Published on: October 12, 2021

ಕಲ್ಲಿದ್ದಲು ಕೊರತೆ

ಕಲ್ಲಿದ್ದಲು ಕೊರತೆ

ಸುದ್ಧಿಯಲ್ಲಿ ಏಕಿದೆ? ರಾಜ್ಯದ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಹಲವು ಘಟಕಗಳನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಜಲ ವಿದ್ಯುತ್‌ ಉತ್ಪಾದನಾ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ

  • ದೇಶದ ಮತ್ತು ಕರ್ನಾಟಕದ ಒಟ್ಟಾರೆ ವಿದ್ಯುತ್‌ ಬೇಡಿಕೆಯಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್‌ ಅನ್ನು ಉಷ್ಣ ವಿದ್ಯುತ್‌ ಸ್ಥಾವರಗಳು ಪೂರೈಸುತ್ತಿವೆ. ಆದರೆ ಕಲ್ಲಿದ್ದಲು ಕೊರತೆ ಶಾಪವಾಗಿದೆ. ಇದರಿಂದ ಶೇ. 20ರಷ್ಟು ಪೂರೈಕೆ ಸಾಮರ್ಥ್ಯವಿರುವ ಜಲ ವಿದ್ಯುತ್‌ ಸ್ಥಾವರ ಸೇರಿದಂತೆ ಬದಲಿ ಶಕ್ತಿ ಮೂಲಗಳಿಗೆ ಹೆಚ್ಚಿನ ಮಹತ್ವ ಬಂದಿದೆ.
  • ಕಳೆದ 15 ದಿನಗಳಿಂದ ಜಲ ವಿದ್ಯುದಾಗರಗಳು ವಿಶ್ರಾಂತಿರಹಿತವಾಗಿ ವಿದ್ಯುತ್‌ ಉತ್ಪಾದಿಸುತ್ತಿವೆ. ಶರಾವತಿ ಮತ್ತು ಕಾಳಿ ಕಣಿವೆಗಳ ಜಲ ವಿದ್ಯುತ್‌ ಕೇಂದ್ರಗಳು ಈಗ ಬಿಡುವೇ ಇಲ್ಲದಂತೆ ವಿದ್ಯುತ್‌ ಉತ್ಪಾದಿಸಿ ರಾಜ್ಯದ ಗ್ರಿಡ್‌ಗೆ ಪೂರೈಸುತ್ತಿವೆ. ಕಲ್ಲಿದ್ದಲು ಪೂರೈಕೆಯಾಗುವ ತನಕ ಜಲ ವಿದ್ಯುತ್‌ ಕೇಂದ್ರಗಳಲ್ಲಿ ಭರಪೂರ ವಿದ್ಯುತ್‌ ಉತ್ಪಾದನೆ ಮುಂದುವರಿಯಲಿದೆ..

