Published on: June 9, 2023

ಕವಚ್ ತಂತ್ರಜ್ಞಾನ

ಕವಚ್ ತಂತ್ರಜ್ಞಾನ

ಸುದ್ದಿಯಲ್ಲಿ ಏಕಿದೆ? ಒಡಿಶಾದಲ್ಲಿ ನಡೆದಿರುವ ರೈಲು ದುರ್ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಇಂಥ ಅಪಘಾತಗಳ ತಡೆಗೆ ಕವಚ್ ತಂತ್ರಜ್ಞಾನವನ್ನು ಪ್ರತಿ ರೈಲುಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಇದು ಒಂದು ಸ್ವದೇಶಿ ತಂತ್ರಜ್ಞಾನವಾಗಿದೆ.

ಮುಖ್ಯಾಂಶಗಳು

  • ಕವಚ್, ಕಳೆದೆರಡು ವರ್ಷಗಳಿಂದ ಪ್ರಾಯೋಗಿಕ ಹಂತದಲ್ಲಿದೆ. ಅದರ ಸಾಧಕ- ಬಾಧಕಗಳನ್ನು ನೋಡಿಕೊಂಡು ಇದನ್ನು ಹಂತಹಂತವಾಗಿ ಎಲ್ಲಾ ರೈಲುಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.
  • ರೈಲಿನ ಸ್ವಯಂಚಾಲಿತ ಬ್ರೇಕಿಂಗ್ ತಂತ್ರಜ್ಞಾನವಾದ ‘ಕವಚ್’ ಅನ್ನು ನಮ್ಮ ದೇಶದ ವಿಜ್ಞಾನಿಗಳೇ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಕೆಲವಾರು ಖಾಸಗಿ ಕಂಪನಿಗಳು ತಮ್ಮಲ್ಲಿನ ತಂತ್ರಜ್ಞಾನವನ್ನು ಒದಗಿಸಿವೆ.
  • ರೈಲ್ವೆ ಇಲಾಖೆಯ ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾಂಡರ್ಡ್ ಆರ್ಗನೈಸೇಷನ್ (ಆರ್ ಡಿಎಸ್ಒ) ಸಂಸ್ಥೆ ಇದನ್ನು ತಯಾರಿಸಿದೆ. ಇದನ್ನು ಪರೀಕ್ಷಿಸುವ ಹೊಣೆಗಾರಿಕೆಯನ್ನು ದಕ್ಷಿಣ ಕೇಂದ್ರ ರೈಲ್ವೆ ವಿಭಾಗಕ್ಕೆ ವಹಿಸಲಾಗಿದೆ.
  • ಇದೊಂದು ಭಾರತದಲ್ಲಿ ತಯಾರಾದ ಸುರಕ್ಷಾ ತಂತ್ರಜ್ಞಾನಗಳಲ್ಲೇ ಉತ್ಕೃಷ್ಟವಾದ ತಂತ್ರಜ್ಞಾನವೆಂದು ಹೇಳಲಾಗಿದ್ದು, ಲೆವೆಲ್ – 4 ಮಾದರಿಯ ಸುರಕ್ಷತಾ ನಿಯಮಗಳನ್ನು ಇದರಲ್ಲಿ ಅಳವಡಿಸಲಾಗಿದೆ.
  • ಇದು ಭಾರತೀಯ ರೈಲು ಪ್ರಯಾಣಿಕರಿಗಾಗಿಯೇ ರೂಪಿಸಲಾಗಿರುವ ತಂತ್ರಜ್ಞಾನ. ಇದರ ಹೆಸರು, ಆಟೋಮ್ಯಾಟಿಕ್ ಟ್ರೈನ್ ಪ್ರೊಟೆಕ್ಷನ್ (ಎಟಿಪಿ). ಇದಕ್ಕೆ ಇಡಲಾಗಿರುವ ಭಾರತೀಯ ಹೆಸರು ‘ಕವಚ್’.
  • ಕವಚ್ ಎಂಬ ಹೆಸರಿನಲ್ಲೇ ಸುರಕ್ಷತೆ ಎಂಬ ಅರ್ಥ ಅಡಗಿರುವುದರಿಂದ ಇದನ್ನೇ ಪ್ರಧಾನಿ ನರೇಂದ್ರ ಮೋದಿಯವರು ಅಂತಿಮಗೊಳಿಸಿದ್ದಾರೆ.

ಉದ್ದೇಶ

  • ದೇಶದಲ್ಲಿ ರೈಲುಗಳ ಅಪಘಾತಗಳನ್ನು ಶೂನ್ಯಕ್ಕೆ ಇಳಿಸಬೇಕೆಂಬ (ಝೀರೋ ಆ್ಯಕ್ಸಿಡೆಂಟ್ಸ್) ಆಶಯದೊಂದಿಗೆ ಈ ತಂತ್ರಜ್ಞಾನವನ್ನು ಸದ್ಯದಲ್ಲೇ ಪರಿಚಯಿಸಲಾಗುತ್ತಿದೆ.

ಹೇಗೆ ಕೆಲಸ ಮಾಡುತ್ತೆ ?

