Published on: September 27, 2022

ಹಲ್ಲಿಯ ಹೊಸ ಪ್ರಭೇದ

ಹಲ್ಲಿಯ ಹೊಸ ಪ್ರಭೇದ

ಸುದ್ದಿಯಲ್ಲಿ ಏಕಿದೆ?

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿಸಂರಕ್ಷಿತ ಪ್ರದೇಶದಲ್ಲಿ (ಬಿಆರ್‌ಟಿ) ಹಲ್ಲಿಯ ಹೊಸ ಪ್ರಭೇದ (‘ಉಮಾಶಂಕರ್‌ ಕುಬ್ಜ ಹಲ್ಲಿ’) ಪತ್ತೆಯಾಗಿದೆ.  ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಅಂಡ್ ದಿ ಎನ್ವಿರಾನ್‌ಮೆಂಟ್‌ (ಏಟ್ರೀ) ಸಂಶೋಧಕ ಡಾ.ಅರವಿಂದ್‌ ಎನ್‌.ಎ. ಹಾಗೂ ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್‌ ಅವರು ಹಲ್ಲಿಯ ಹೊಸ ಪ್ರಬೇಧವನ್ನು ಪತ್ತೆ ಮಾಡಿದ್ದು, ಅಧ್ಯಯನ ನಡೆಸಿ ಅದನ್ನು ‘ಕುಬ್ಜ ಹಲ್ಲಿ’ ಎಂದು ಗುರುತಿಸಿದ್ದಾರೆ.

ಮುಖ್ಯಾಂಶಗಳು

  • ಅಧ್ಯಯನ ವರದಿಯು ಪ್ರಾಣಿ ವಿಜ್ಞಾನಕ್ಕೆ ಸಂಬಂಧಿಸಿದ ಜರ್ಮನಿಯ ನಿಯತಕಾಲಿಕ ವರ್ಟೆಬ್ರೆಟ್‌ ಝೂಲಾಜಿಯಲ್ಲಿ ಪ್ರಕಟಗೊಂಡಿದೆ.
  • ಹಲ್ಲಿಯ ದೇಹ ರಚನೆ ಹಾಗೂ ಡಿಎನ್‌ಎ ಪರೀಕ್ಷೆಯ ದತ್ತಾಂಶಗಳನ್ನು ಅಧ್ಯಯನ ಮಾಡಿ, ಇದು ಹಲ್ಲಿಯ ಪ್ರತ್ಯೇಕ ಪ್ರಭೇದ ಎಂಬುದನ್ನು ನಿರೂಪಿಸಿದ್ದಾರೆ.
  • ಇದುವರೆಗೆ 70ರಿಂದ 80ರಷ್ಟು ಹಲ್ಲಿ ಪ್ರಬೇಧಗಳನ್ನು ಗುರುತಿಸಲಾಗಿದೆ. ಪತ್ತೆಯಾಗಿರುವ ಹಲ್ಲಿಯ ದೇಹರಚನೆ ಹಾಗೂ ಡಿಎನ್‌ಎ ಪರೀಕ್ಷೆಯ ಮಾಹಿತಿಗಳನ್ನು ಕ್ರೋಡೀಕರಿಸಿ ಅಧ್ಯಯನ ಮಾಡಿ, ಈವರೆಗೆ ಪತ್ತೆಯಾಗಿರುವ ಹಲ್ಲಿಯ ಪ್ರಭೇದಗಳಿಗಿಂತ ಭಿನ್ನವಾಗಿರುವುದು ದೃಢಪಟ್ಟಿದೆ’.

ಹಲ್ಲಿಯ ವಿವರಣೆ:

  • ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ. ‘ರಾತ್ರಿ ಹೊತ್ತು ಕಾಣುವ ಈ ಹಲ್ಲಿಗಳು ಕಲ್ಲು, ಬಂಡೆಗಳ ಸಂದಿಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ.
  • ಹಲ್ಲಿಯು 2.57 ಸೆಂ.ಮೀನಷ್ಟು (25.7 ಮಿ.ಮೀ) ಉದ್ದವಿದೆ. ಗಂಡು ಹಲ್ಲಿಯ ದೇಹ ಕಂದು ಬಣ್ಣ ಹಾಗೂ ಬಾಲ ಕಪ್ಪಾಗಿದೆ. ಹೆಣ್ಣು ಹಲ್ಲಿಯ ಪೂರ್ತಿ ದೇಹ ಕಂದು ಬಣ್ಣದಿಂದ ಕೂಡಿದೆ.
  • ಮೂರ್ನಾಲ್ಕು ಹೆಣ್ಣು ಹಲ್ಲಿಗಳು ಒಂದೇ ಕಡೆ ಮೊಟ್ಟೆ ಇಡುತ್ತವೆ. ಸದ್ಯಕ್ಕೆ ಬಿಳಿಗಿರಿರಂಗನಬೆಟ್ಟದ ಅರಣ್ಯ ಬಿಟ್ಟು ಬೇರೆಲ್ಲೂ ಈ ಕುಬ್ಜ ಹಲ್ಲಿ ಇರುವುದು ವರದಿಯಾಗಿಲ್ಲ’.

ಹಲ್ಲಿಯ ಹೆಸರು :

  • ಹೊಸ ಹಲ್ಲಿ ಪ್ರಬೇಧಕ್ಕೆ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಏಟ್ರೀ ಸಂಸ್ಥಾಪಕರಲ್ಲಿ ಒಬ್ಬರಾದ ಡಾ.ಉಮಾಶಂಕರ್‌ ಅವರ ಹೆಸರನ್ನು ಸೇರಿಸಿ ‘ಉಮಾಶಂಕರ್‌ ಕುಬ್ಜ ಹಲ್ಲಿ’ (umashankar’s dwarf gecko) ಎಂದು ಹೆಸರಿಡಲಾಗಿದೆ.
  • ಉಮಾಶಂಕರ್‌ ಅವರು ಸಸ್ಯ ಹಾಗೂ ಜೀವ ಸಂಕಲಗಳ ಉಗಮದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಪರಿಸರ ಹಾಗೂ ಜೀವ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಗೌರವ ಸಲ್ಲಿಸುವ ಉದ್ದೇಶದಿಂದ ಅವರ ಹೆಸರನ್ನೇ ಇಡಲಾಗಿದೆ’.