ವಿದ್ಯುತ್ ಬಿಕ್ಕಟ್ಟು ಉದ್ಭವವಾಗಲು ಮುಖ್ಯ ಕಾರಣ

  • ದೇಶದಲ್ಲಿನ ಕಲ್ಲಿದ್ದಲು ಸಂಗ್ರಹದಲ್ಲಿ ಭಾರಿ ಕುಸಿತವಾಗಿದೆ. ದೇಶದಲ್ಲಿನ 135 ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಲ್ಲಿ ಅರ್ಧಕ್ಕೂ ಹೆಚ್ಚಿನ ಘಟಕಗಳಲ್ಲಿ ಕಲ್ಲಿದ್ದಲು ಸಂಗ್ರಹ ಬಹುತೇಕ ಖಾಲಿಯಾಗಿದೆ. ದೇಶದ ಶೇ 70ರಷ್ಟು ವಿದ್ಯುತ್ ಉತ್ಪಾದನೆ ಕಲ್ಲಿದ್ದಲು ಘಟಕಗಳನ್ನೇ ಅವಲಂಬಿಸಿದೆ.
  • ಕೋವಿಡ್ ಎರಡನೆಯ ಅಲೆ ಬಳಿಕ ವಿದ್ಯುತ್‌ಗೆ ಉಂಟಾಗಿರುವ ಅಧಿಕ ಬೇಡಿಕೆ ಕೂಡ ಒಂದು.
  • 2019ರ ಇದೇ ಅವಧಿಗೆ ಹೋಲಿಸಿದರೆ ಕಳೆದ ಎರಡು ತಿಂಗಳಲ್ಲಿಯೇ ಸುಮಾರು ಶೇ 17ರಷ್ಟು ವಿದ್ಯುತ್ ಬಳಕೆ ಹೆಚ್ಚಾಗಿದೆ.
  • ಇದೇ ವೇಳೆ ಜಾಗತಿಕ ಕಲ್ಲಿದ್ದಲು ಬೆಲೆ ಶೇ 40ರಷ್ಟು ದುಬಾರಿಯಾಗಿದೆ. ಹಾಗೆಯೇ ಭಾರತದ ಆಮದು ಪ್ರಮಾಣ ಕಳೆದ ಎರಡು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಇದೆ.
  • ಜಗತ್ತಿನ ನಾಲ್ಕನೇ ಅತಿ ದೊಡ್ಡ ಕಲ್ಲಿದ್ದಲು ಸಂಗ್ರಹಗಳನ್ನು ಹೊಂದಿದ್ದರೂ, ಭಾರತ ವಿಶ್ವದಲ್ಲಿಯೇ ಎರಡನೇ ಅತಿ ಹೆಚ್ಚಿನ ಕಲ್ಲಿದ್ದಲು ಆಮದುದಾರ ದೇಶವಾಗಿದೆ. ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳಿಂದ ಭಾರತಕ್ಕೆ ಕಲ್ಲಿದ್ದಲು ಆಮದಾಗುತ್ತದೆ. ವಿದ್ಯುತ್ ಘಟಕಗಳು ಹೆಚ್ಚಾಗಿ ಈ ಆಮದು ಕಲ್ಲಿದ್ದಲನ್ನೇ ಅವಲಂಬಿಸಿವೆ. ಆದರೆ ಈಗ ಭಾರತದಲ್ಲಿ ಹೊರತೆಗೆಯುವ ಕಲ್ಲಿದ್ದಲಿನ ಮೇಲೆ ಅತಿ ಅವಲಂಬನೆ ಮಾಡುವಂತಾಗಿದೆ. ಈ ಒತ್ತಡ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆ, ಪೂರೈಕೆ ಮೇಲೆ ಪರಿಣಾಮ ಬೀರಿದೆ.

ಇಂಧನ ಸಚಿವಾಲಯ ನೀಡಿರುವ ನಾಲ್ಕು ಕಾರಣ

  • ಸೆಪ್ಟೆಂಬರ್ 2021ರಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ವಿಪರೀತ ಮಳೆ ಸುರಿದಿರುವುದರಿಂದ ಗಣಿಗಳಿಂದ ಕಲ್ಲಿದ್ದಲನ್ನು ಉತ್ಪಾದಿಸುವ ಮತ್ತು ರವಾನಿಸುವ ಕಾರ್ಯಕ್ಕೆ ತೀವ್ರ ಹೊಡೆತ ನೀಡಿರುವುದು.
  • ಆರ್ಥಿಕತೆಯ ಪುನಶ್ಚೇತನದ ಹಿನ್ನೆಲೆಯಲ್ಲಿ ವಿದ್ಯುತ್‌ಗೆ ಅಭೂತಪೂರ್ವ ಬೇಡಿಕೆ ಹೆಚ್ಚಳವಾದ ಕಾರಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ಸಂಗ್ರಹ ಕುಸಿತವಾಗಿರುವುದು.
  • ಆಮದು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಪೂರೈಕೆಯಾಗಬೇಕಾದ ಆಮದು ಕಲ್ಲಿದ್ದಲಿನ ದರ ಹಿಂದೆಂದೂ ಕಾಣದ ರೀತಿಯಲ್ಲಿ ಏರಿಕೆಯಾಗಿರುವುದರಿಂದ ದೇಶಿ ಕಲ್ಲಿದ್ದಲಿನ ಮೇಲೆ ಅವಲಂಬನೆಯಾಗುವಂತಾಗಿರುವುದು.
  • ಮುಂಗಾರು ಆರಂಭಕ್ಕೂ ಮುನ್ನ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಸಂಗ್ರಹಗಳನ್ನು ಮಾಡಿಕೊಳ್ಳದೆ ಇರುವುದು.

