Published on: June 2, 2023

ವಿಶ್ವ ತಂಬಾಕು ರಹಿತ ದಿನ 2023

ವಿಶ್ವ ತಂಬಾಕು ರಹಿತ ದಿನ 2023

ಸುದ್ದಿಯಲ್ಲಿ ಏಕಿದೆ?  ತಂಬಾಕು ಸೇವನೆಯಿಂದಾಗುವ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.

ಮುಖ್ಯಾಂಶಗಳು

 • ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯು ಎಚ್ಒ) 2023 ರ ಜಾಗತಿಕ ಅಭಿಯಾನವು ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆ ಉತ್ಪಾದನೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.
 • ಭವಿಷ್ಯದ ಪೀಳಿಗೆಯನ್ನು ರಕ್ಷಿಸಿ 2023 ರಲ್ಲಿ, ವಿಶ್ವ ತಂಬಾಕು ರಹಿತ ದಿನವನ್ನು “ನಮಗೆ ಆಹಾರ ಬೇಕು, ತಂಬಾಕು ಅಲ್ಲ” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ.
 • ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್‌ 19ನಿಂದ ಸಾವನ್ನಪ್ಪಿರುವವರ ಸಂಖ್ಯೆ ಗಿಂತ ಬೀಡಿ, ಸಿಗರೇಟ್‌, ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳ ಬಳಕೆಯಿಂದ ಮರಣ ಹೊಂದಿರುವವರ ಸಂಖ್ಯೆ ಅಧಿಕವಾಗಿದ್ದು, ಪ್ರತಿ ವರ್ಷ ಸರಿ ಸುಮಾರು 13.5-14 ಲಕ್ಷ ಜನ ದೇಶದಲ್ಲಿ ಬಲಿಯಾಗುತ್ತಿದ್ದಾರೆ.
 • ಭಾರತದಲ್ಲಿ 40 ಪ್ರತಿಶತದಷ್ಟು ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ಗಳು ತಂಬಾಕು ಮತ್ತು ಧೂಮಪಾನದಿಂದ ಉಂಟಾಗುತ್ತಿದೆ ಎಂದು ಅಧ್ಯಯನಗಳು ತಿಳಿವೆ.

ಉದ್ದೇಶ

 • ವಿಶ್ವ ತಂಬಾಕು ರಹಿತ ದಿನವು ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಜಾಗತಿಕ ಮಟ್ಟದಲ್ಲಿ ತಂಬಾಕಿನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಪರಿಣಾಮಕಾರಿ ನೀತಿಗಳು ಮತ್ತು ಕಾನೂನುಗಳನ್ನು ಉತ್ತೇಜಿಸುತ್ತದೆ.

WHO ನ ಗುರಿಗಳು

 • ತಂಬಾಕು ಸೇವನೆಯ ಅಪಾಯಗಳು, ತಂಬಾಕು ಕಂಪನಿಗಳು ನಡೆಸುವ ದುಷ್ಕೃತ್ಯಗಳು, ತಂಬಾಕು ಸಾಂಕ್ರಾಮಿಕದ ವಿರುದ್ಧ WHO ನ ಹೋರಾಟ ಮತ್ತು ಆರೋಗ್ಯಕರ ಜೀವನಕ್ಕಾಗಿ ತಮ್ಮ ಹಕ್ಕನ್ನು ಪಡೆಯಲು ಜನರು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು WHO ಗುರಿಯನ್ನು ಹೊಂದಿದೆ.
 • ಈ ದಿನವು ತಂಬಾಕು ಸೇವನೆಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವವರಿಗೆ ಮತ್ತು ತಂಬಾಕು ಸೇವನೆಯನ್ನು ನಿಲ್ಲಿಸಲು ಪ್ರಯತ್ನಿಸುವವರಿಗೆ ಸಹಾಯ ಮಾಡುತ್ತದೆ. ಜಾಗತಿಕ ಆಹಾರ ಬಿಕ್ಕಟ್ಟಿನ ನಡುವೆ ತಂಬಾಕಿನ ಬೆಳವಣಿಗೆಯನ್ನು ಪ್ರೋತ್ಸಾಹಿಸಿತ್ತಿರುವ ತಂಬಾಕು ಉದ್ಯಮದ ವಿರುದ್ಧ ಡಬ್ಲ್ಯುಎಚ್ಒ ಜಾಗೃತಿ ಮೂಡಿಸುತ್ತಿದೆ.
 • ತಂಬಾಕು ಸೇವನೆಯ ದುಷ್ಪರಿಣಾಮಗಳು ಮತ್ತು ಕ್ಯಾನ್ಸರ್, ಹೃದಯರಕ್ತನಾಳದ ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಗಳಂತಹ ಕಾಯಿಲೆಗಳೊಂದಿಗೆ ಅದರ ಸಂಬಂಧದ ಬಗ್ಗೆ ಜ್ಞಾನವನ್ನು ಹರಡಲು ವೇದಿಕೆಯನ್ನು ಒದಗಿಸುತ್ತದೆ.
 • ಇದು ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಮತ್ತು ತಂಬಾಕು ಮುಕ್ತ ಜಗತ್ತನ್ನು ಸೃಷ್ಟಿಸಲು ಉತ್ತೇಜಿಸುತ್ತದೆ.

