Published on: August 5, 2023

“ಉಡುಪಿ ಸೀರೆ”

“ಉಡುಪಿ ಸೀರೆ”

ಸುದ್ದಿಯಲ್ಲಿ ಏಕಿದೆ? ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ನೇಕಾರರು ಕೈಮಗ್ಗದ ಬಟ್ಟೆಗಳಿಗೆ ಅಡಿಕೆ ಚೊಗರಿನ ಬಣ್ಣ ನೀಡುವ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದು ಯಶ ಸಾಧಿಸಿದ್ದಾರೆ.

ಮುಖ್ಯಾಂಶಗಳು

  • ಅಡಿಕೆಯ ಚೊಗರನ್ನು ಬಟ್ಟೆಗಳಿಗೆ ನೈಸರ್ಗಿಕ ಬಣ್ಣವಾಗಿ ಬಳಸುವ ವಿಧಾನ ವರ್ಷದಿಂದ ವರ್ಷಕ್ಕೆ ಜನಮನ್ನಣೆ ಗಳಿಸುತ್ತಿದೆ.
  • ಇಳಕಲ್ ಸೀರೆಗಳಲ್ಲಿ ಕೂಡ ಅಡಿಕೆ ಚೊಗರು ಬಳಸಿ ಯಶಸ್ವಿಯಾಗಿದ್ದಾರೆ.
  • ತಾಳಿಪಾಡಿ ಸಂಘವು,ನಾಲ್ಕಾರು ಛಾಯೆ ಅಡಿಕೆಯ ಚೊಗರು ಬಳಸಿಕೊಂಡು ಕಂದು, ಕೆಂಪು ಸಹಿತ ನಾಲ್ಕಾರು ಛಾಯೆಗಳುಳ್ಳ ಸೀರೆಗಳನ್ನು ಸಿದ್ಧಪಡಿಸಿದೆ. ಒಂದೇ ದ್ರಾವಣವನ್ನು 2-3 ಬಾರಿ ಬಳಸಬಹುದು. ಪರಿಸರ ಸ್ನೇಹಿಯಾಗಿರುವ ಇದರಲ್ಲಿ ನೂಲನ್ನು ಪ್ರತೀ ಬಾರಿ ಸಂಸ್ಕರಿಸಿದಾಗಲೂ ಛಾಯೆ ಬದಲಾಗುತ್ತದೆ.

ನೈಸರ್ಗಿಕ ಬಣ್ಣ

  • ಹಿಂದಿನಿಂದಲೂ ಉಡುಪಿ ಸೀರೆಗಳಿಗೆ ನೈಸರ್ಗಿಕ ಬಣ್ಣಗಳನ್ನೇ ಬಳಸಲಾಗುತ್ತಿದೆ.
  • ಉದಾಹರಣೆಗೆ: ಮಂಜಿಷ್ಟ ಗಿಡದ ಬೇರಿನ ಪುಡಿಯಿಂದ ಕೆಂಪು, ನೇರಳೆ, ದಾಳಿಂಬೆ ಸಿಪ್ಪೆಯಿಂದ ಹಳದಿ, ಬೂದು, ಇಂಡಿಗೋದಿಂದ ನೀಲಿ, ಕಾಡು ಬಾದಾಮಿ ಗಿಡದ ಎಲೆಗಳಿಂದ ಹಳದಿ, ಚೆಂಡುಹೂಗಳಿಂದ ಹಳದಿ ವರ್ಣಗಳನ್ನು ಸಿದ್ಧಪಡಿಸಲಾಗುತ್ತದೆ. ಅಡಿಕೆಯ ಚೊಗರು ಅದಕ್ಕೆ ಹೊಸ ಸೇರ್ಪಡೆ. ನೀರುಳ್ಳಿಯ ವರ್ಣ, ಕೆಂಪು, ಗಾಢ ಕಂದು ಬಟ್ಟೆಯನ್ನು ಇದರಲ್ಲಿ ಸಿದ್ಧಪಡಿಸಬಹುದು. ನೈಸರ್ಗಿಕ ಬಣ್ಣ ಬಳಕೆ ಬಗ್ಗೆ ನಬಾರ್ಡ್‌ಹಾಗೂ ಇತರ ಸಂಸ್ಥೆಗಳಿಂದ ನೇಕಾರರಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ.
  • ಉಡುಪಿ ಸೀರೆಗೆ 1995ರಲ್ಲಿ ಜಿಐ ಮಾನ್ಯತೆ ದೊರೆತಿದೆ

ಏನಿದು ಅಡಿಕೆ ಚೊಗರು?

  • ಮಲೆನಾಡಿನ ಭಾಗಗಳಲ್ಲಿ (ಮುಖ್ಯವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ತಾಲೂಕು) ಅಡಿಕೆ ಸಂಸ್ಕರಣೆ ವೇಳೆ ಉತ್ಪಾದನೆ ಯಾಗುವ ದ್ರವರೂಪದ ಪದಾರ್ಥವಿದು. ಬಿಸಿಲಿಗಿಟ್ಟು ಒಣಗಿಸಿದಾಗ ಮಂದರೂಪಕ್ಕೆ ಬರುತ್ತದೆ. ಗಾಢ ಕಂದು ಬಣ್ಣ. ಚೊಗರನ್ನು ಪುಡಿ ರೂಪಕ್ಕೆ ಪರಿವರ್ತಿಸಿ ದಾಸ್ತಾನು ಮಾಡಲಾಗುತ್ತದೆ. ಇದು ಸುದೀರ್ಘ ಕಾಲ ಬಣ್ಣ ಕಳೆದುಕೊಳ್ಳದಿರುವ ಕಾರಣ ನೈಸರ್ಗಿಕ ಬಣ್ಣವಾಗಿ ಹೆಚ್ಚಿನ ಮನ್ನಣೆ ಪಡೆದಿದೆ.