ರಾಜ್ಯದ ವಿದ್ಯುತ್‌ ಬೇಡಿಕೆ

  • ಪ್ರಸ್ತುತ ರಾಜ್ಯದ ವಿದ್ಯುತ್‌ ಬೇಡಿಕೆ 153.669 ಮಿ.ಯೂನಿಟ್‌ ಇದೆ. ಕಲ್ಲಿದ್ದಲು ದಾಸ್ತಾನು ಬಹಳ ಕಡಿಮೆ ಇರುವುದರಿಂದ ರಾಯಚೂರು, ಬಳ್ಳಾರಿ ಮತ್ತು ಯರಮರಸ್‌ನ 13 ಉಷ್ಣ ವಿದ್ಯುತ್‌ ಉತ್ಪಾದನಾ ಘಟಕಗಳ ಪೈಕಿ 6 ಘಟಕಗಳನ್ನು ಮಾತ್ರ ಚಾಲನೆಯಲ್ಲಿಡಲಾಗಿದೆ. ಇವುಗಳಿಂದ 37.920 ಮಿ.ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಮತ್ತೊಂದು ಕಡೆ ಜಲ ವಿದ್ಯುತ್‌ ಸ್ಥಾವರಗಳಿಂದ 37.050 ಮಿ.ಯೂನಿಟ್‌, ಸಾಂಪ್ರದಾಯಿಕವಲ್ಲದ ಸೋಲಾರ್‌, ಪವನ, ಅನಿಲ ವಿದ್ಯುದಾಗಾರಗಳಿಂದ 0.1154 ಮಿ.ಯೂ. ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಖಾಸಗಿ ವಿದ್ಯುದಾಗರಗಳು ಮತ್ತು ಕೇಂದ್ರದ ಗ್ರಿಡ್‌ನಿಂದ 81.585 ಮಿ.ಯೂ. ವಿದ್ಯುತ್‌ ಪೂರೈಕೆಯಾಗುತ್ತಿದೆ.

ಭಾರತದ ವಿದ್ಯುತ್ ಬೇಡಿಕೆ ಎಷ್ಟು?

  • ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ ಸಾಮಾನ್ಯವಾಗಿ ಶೇ 2-7ರವರೆಗೂ ಹೆಚ್ಚಲಿದೆ. ಕಳೆದ ವರ್ಷ ವ್ಯಾಪಕ ಲಾಕ್‌ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಬಳಕೆ ಶೇ 6.6ರಷ್ಟು ಕಡಿಮೆಯಾಗಿತ್ತು. 2021ರ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ದೇಶದ ಅತ್ಯಧಿಕ ವಿದ್ಯುತ್ ಬೇಡಿಕೆ 203,014 ಮೆಗಾ ವ್ಯಾಟ್ ದಾಖಲಾಗಿದೆ. ಅದು ಕಳೆದ ವರ್ಷ ಇದೇ ಅವಧಿಯಲ್ಲಿ 171,510 ಮೆಗಾ ವ್ಯಾಟ್ ಇತ್ತು.
  • ಭಾರತದ ಉತ್ತರ ಭಾಗದಲ್ಲಿ ಬೇಡಿಕೆಯಿರುವ 73,461 ಮೆಗಾ ವ್ಯಾಟ್ ವಿದ್ಯುತ್‌ನಲ್ಲಿ ಉತ್ತರ ಪ್ರದೇಶ ಒಂದೇ 24,965 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಹೊಂದಿದೆ. ಪಶ್ಚಿಮ ಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, 25,653 ಮೆಗಾ ವ್ಯಾಟ್ ವಿದ್ಯುತ್ ಬಳಸುತ್ತಿದೆ. ಪಶ್ಚಿಮ ಭಾರತದಲ್ಲಿ 60,966 ಮೆಗಾ ವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇದೆ.
  • ಇನ್ನು ದಕ್ಷಿಣ ಭಾರತಕ್ಕೆ 58,430 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ತಮಿಳುನಾಡು 16,541 ಮೆಗಾ ವ್ಯಾಟ್‌ನೊಂದಿಗೆ ಅತ್ಯಧಿಕ ವಿದ್ಯುತ್ ಬಳಸುತ್ತಿದೆ. ಪೂರ್ವ ಭಾರತದ 26,019 ಮೆ.ವ್ಯಾ ಬೇಡಿಕೆಯಲ್ಲಿ ಪಶ್ಚಿಮ ಬಂಗಾಳದ ಪಾಲು 9,089 ಮೆಗಾ ವ್ಯಾಟ್.

ಪ್ರಸುತ ವಿದ್ಯುತ್‌ ಪೂರೈಕೆ(ಮಿ.ಯೂ.ಗಳಲ್ಲಿ)

  • ಶಾಖೋತ್ಪನ್ನ ವಿದ್ಯುತ್‌: 37.920
  • ಜಲ ವಿದ್ಯುತ್: 37.050
  • ಸೋಲಾರ್‌ ಪವನ ಮತ್ತು ಇತರೆ: 0.1154
  • ಒಟ್ಟು ಕೆಪಿಸಿಎಲ್‌: 75.246
  • ಖಾಸಗಿ ಮತ್ತು ಕೇಂದ್ರ: 81.585
  • ರಾಜ್ಯದ ಒಟ್ಟು ಬಳಕೆ: 153.669

ಸರ್ಕಾರ ಏನು ಮಾಡಬಹುದು?

  • ಕಲ್ಲಿದ್ದಲು ಹಾಗೂ ಇಂಧನದ ಶುದ್ಧ ಮೂಲಗಳನ್ನು ಮಿಶ್ರಣ ಮಾಡುವುದು ಭಾರತದ ಮಟ್ಟಿಗೆ ದೀರ್ಘಾವಧಿ ಪರಿಹಾರವನ್ನು ಒದಗಿಸಬಹುದು
  • ಕಲ್ಲಿದ್ದಲು ಸಚಿವಾಲಯ ನೇತೃತ್ವದ ಆಂತರಿಕ ಸಮಿತಿಯೊಂದು ವಾರಕ್ಕೆ ಎರಡು ಬಾರಿ ದೇಶದ ಕಲ್ಲಿದ್ದಲು ಸಂಗ್ರಹ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಕಲ್ಲಿದ್ದಲು ಸಂಗ್ರಹ ಮತ್ತು ಸಮಾನ ಹಂಚಿಕೆಯನ್ನು ನೋಡಿಕೊಳ್ಳಲು ಕೋರ್ ಮ್ಯಾನೇಜ್ಮೆಂಟ್ ಟೀಮ್ ( ಸಿಎಂಟಿ) ಎಂಬ ತಂಡವೊಂದನ್ನು ಆಗಸ್ಟ್ 27ರಂದು ರಚಿಸಲಾಗಿತ್ತು. ಅದು ಎಂಒಪಿ, ಸಿಇಎ, ಪೊಸೋಕೊ, ರೈಲ್ವೇಸ್ ಮತ್ತು ಕೋಲ್ ಇಂಡಿಯಾ ಲಿಮಿಟೆಡ್‌ನ ಪ್ರತಿನಿಧಿಗಳನ್ನು ಒಳಗೊಂಡಿದೆ.