  • ಇದು ಸೆನ್ಸರ್ ಆಧಾರಿತ ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ಪ್ರತಿ ರೈಲಿನ ಇಂಜಿನ್ ನಲ್ಲಿ ಅಳವಡಿಸಲಾಗುತ್ತದೆ. ಇದು ಯಾವಾಗಲೂ ಚಾಲನೆಯಲ್ಲಿರುವಂಥ ವ್ಯವಸ್ಥೆಯಾಗಿದ್ದು, ಹಳಿಯಲ್ಲಿ ಸಾಗುವ ಯಾವುದೇ ರೈಲು ಎದುರುಗಡೆಯಿಂದ ಮತ್ತೊಂದು ರೈಲು ಬರುತ್ತಿದ್ದರೆ, ಬೇರೆ ರೈಲು ಅದೇ ಹಳಿಯ ಮೇಲೆ ನಿಂತಿದ್ದರೆ ಅಥವಾ ರೈಲು ಹಳಿಯ ಮೇಲೆ ಮರದ ದಿಮ್ಮಿ, ಅನ್ಯ ವಾಹನಗಳು ನಿಂತಿದ್ದರೆ ಅದನ್ನು ಕವಚ್ ನ ಸೆನ್ಸರ್ ಗಳು ದೂರದಿಂದಲೇ ಗ್ರಹಿಸಿ, ತನ್ನಲ್ಲಿನ ಆಂತರಿಕ ನಿರ್ವಹಣಾ ವ್ಯವಸ್ಥೆಗೆ ಆ ಸಿಗ್ನಲ್ ಗಳನ್ನು ರವಾನಿಸುತ್ತದೆ.
  • ಈ ಸಿಗ್ನಲ್ಗಳ ಸಹಾಯದಿಂದ ಆಂತರಿಕ ನಿರ್ವಹಣಾ ವ್ಯವಸ್ಥೆಯು ಆಟೋಮ್ಯಾಟಿಕ್ ಆಗಿ ರೈಲುಗಳ ಬ್ರೇಕ್ ಗಳನ್ನು ಹಾಕುತ್ತದೆ. ಇದೆಲ್ಲವೂ ಕ್ಷಣಾರ್ಧದಲ್ಲಿ ನಡೆಯುವುದರಿಂದ ದೂರದಲ್ಲಿ ಹಳಿಯ ಮೇಲೆ ಅಡ್ಡವಾಗಿರುವ ವಾಹನಗಳು, ವಸ್ತುಗಳಿಂದ ಸುಮಾರು 380 ಮೀಟರ್ ಗಳಷ್ಟು ದೂರದಲ್ಲೇ ರೈಲು ಆಟೋಮ್ಯಾಟಿಕ್ ಆಗಿ ನಿಂತುಬಿಡುತ್ತದೆ.

ಈ ತಂತ್ರಜ್ಞಾನದ ಅವಶ್ಯಕತೆ

  • ಅತ್ಯಂತ ಹೆಚ್ಚು ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುವ ಹಾಗೂ ಒಂದರ ಹಿಂದೊಂದರಂತೆ ರೈಲಗಳು ಸಂಚರಿಸುತ್ತಲೇ ಇರುವಂಥ ರೈಲು ಮಾರ್ಗಗಳನ್ನು ಹೈ – ಡೆನ್ಸಿಟಿ ನೆಟ್ ವರ್ಕ್ ಗಳೆಂದು ಕರೆಯುತ್ತಾರೆ. ದೇಶದ ಒಟ್ಟಾರೆ ರೈಲು ವ್ಯವಸ್ಥೆಯಲ್ಲಿ ಶೇ. 96ರಷ್ಟು ರೈಲುಗಳು ಇದೇ ಹೈ- ಡೆನ್ಸಿಟಿ ನೆಟ್ ವರ್ಕ್ ನಲ್ಲಿ ಸಂಚರಿಸುತ್ತವೆ.
  • ದೆಹಲಿ – ಹೌರಾ ಹಾಗೂ ದೆಹಲಿ – ಮುಂಬೈ ರೈಲು ಮಾರ್ಗಗಳು ದೇಶದ ಅತ್ಯಂತ ಹೆಚ್ಚು ಬ್ಯುಸಿ ರೈಲು ಮಾರ್ಗಗಳಾಗಿವೆ. ಅಲ್ಲಿ ನಿತ್ಯವೂ ಗಡಿಬಿಡಿ ಗೊಂದಲಗಳಿರುವುದರಿಂದ ಸಾಮಾನ್ಯವಾಗಿ ಸಿಗ್ನಲಿಂಗ್ ನಲ್ಲಿ ಅಥವಾ ರೈಲ್ವೆ ಸುರಕ್ಷತೆಯಲ್ಲಿ ಮಾನವ ಸಹಜ ತಪ್ಪುಗಳಾಗುತ್ತವೆ. ಇಂಥವುಗಳನ್ನು ತಡೆಯಲು ಕವಚ್ ಅತ್ಯಂತ ಸಹಕಾರಿಯಾಗಿದೆ.