ದಿನದ ಇತಿಹಾಸ:

 • ತಂಬಾಕು ಸೇವನೆಯ ವ್ಯಾಪಕ ಸ್ವರೂಪ ಮತ್ತು ಸಾರ್ವಜನಿಕರ ಮೇಲೆ ಅದರ ನಕಾರಾತ್ಮಕ ಪರಿಣಾಮಗಳ ವಿರುದ್ಧ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು 1987 ರಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಪ್ರಾರಂಭಿಸಿತು.

ತಂಬಾಕು ಸೇವನೆಯ ದುಷ್ಪರಿಣಾಮಗಳು

 • ತಂಬಾಕು ಸೇವನೆಯು ಗಂಭೀರವಾದ ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿದೆ. ತಂಬಾಕು ಸೇವನೆಯು ಸಮಾಜದಲ್ಲಿನ ವ್ಯಕ್ತಿಗಳು ಮತ್ತು ಕುಟುಂಬಗಳ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಹೊರೆಗೂ ಕಾರಣವಾಗಿದೆ.
 • ಧೂಮಪಾನದ ಅಪಾಯಗಳು: ಮುಖ ಸುಕ್ಕುಗಟ್ಟುವುದು, ಹೃದಯರಕ್ತನಾಳದ ಕಾಯಿಲೆಗಳು, ಶ್ವಾಸಕೋಶ, ಮೂತ್ರಪಿಂಡ, ಗಂಟಲು, ಬಾಯಿ, ಹೊಟ್ಟೆ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್. ಆಸ್ಟಿಯೊಪೊರೋಸಿಸ್, ಹಲ್ಲುಗಳು ನಿಶ್ಯಕ್ತಿಯಾಗುವುದು, ವೀರ್ಯಗಳ ಕೊರತೆ, ಕುರುಡುತನ, ಉಬ್ಬಸ, ಕೆಮ್ಮು, ಸೋಂಕಿತ ರಕ್ತ ಮತ್ತು ರೋಗನಿರೋಧಕ ಶಕ್ತಿ ಕುಂದುವುದು.

ಕರ್ನಾಟಕದ ಸ್ಥಿತಿ

 • ಡಬ್ಲ್ಯೂಎಚ್‌ಒ ನಡೆಸಿರುವ ಗ್ಲೋಬಲ್‌ ಅಡಲ್ಟ್ ತಂಬಾಕು ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 3 ಕೋಟಿ ಜನ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಕರ್ನಾಟಕದ ಜನಸಂಖ್ಯೆಯಲ್ಲಿ ಅರ್ಧಕ್ಕರ್ಧ ಮಂದಿ ಈ ಉತ್ಪನ್ನಗಳನ್ನು ಬಳಸುತ್ತಿರುವುದು ಕಂಡು ಬಂದಿದೆ.
 • ಈ ಪೈಕಿ ಶೇ.8.8ರಷ್ಟು ಧೂಮಪಾನಿಗಳು, ಶೇ.16.3ರಷ್ಟು ಧೂಮ ಪಾನ ರಹಿತ ತಂಬಾಕು ಬಳಕೆದಾರರು ಇದ್ದಾರೆ. ಇವರಲ್ಲಿ ಯುವಕರೇ ಹೆಚ್ಚು ವ್ಯಸನಿಗಳಾಗಿದ್ದಾರೆ.

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಕೈಗೊಂಡಿರುವ ಕ್ರಮಗಳು:

 • ಸಾರ್ವಜನಿಕರಿಂದ ಸಿಒಟಿಪಿಎ ಉಲ್ಲಂಘನೆಗಳನ್ನು ನೋಂದಾಯಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು “ಸ್ಟಾಪ್ಟೊಬ್ಯಾಕೊ’ ಎಂಬ ಆ್ಯಂಡ್ರಾಯಿಡ್‌ ಮೊಬೈಲ್‌ ಅಪ್ಲಿಕೇಶನ್‌ ಪರಿಚಯಿಸಿದೆ.
 • ನಗರಾಭಿವೃದ್ಧಿ ಇಲಾಖೆಯು 2022ರಲ್ಲಿ ತಂಬಾಕು ಮಾರಾಟಗಾರರ ಪರವಾನಗಿ ಕುರಿತು ಹೊರಡಿಸಿರುವ ಅಧಿಸೂಚನೆ ಪ್ರಕಾರ, ತಂಬಾಕು ಉತ್ಪನ್ನಗಳನ್ನು ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಕಡ್ಡಾಯವಾಗಿದೆ.
 • ಕರ್ನಾಟಕದಲ್ಲಿ 30ಕ್ಕೂ ಹೆಚ್ಚು ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ.
 • ಅಪ್ರಾಪ್ತ ವಯಸ್ಕರನ್ನು ತಂಬಾಕು ಹಾವಳಿಯಿಂದ ರಕ್ಷಿಸಲು “ತಂಬಾಕು ಮುಕ್ತ ಉತ್ಪಾದನೆ-2023′ ಎಂಬ ಹೊಸ ನೀತಿಯನ್ನು ಪರಿಚಯಿಸುವ ಪ್ರಕ್ರಿಯೆ ನಡೆಯುತ್ತಿದೆ.
 • ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ(ಸಿಒಟಿಪಿಎ) 2003ರ ರಾಜ್ಯ ಮಟ್ಟದ ತಿದ್ದುಪಡಿಯು ಸರ್ಕಾರದ ಪರಿಶೀಲನೆಯಲ್ಲಿದೆ.