Published on: October 10, 2023

ಚುಟುಕು ಸಮಾಚಾರ : 7-9 ಅಕ್ಟೋಬರ್ 2023

ಚುಟುಕು ಸಮಾಚಾರ : 7-9 ಅಕ್ಟೋಬರ್ 2023

 • ಕರ್ನಾಟಕ ರಾಜ್ಯದಲ್ಲಿ ಪ್ರಾಣಿ ಕಡಿತಕ್ಕೊಳಗಾದವರಿಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಆ್ಯಂಟಿ ರೇಬಿಸ್ ಲಸಿಕೆ’ ಮತ್ತು ‘ರೇಬಿಸ್ ಇಮ್ಯುನೋಗ್ಲಾಬ್ಯುಲಿನ್’ ಚುಚ್ಚು ಮದ್ದನ್ನು ಉಚಿತವಾಗಿ ನೀಡಬೇಕು ಎಂದು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರಾಜ್ಯದಲ್ಲಿ ಈಗಾಗಲೇ ರೇಬಿಸ್ ರೋಗವನ್ನು ‘ಗುರುತಿಸಬಹುದಾದ ರೋಗ’ ಎಂದು ಘೋಷಿಸಲಾಗಿದೆ. ರೇಬಿಸ್ ರಣಾಂತಿಕ ಕಾಯಿಲೆಯಾಗಿದ್ದರೂ ಸಮಯೋಚಿತ ಚಿಕಿತ್ಸೆಯಿಂದ ಪ್ರಾಣ ಉಳಿಸಬಹುದು. 2030ರ ವೇಳೆಗೆ ನಾಯಿ ಕಡಿತದಿಂದ ಬರುವ ರೇಬಿಸ್ ರೋಗವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ.
 • ಏಕೈಕ ಹೆಣ್ಣು ಮಗುವಿನ ಪೋಷಕರಿಗೆ 2 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಘೋಷಿಸಿದ್ದಾರೆ. ಇಂದಿರಾ ಗಾಂಧಿ ಬಾಲಿಕಾ ಸುರಕ್ಷಾ ಯೋಜನೆಯಡಿ ಪ್ರೋತ್ಸಾಹಧನವನ್ನು ಈಗಿರುವ 35,000 ದಿಂದ 2 ಲಕ್ಷಕ್ಕೆ ಹೆಚ್ಚಿಸಲಾಗುವುದು. ಒಂದು ಹೆಣ್ಣು ಮಗು ಜನಿಸಿದ ನಂತರ ಕುಟುಂಬ ಯೋಜನೆ ಅಳವಡಿಸಿಕೊಳ್ಳುವ ಪೋಷಕರಿಗೆ 2 ಲಕ್ಷ, ಎರಡು ಹೆಣ್ಣುಮಕ್ಕಳ ನಂತರ ಇನ್ನೊಂ ದು ಮಗು ಬೇಡ ಎಂದು ನಿರ್ಧರಿಸುವವರಿಗೆ 1 ಲಕ್ಷ ನೀಡಲಾಗುವುದು.
 • ತೆಲಂಗಾಣದಲ್ಲಿ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬೆಳಗ್ಗಿನ ತಿಂಡಿ ನೀಡುವ ‘ಮುಖ್ಯಮಂತ್ರಿ ಉಪಹಾರ ಯೋಜನೆ’ಗೆ ತೆಲಂಗಾಣದಲ್ಲಿ ಚಾಲನೆ ದೊರೆತಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಗೆ ಹೋಗುವ ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆಯಾಗದಂತೆ ಮತ್ತು ದುಡಿಯುವ ವರ್ಗದ ತಾಯಂದಿರಿಗೆ ನೆರವಾಗುವ ಸಲುವಾಗಿ ಈ ಯೋಜನೆ ಆರಂಭಿಸಲಾಗಿದೆ.
 • ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ರೂ. 900 ಕೋಟಿ ವೆಚ್ಚದಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿಯವರು ಘೋಷಣೆ ಮಾಡಿದ್ದಾರೆ.
 • ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ 2023 : ‘ಕ್ವಾಂಟಮ್ ಡಾಟ್ಸ್’ ಎಂದು ಕರೆಯಲಾಗುವ ಅತ್ಯಂತ ಚಿಕ್ಕ ಕಣಗಳ ಕುರಿತು ನಡೆಸಿದ ಸಂಶೋಧನೆಗಾಗಿ ಅಮೆರಿಕದ ಮೂವರು ರಸಾಯನ ವಿಜ್ಞಾನಿಗಳಿಗೆ 2023ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಪ್ರಶಸ್ತಿಗೆ ಭಾಜನರಾದ ಎಂಐಟಿಯ ಮೌಂಗಿ ಬಾವೆಂಡಿ, ಕೊಲಂಬಿಯಾ ವಿಶ್ವವಿದ್ಯಾಲಯದ ಲೂಯಿಸ್ ಬ್ರುಸ್ ಹಾಗೂ ನ್ಯಾನೊ ಕ್ರಿಸ್ಟಲ್ ಟೆಕ್ನಾಲಜಿಯ ಅಲೆಕ್ಸಿ ಎಕಿಮೊವ್ ಅವರು ಎಲೆಕ್ಟ್ರಾನಿಕ್ಸ್ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುವ ಅತ್ಯಂತ ಪ್ರಕರ ಬೆಳಕು ಉತ್ಪಾದಿಸುವ ಕ್ವಾಂಟಮ್ ಡಾಟ್ಸ್ ಅಭಿವೃದ್ಧಿಯಲ್ಲಿ ಸಂಶೋಧನೆ ನಡೆಸಿದ್ದರು. ಇದನ್ನೂ  ಪುಟ್ಟದಾದ ಕ್ವಾಂಟಮ್ ಚುಕ್ಕಿ ಶೋಧ ಕೆಲವೇ ಕೆಲವು ಅಣುಗಳಷ್ಟು ವ್ಯಾಸ ಹೊಂದಿರುವ ಈ ಕ್ವಾಂಟಮ್ ಡಾಟ್ಸ್, ಟೆಲಿವಿಷನ್ ಪರದೆ ಹಾಗೂ ಎಲ್ಇಡಿ ದೀಪಗಳಲ್ಲೂ ಬಳಕೆಯಾಗುತ್ತಿದೆ. ಈ ಪ್ರಕರ ಬೆಳಕಿನಿಂದ ಕ್ಯಾನ್ಸರ್ ಕೋಶಗಳೂ ವೈದ್ಯರಿಗೆ ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಚುಕ್ಕಿಗಳಲ್ಲಿರುವ ಎಲೆಕ್ಟ್ರಾನ್ಗಳು ಅತ್ಯಂತ ನಿರ್ಬಂಧಿತ ಚಲನೆ ಹೊಂದಿರುತ್ತವೆ. ಇದರಿಂದಾಗಿ ಲಭ್ಯವಿರುವ ಬೆಳಕನ್ನೇ ಬಳಸಿಕೊಂಡು ಅತ್ಯಂತ ಪ್ರಕರ ಬಣ್ಣದ ಬೆಳಕನ್ನು ಇವು ಹೊರಸೂಸುತ್ತವೆ. ಈ ಬಾರಿಯ ಪ್ರಶಸ್ತಿ ಮೊತ್ತ ಶೇ 10ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಪ್ರತಿ ಭಾಗದ ಪ್ರಶಸ್ತಿಗಳು ರೂ. 8.28 ಕೋಟಿಯಷ್ಟಾಗಿದೆ. ವಿಜೇತರಿಗೆ 18 ಕ್ಯಾರೆಟ್ ಚಿನ್ನದ ಪದಕ ಸಿಗಲಿದೆ.
 • ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ 2023: ನಾರ್ವೆ ಬರಹಗಾರ ಹಾಗೂ ನಾಟಕಕಾರ ಜಾನ್ ಫಾಸಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ 2023ನೇ ಸಾಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಘೋಷಿಸಿದ ಸ್ವೀಡಿಶ್ ಅಕಾಡೆಮಿಯು, ‘ಜಾನ್ ಅವರ ನಾಟಕ ಹಾಗೂ ಬರಹಗಳು ಧ್ವನಿ ಇಲ್ಲದವರಿಗೆ ದನಿಯಾಗಿವೆ’ ಎಂದು ಬಣ್ಣಿಸಿದೆ. ಈ ಪ್ರಶಸ್ತಿಯೂ 10 ಲಕ್ಷ ಅಮೆರಿಕನ್ ಡಾಲರ್ ಮೊತ್ತ ಹಾಗೂ 18 ಕ್ಯಾರೆಟ್ ಚಿನ್ನದ ಪದಕವನ್ನು ಒಳಗೊಂಡಿದೆ. ಕಾದಂಬರಿಕಾರರು, ನಾಟಕ ಬರಹಗಾರರು, ಇತಿಹಾಸಕಾರರು, ತತ್ವಶಾಸ್ತ್ರ ಜ್ಞರು ಮತ್ತು ಕವಿಗಳಿಗಿಂತ ಭಿನ್ನವಾಗಿ ಸಾಧನೆ ಮಾಡಿದವರನ್ನು ಸಾಹಿತ್ಯ ಕ್ಷೇತ್ರಕ್ಕೆ ಆಯ್ಕೆ ಮಾಡಲಾಗುತ್ತದೆ.  2022ರ ನೊಬೆಲ್ ಪ್ರಶಸ್ತಿಯು ಅನ್ನೀ ಎರ್ನಾ ಕ್ಸ್ ಅವರಿಗೆ ಲಭಿಸಿತ್ತು. ಆಮೂಲಕ ಪ್ರತಿಷ್ಠಿತ ಪ್ರಶಸ್ತಿ ಪಡೆದ ಫ್ರಾನ್ಸ್ನ ಮೊದಲ ಮಹಿಳೆ ಎಂದೆನಿಸಿಕೊಂಡರು. 1913 ರ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ರವೀಂದ್ರನಾಥ ಟ್ಯಾಗೋರ್ ಅವರಿಗೆ ನೀಡಲಾಯಿತು
 • ನೊಬೆಲ್ ಶಾಂತಿ ಪುರಸ್ಕಾರ : ಮಹಿಳೆಯರ ಹಕ್ಕುಗಳು, ಪ್ರಜಾತಂತ್ರದ ಪರವಾಗಿ ಹಾಗೂ ಮರಣದಂಡನೆಯ ವಿರುದ್ಧಇರಾನ್ನಲ್ಲಿ ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ನರ್ಗೀಸ್ ಮೊಹಮ್ಮದಿ ಅವರಿಗೆ 2023ನೆಯ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ಘೋಷಿಸಲಾಗಿದೆ. ನರ್ಗೀಸ್ ಅವರು ಈಗ ಟೆಹರಾನ್ನ ಕುಖ್ಯಾತ ಎವಿನ್ ಜೈಲಿನಲ್ಲಿ ಇದ್ದಾರೆ. ಪಾಶ್ಚಿಮಾತ್ಯ ದೇಶಗಳ ಜೊತೆ ನಂಟು ಹೊಂದಿರುವವರನ್ನು, ರಾಜಕೀಯ ಕೈದಿಗಳನ್ನು ಈ ಜೈಲಿನಲ್ಲಿ ಇರಿಸಲಾಗಿದೆ. ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ 19ನೆಯ ಮಹಿಳೆ , ಇರಾನಿನ ಎರಡನೆಯ ಮಹಿಳೆ ನರ್ಗೀಸ್. ಈ ಹಿಂದೆ ಮಾನವ ಹಕ್ಕುಗಳ ಕಾರ್ಯಕರ್ತೆ ಶಿರಿನ್ ಎಬಾದಿ ಅವರಿಗೆ 2003ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಘೋಷಿಸಲಾಗಿತ್ತು. ನೊಬೆಲ್ ಪ್ರಶಸ್ತಿಯು 1 ಮಿಲಿಯನ್ ಡಾಲರ್ (ಅಂದಾಜು 8.32 ಕೋಟಿ) ನ
 • ಖಾಸಗಿ ವಲಯದ ಅತಿ ದೊಡ್ಡ ಚಿನ್ನದ ಗಣಿಯು ಮುಂದಿನ ವರ್ಷದ ಕೊನೆಯ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ನ ವ್ಯವಸ್ಥಾಪಕರು ತಿಳಿಸಿದ್ದಾರೆ.
 • ಡೆಕ್ಕನ್ ಗೋಲ್ಡ್ ಮೈನ್ಸ್ ಲಿ. (ಡಿಜಿಎಂ ಎಲ್) ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿರುವ ದೇಶದ ಏಕೈಕ ಚಿನ್ನ ಶೋಧ ಸಂಸ್ಥೆಯಾಗಿದೆ. ಅಭಿವೃದ್ಧಿ: ಖಾಸಗಿ ಕ್ಷೇತ್ರದ ಮೊದಲ ಚಿನ್ನದ ಗಣಿಯನ್ನು ಜಿಯೊಮೈಸೂರ್ ಸರ್ವಿಸಸ್ ಲಿ. ಕಂಪನಿಯು ಅಭಿವೃದ್ಧಿಪಡಿಸುತ್ತಿದೆ. ಇರುವ ಸ್ಥಳ : ಈ ಗಣಿಯು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಜೊನ್ನಗಿರಿಯಲ್ಲಿದೆ.
 • ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಭಾರತೀಯ ವಾಯುಪಡೆಯ 91ನೇ ದಿನಾಚರಣೆಯಲ್ಲಿ ಐಎಎಫ್ ಮುಖ್ಯಸ್ಥ ಅವರು ವಾಯುಪಡೆಯ ಹೊಸ ಪತಾಕೆ ಬಿಡುಗಡೆಗೊಳಿಸಿದರು. 72 ವರ್ಷಗಳ ಬಳಿಕ ಇಂಥದ್ದೊಂದು ಬದಲಾವಣೆಯನ್ನು ತಂದಿರುವ ಐಎಎಫ್, ತನ್ನ ಮೌಲ್ಯಗಳನ್ನು ಪ್ರತಿಫಲಿಸುವಂತೆ ಪತಾಕೆಯನ್ನು ವಿನ್ಯಾಸಗೊಳಿಸಲಾಗಿದೆ. ಅದರ ದ್ಯೋತಕವಾಗಿ ಪತಾಕೆ ಹಾರಾಡುವ ಜಾಗದಲ್ಲಿ (ಬಲಭಾಗದ ಮೂಲೆಯಲ್ಲಿ) ಐಎಎಫ್ನ ಲಾಂಛನವನ್ನು ಚಿತ್ರಿಸಲಾಗಿದೆ’.  ಈ ಧ್ವಜದಲ್ಲಿ ಮೇಲಿನ ಎಡಭಾಗದಲ್ಲಿ ತ್ರಿವರ್ಣ ಧ್ವಜ ಹಾಗೂ ಬಲಭಾಗದಲ್ಲಿ ಐಎಎಫ್ನ ಲಾಂಛನ ಇದೆ. ಇಷ್ಟು ದಿನಗಳು ಬಳಕೆಯಲ್ಲಿದ್ದ ಐಎಎಫ್ ಧ್ವಜವನ್ನು 1950ರಲ್ಲಿ ಅಂಗೀಕರಿಸಲಾಗಿತ್ತು.
 • ಕೋಲ್ಕತ್ತದ ‘ಸಿಟಿ ಆಫ್ ಜಾಯ್’ 2ನೇ ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕೊಪ್ಪಳ ಛಾಯಾಗ್ರಾಹಕ ಪ್ರಕಾಶ ಕಂದಕೂರ ಸೆರೆಹಿಡಿದ ಗವಿಸಿದ್ಧೇಶ್ವರರ ಜಾತ್ರೆಯ ರಥೋತ್ಸವದ ಚಿತ್ರ ಫೋಟೊ ಟ್ರಾವೆಲ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದೆ. ಇದೇ ಸ್ಪರ್ಧೆಯ ಮೊನೊಕ್ರೋಮ್ (ಕಪ್ಪು-ಬಿಳುಪು) ವಿಭಾಗದಲ್ಲಿ ಅವರ ‘ಫ್ರೆಂಡ್ಷಿಪ್ʼ ಶೀರ್ಷಿಕೆಯ ಮತ್ತೊಂದು ಚಿತ್ರಕ್ಕೂ ‘ಸಿಟಿ ಆಫ್ ಜಾಯ್’ ಕಂಚಿನ ಪದಕ ಲಭಿಸಿದೆ. ಪ್ರಕಾಶ ಕಂದಕೂರ ಫೊಟೋಗ್ರಫಿಕ್ ಸೊಸೈಟಿ ಆಫ್ ಅಮೆರಿಕಾ, ಗ್ಲೋಬಲ್ ಫೊಟೋ ಗ್ರಫಿಕ್ಯೂನಿಯನ್, ಇಂಡಿಯಾ ಇಂಟರ್ನ್ಯಾಷನಲ್ ಗ್ರೂಪ್ ಮತ್ತು ಬೆಂಗಾಲ್ ಫೊಟೋಗ್ರಫಿ ಇನ್ಸ್ಟಿಟ್ಯೂಟ್ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸ್ಪರ್ಧೆಯಲ್ಲಿ 30 ದೇಶಗಳ 126 ಜನ ಛಾಯಾಗ್ರಾಹಕರು ಭಾಗವಹಿಸಿದ್ದರು.
