೀಡಿತ್ತು. ಆ ಬಳಿಕ ಈ ಭಾಗದಲ್ಲಿ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ ಸಮಗ್ರ ಸಂಶೋಧನೆ ಕೈಗೊಂಡಿತ್ತು.
 • ಅನಂತಪುರ ಜಿಲ್ಲೆ ಮಾತ್ರವಲ್ಲ ಚಿತ್ತೂರು ಜಿಲ್ಲೆಯಲ್ಲೂ ಅಪರೂಪದ ಖನಿಜಗಳ ಇರುವಿಕೆ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಈ ಪ್ರದೇಶವು ಒಟ್ಟು 18 ಚದರ ಕಿ. ಮೀ. ವಿಸ್ತಾರದಲ್ಲಿದೆ. ಈ ಭಾಗದಲ್ಲಿ ಒಟ್ಟು 300 ಮಾದರಿಗಳನ್ನು ಸಂಗ್ರಹ ಮಾಡಲಾಗಿದ್ದು, ಭೂ ರಸಾಯನ ಅಧ್ಯಯನಗಳು ನಡೆಯುತ್ತಿವೆ.

ಪತ್ತೆಯಾದ ಖನಿಜಗಳು

 • ಲ್ಯಾಂಥನೈಡ್ ಸರಣಿಯ ಖನಿಜಗಳಾದ ಅಲ್ಲನೈಟ್, ಸೆರಿಯೇಟ್, ಥೋರೈಟ್, ಕೊಲಂಬೈಟ್, ತಂತಲೈಟ್, ಅಪಟೈಟ್, ಝಿರ್‌ಕಾನ್, ಮೊನಾಝೈಟ್, ಪೈರೋಕ್ಲೋರ್ ಯುಕ್ಸಿನೈಟ್ ಹಾಗೂ ಫ್ಲೂರೈಟ್ ಖನಿಜಗಳ ಅತಿ ದೊಡ್ಡ ನಿಕ್ಷೇಪ ಲಭ್ಯವಾಗಿದೆ.
 • ಅನಂತಪುರ ಜಿಲ್ಲೆಯ ರೆಡ್ಡಿ ಪಲ್ಲೆ ಹಾಗೂ ಪೆದ್ದವಾಡಗಾರು ಗ್ರಾಮಗಳಲ್ಲಿ ಝಿರ್‌ಕಾನ್ ಖನಿಜದ ನಿಕ್ಷೇಪ ಅತಿ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿದೆ.
 • ಮೋನಾಝೈಟ್ ಖನಿಜದ ಅತ್ಯುತ್ಕೃಷ್ಟ ಸಂಗ್ರಹವು ಹಲವು ಬಣ್ಣಗಳಲ್ಲಿ ಲಭ್ಯವಾಗಿದ್ದು, ಇವು ವಿಕಿರಣಶೀಲ ಖನಿಜಗಳಾಗಿವೆ.

ಈ  ಖನಿಜಗಳ ಉಪಯೋಗ

 • ಈ ಖನಿಜಗಳನ್ನು ಕಾರು, ಮೊಬೈಲ್, ಟಿವಿ ಸೇರಿದಂತೆ ಹಲವು ಉಪಕರಣಗಳ ತಯಾರಿಕೆಗೆ ಬಳಸುತ್ತಾರೆ. ಈ ಖನಿಜಗಳು ಅತ್ಯಾಧುನಿಕ ಉಪಕರಣಗಳ ತಯಾರಿಕೆಗೆ ಅತ್ಯಗತ್ಯವಾಗಿ ಬೇಕಾಗಿದ್ದು, ತಜ್ಞರ ಶೋಧದಿಂದಾಗಿ ಭಾರತದ ಉತ್ಪಾದನಾ ವಲಯಕ್ಕೆ ಲಾಭವಾಗಲಿದೆ.
 • ಈ ಖನಿಜಗಳನ್ನು ಶುದ್ಧ ಇಂಧನ, ಅಂತರಿಕ್ಷಯಾನ, ರಕ್ಷಣೆ ಹಾಗೂ ಉತ್ಪಾದನಾ ವಲಯಗಳಲ್ಲಿ ಬಳಸಬಹುದಾಗಿದೆ. ಗಾಳಿ ಯಂತ್ರಗಳು, ಜೆಟ್ ವಿಮಾನಗಳು ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ತಯಾರಿಕೆಗೆ ಈ ಖನಿಜಗಳು ಅತ್ಯಗತ್ಯವಾಗಿ ಬೇಕಾಗಿವೆ.
 • ರಕ್ಷಣಾ ಸಾಧನಗಳ ತಯಾರಿಕೆಯಲ್ಲಿ ಇದು ಅನಿವಾರ್ಯವಾಗಿದೆ
 • ಶಕ್ತಿಯ ಹೊರೆಯನ್ನು ಕಡಿಮೆ ಮಾಡಲು ಅಪರೂಪದ ಭೂಮಿಯ ಖನಿಜಗಳು ಭಾರತಕ್ಕೆ ಬಹಳ ಮುಖ್ಯ ಪಾತ್ರ ವಹಿಸುತ್ತವೆ.
 • ದೇಶದಾದ್ಯಂತ ಹರಿಯುವ ನದಿಗಳನ್ನು ಶುದ್ಧೀಕರಿಸಲು ಅತ್ಯಗತ್ಯವಾಗಿವೆ .
 • ಈ ಖನಿಜಗಳು ವೇಗ ವರ್ಧಕಗಳಾಗಿದ್ದು, ಶಾಖವಿಲ್ಲದ ಬೆಳಕನ್ನು ಒದಗಿಸುವ ಸಾಮರ್ಥ್ಯವುಳ್ಳದ್ದಾಗಿದೆ.

ಲೋಹ ಶಾಸ್ತ್ರ

 • ಭೂ ಗರ್ಭ ಶಾಸ್ತ್ರದ ಅಧ್ಯಯನದಲ್ಲಿ ಲೋಹ ಶಾಸ್ತ್ರ ಕೂಡಾ ಒಂದು ವಿಭಾಗವಾಗಿದೆ. ಯಾವುದೇ ಪ್ರದೇಶದ ಭೌಗೋಳಿಕ ಇತಿಹಾಸ, ಅಲ್ಲಿ ಲಭ್ಯವಾಗುವ ಖನಿಜಗಳ ಸಂಗ್ರಹದ ಅನುವಂಶಿಕ ನಂಟನ್ನು ಈ ಶಾಸ್ತ್ರ ಅಧ್ಯಯನ ಮಾಡುತ್ತದೆ.