Published on: June 9, 2023

ಕೆ-ಶೋರ್ ಯೋಜನೆ

ಕೆ-ಶೋರ್ ಯೋಜನೆ

ಸುದ್ದಿಯಲ್ಲಿ ಏಕಿದೆ? ಪರಿಸರ ರಕ್ಷಣೆಯಲ್ಲಿ ಹಾಗೂ ವನ್ಯ ಜೀವಿ ಸಂಕುಲದ ಏರಿಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಈಗ ಕರಾವಳಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿರುವ ಮೊದಲ ರಾಜ್ಯವಾಗಿದ್ದು, ಇದಕ್ಕಾಗಿ ಕೆ-ಶೋರ್ (Karnataka – Surface Sustainable Harvest of Ocean Resources) ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ನೀಲಿ-ಪ್ಲಾಸ್ಟಿಕ್ ಯೋಜನೆ ಎಂದೂ ಹೇಳಲಾಗುತ್ತದೆ.

ಮುಖ್ಯಾಂಶಗಳು

  • ರಾಜ್ಯದ ಪರಿಸರ ಮತ್ತು ಅರಣ್ಯ ಇಲಾಖೆಗಳು ಅರಬ್ಬಿ ಸಮುದ್ರದಿಂದ ಪ್ಲಾಸ್ಟಿಕ್ ತೆರವುಗೊಳಿಸಲು 5 ವರ್ಷಗಳ ಉಪಕ್ರಮವನ್ನು ಕೈಗೊಂಡಿವೆ.
  • ಕರ್ನಾಟಕ ಮೀನುಗಾರಿಕೆ ಇಲಾಖೆಯ ಪ್ರಕಾರ, ಮಾರ್ಚ್ 2023 ರವರೆಗೆ, 12.25 ಲಕ್ಷ ಮೆಟ್ರಿಕ್ ಟನ್ ಸಮುದ್ರ ಮತ್ತು ಒಳನಾಡು ಮೀನುಗಳನ್ನು ಹಿಡಿಯಲಾಗಿದೆ, ಅದರಲ್ಲಿ 7.3 ಲಕ್ಷ ಮೆಟ್ರಿಕ್ ಟನ್ ಸಮುದ್ರ ಮೀನು. ಜಲಚರಗಳ ದೇಹದಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವಿಕೆಯನ್ನು ಕಂಡುಬಂದಿದೆ.
  • ಮೀನುಗಾರರು ಪ್ಲಾಸ್ಟಿಕ್ ಮೀನುಗಾರಿಕೆ ಬಲೆಗಳನ್ನು ಬಳಸುವುದನ್ನು ಅಥವಾ ತಮ್ಮ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಮತ್ತು ಸಂಗ್ರಹಿಸಲು ಬಳಸುವ ಪ್ಲಾಸ್ಟಿಕ್ ಮತ್ತು ಥರ್ಮಾಕೋಲ್ ನ್ನು ನಿಷೇಧಿಸಿಲ್ಲ

ಕೆ-ಶೋರ್

  • ಯೋಜನೆಯಡಿಯಲ್ಲಿ, ಕರ್ನಾಟಕ ಅರಣ್ಯ ಮತ್ತು ಪರಿಸರ ಇಲಾಖೆಯ ನೇತೃತ್ವದ ರಾಜ್ಯ ಸರ್ಕಾರದ ಇಲಾಖೆಗಳು ಸಮುದ್ರದಲ್ಲಿನ ಪ್ಲಾಸ್ಟಿಕ್‌ನ ಪ್ರಮಾಣ ಮತ್ತು ಗುಣಮಟ್ಟವನ್ನು ಅಧ್ಯಯನ ಮಾಡುತ್ತದೆ ಮತ್ತು ಅದನ್ನು ತೆರವುಗೊಳಿಸುತ್ತದೆ.
  • ವಿಶ್ವಬ್ಯಾಂಕ್‌ನ ಬೆಂಬಲದೊಂದಿಗೆ ಈ ಯೋಜನೆಯನ್ನು 5 ವರ್ಷಗಳ ಕಾಲ ಕೈಗೆತ್ತಿಕೊಳ್ಳಲಾಗಿದೆ. ಈ ಉಪಕ್ರಮಕ್ಕಾಗಿ ವಿಶ್ವಬ್ಯಾಂಕ್ 840 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ.
  • ಪುರಸಭೆ ಆಡಳಿತಗಳು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಇಲಾಖೆಗಳು, ನಗರ ನಿಗಮಗಳು, ಕರ್ನಾಟಕ ಜೀವವೈವಿಧ್ಯ ಮಂಡಳಿ ಮತ್ತು ತಜ್ಞರಂತಹ ಇತರ ಪಾಲುದಾರರನ್ನು ಒಳಗೊಳ್ಳುವ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲು ಅರಣ್ಯ ಇಲಾಖೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ.

ಪ್ರಯೋಜನ

  • ಈ ಯೋಜನೆ ತೇಲುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಾತ್ರವಲ್ಲದೆ  ಪ್ಲಾಸ್ಟಿಕ್ ಗೆ ಸಂಬಂಧಿಸಿದ ಎಲ್ಲಾ ತ್ಯಾಜ್ಯವನ್ನೂ ತೆರವುಗೊಳಿಸುತ್ತಿದೆ. ಜಲಚರಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಮೈಕ್ರೋಪ್ಲಾಸ್ಟಿಕ್ ಸಮಸ್ಯೆಯನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ.
  • ಈ ಕಾರ್ಯಕ್ರಮ ನದಿಮುಖಗಳು, ಮ್ಯಾಂಗ್ರೋವ್‌ಗಳು, ಕರಾವಳಿ ತೋಟಗಳು ಮತ್ತು ಅರಣ್ಯ ರಕ್ಷಣೆಯನ್ನು ಒಳಗೊಂಡಿದೆ.

ಸವಾಲು

  • ಥರ್ಮಾಕೋಲ್ ತ್ಯಾಜ್ಯ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಥರ್ಮಾಕೋಲ್ ನ್ನು ನಿಷೇಧಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧಿಕಾರಿಗಳು ಮತ್ತು ಸಾಗರ ತಜ್ಞರು ಹೇಳಿದ್ದಾರೆ. ಸಮುದ್ರ ಪ್ರದೇಶದಲ್ಲಿ ಥರ್ಮಾಕೋಲ್ ನ್ನು ಸಂಗ್ರಹಿಸುವುದು ಅತ್ಯಂತ ಸವಾಲಿನ ಮತ್ತು ನಿಧಾನಗತಿಯ ಚಟುವಟಿಕೆಯಾಗಿದೆ ಮತ್ತು ಅನೇಕ ಬಾರಿ ಈ ತ್ಯಾಜ್ಯ ಮರುಬಳಕೆಗೂ ಸಹ ಸಾಧ್ಯವಾಗುವುದಿಲ್ಲ, ಇದು ಮುಂದುವರೆದು ಜನರ ರಕ್ತಕ್ಕೆ ಸೇರುವ ಮೈಕ್ರೋಪ್ಲಾಸ್ಟಿಕ್ ತ್ಯಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ.
  • 2016 ರಲ್ಲಿ ಜಾರಿಗೆ ಬಂದಿದ್ದ ಪ್ಲಾಸ್ಟಿಕ್ ನಿಷೇಧ ನಿಯಮ ಮತ್ತು 2022 ರಲ್ಲಿ ಅವುಗಳ ತಿದ್ದುಪಡಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ನ್ನು ನಿಷೇಧಿಸುವ ಮೂಲಕ ಹೆಚ್ಚು ಕಠಿಣ ನಿಯಮಗಳನ್ನು ಜಾರಿಗೆ ತರಲಾಯಿತು ಆದರೂ, ಪ್ಲಾಸ್ಟಿಕ್ನ ಬಳಕೆ ಇನ್ನೂ ಹೇರಳವಾಗಿ ಕಂಡುಬರುತ್ತದೆ.