 • ಮ್ಯಾಂಡರಿನ್ ಭಾಷೆಯ ಪರಿಣತರ ತಂಡವೊಂದನ್ನು ಭಾರತೀಯ ಪ್ರಾದೇಶಿಕ ಸೇನೆಯು ನೇಮಿಸಿಕೊಂಡಿದೆ. ಚೀನಾ ಜತೆಗಿನ ಗಡಿಯಲ್ಲಿ ಈ ತಂಡವನ್ನು ನಿಯೋಜಿಸಿದೆ. ಗಡಿಯಲ್ಲಿ ಚೀನಾದ ಸೇನೆ ಜೊತೆಗಿನ ಮಾತುಕತೆ ವೇಳೆ ಪ್ರಾದೇಶಿಕ ಸೇನೆಯ ಸಂವಹನ ಸಾಮರ್ಥ್ಯವನ್ನು ವೃದ್ಧಿಸುವುದು ಈ ನೇಮಕಾತಿಯ ಉದ್ದೇಶವಾಗಿದೆ. ಮ್ಯಾಂಡರಿನ್ ಅಥವಾ ಪುಟೊಂಗ್ಹುವಾ ಚೀನಾದಲ್ಲಿ ಬಳಸಲಾಗುವ ಅತ್ಯಂತ ಸಾಮಾನ್ಯ ಉಪಭಾಷೆಯಾಗಿದೆ ಮತ್ತು ಇತರ ಚೀನೀ ಉಪಭಾಷೆಗಳನ್ನು ಮಾತನಾಡುವವರಿಂದ ಎರಡನೇ ಭಾಷೆಯಾಗಿ ಅಳವಡಿಸಲಾಗಿದೆ. ಚೀನಾದ ಅಧಿಕೃತ ಭಾಷೆಯಾದ ಮ್ಯಾಂಡರಿನ್ ಚೀನೀ ಶಾಲೆಗಳಲ್ಲಿ ಕಲಿಸುವ ಉಪಭಾಷೆಯಾಗಿದೆ.
 • ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು ಐಸಿಸಿ ವಿಶ್ವಕಪ್ನಲ್ಲಿ ಅತಿವೇಗವಾಗಿ 50 ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮತ್ತು ಒಟ್ಟಾರೆ ಐದನೇ ಬೌಲರ್ ಆಗಿದ್ದಾರೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ಅವರು ಈ ಮೈಲಿಗಲ್ಲು ಸಾಧಿಸಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾಗೆ (39 ಪಂದ್ಯಗಳಲ್ಲಿ 71 ವಿಕೆಟ್), ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (40 ಪಂ ದ್ಯಗಳಲ್ಲಿ 68 ವಿಕೆಟ್), ಲಸಿತ್ಮಾಲಿಂಗ (29 ಪಂ ದ್ಯಗಳಲ್ಲಿ 56 ವಿಕೆಟ್) ಮತ್ತು ಪಾಕಿಸ್ತಾನದ ವಾಸಿಂ ಅಕ್ರಂ 38 ಪಂದ್ಯಗಳಲ್ಲಿ 55 ವಿಕೆಟ್ ಗಳಿಸಿ ಸಾಧನೆಮಾಡಿದ್ದಾರೆ.
 • ಸುದ್ದಿಯಲ್ಲಿರುವ ಸ್ಥಳ: ಪಶ್ಚಿಮ ಅಫ್ಗಾನಿಸ್ತಾನದಲ್ಲಿಸಂಭವಿಸಿದ ಸರಣಿ ಭೂಕಂಪಗಳಿಂದ ಮೃತಪಟ್ಟವರ ಸಂಖ್ಯೆ 2,060ಕ್ಕೆ ಏರಿದೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಎರಡು ದಶಕದಲ್ಲಿ ದೇಶವನ್ನು ಅಪ್ಪಳಿಸಿದ ಭೀಕರ ಭೂಕಂಪಗಳಲ್ಲಿಇದೂ ಒಂದಾಗಿದೆ. ಜಿಂದಾಜಾನ್ ಮತ್ತು ಘೋರಿಯನ್ ಜಿಲ್ಲೆಗಳಲ್ಲಿ ಒಟ್ಟು 12 ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ. ಭೂಕಂಪದ ಕೇಂದ್ರಬಿಂದುವನ್ನು ವಾಯವ್ಯ ನಗರ ಹೆರಾತ್ನಲ್ಲಿ ಗುರುತಿಸಲಾಗಿದೆ. ಹೆರಾತ್ನಲ್ಲಿ 4.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆತಿಳಿಸಿದೆ.