Published on: November 8, 2021

ನೋಟು ಅಮಾನ್ಯೀಕರಣಕ್ಕೆ 5 ವರ್ಷ

ನೋಟು ಅಮಾನ್ಯೀಕರಣಕ್ಕೆ 5 ವರ್ಷ

ಸುದ್ಧಿಯಲ್ಲಿ ಏಕಿದೆ? ನೋಟು ಅಮಾನ್ಯೀಕರಣಕ್ಕೆ 5 ವರ್ಷ ಪೂರ್ಣಗೊಂಡಿದೆ. ಆದರೆ ಜನರ ಬಳಿ ನಗದು ಪ್ರಮಾಣ ಹೆಚ್ಚುತ್ತಲೇ ಬಂದಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿ ಪ್ರಕಾರ 2021ರ ಅಕ್ಟೋಬರ್ 8ರಂದು ಜನರ ಬಳಿ 28.30 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ವರದಿಯಲ್ಲಿ ಏನಿದೆ ?

  • ವರದಿ ಪ್ರಕಾರ, 2020ರಲ್ಲಿ ಭಾರತವು 25.5 ಬಿಲಿಯನ್ ಮೊತ್ತದ ರಿಯಲ್ ಟೈಮ್ ಪಾವತಿ ಮಾಡಿದೆ
  • ಡಿಜಿಟಲ್‌ ಪಾವತಿ ಹೆಚ್ಚಳವಾಗಿದ್ದರೂ ಜನರ ಬಳಿ ನಗದು (ಕರೆನ್ಸಿ ನೋಟುಗಳು) ಪ್ರಮಾಣವೂ ಹೆಚ್ಚುತ್ತಲೇ ಬಂದಿದೆ. ಅದರಲ್ಲಿ ಕಳೆದ ಒಂದು ವರ್ಷದಿಂದೀಚೆಗೆ. ಜನರ ಬಳಿ ನಗದು ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ. ಇದರಲ್ಲಿ ಕೋವಿಡ್‌- 19 ಪಾತ್ರವೂ ಬಹಳಷ್ಟಿದೆ.
  • ಕೋವಿಡ್‌ ಸೋಂಕಿನ ಸಂದರ್ಭದಲ್ಲಿ, ತಮ್ಮ ತತ್ಕ್ಷಣದ ಅಗತ್ಯಗಳಿಗೆ ಬೇಕಾದ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳಲು ಆರಂಭಿಸಿದರು. ಇದರಿಂದ ಜನರ ಬಳಿ ನಗದು ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ
  • ಭಾರತೀಯ ರಿಸರ್ವ್ ಬ್ಯಾಂಕ್, ಪ್ರತಿ 15 ದಿನಗಳಿಗೊಮ್ಮೆ “Currency with the People” ಬಗ್ಗೆ ರಿಪೋರ್ಟ್ ನೀಡುತ್ತದೆ. ಅಂದರೆ ಜನರ ಬಳಿ ಇರುವ ನಗದು ಹಣದ ಪ್ರಮಾಣ ಎಷ್ಟು? ಹಾಗೂ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಎಷ್ಟು ಅನ್ನೋದನ್ನು ಈ ವರದಿಯಿಂದ ನಿರ್ಧಾರ ಮಾಡಲಾಗುತ್ತದೆ.
  • ಆರ್‌ಬಿಐ ವರದಿ ಪ್ರಕಾರ 2021ರ ಅಕ್ಟೋಬರ್ 8ರಂದು ಜನರ ಬಳಿ 28.30 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
  • ಹಾಗೆ ನೋಡಿದರೆ, ನೋಟು ಅಮಾನ್ಯ ಮಾಡುವುದಕ್ಕೂ ಮುನ್ನ ಅಂದರೆ 2016ರ ನವೆಂಬರ್ 4ಕ್ಕೆ ಹೋಲಿಕೆ ಮಾಡಿದರೆ, ಅಂದು ಜನರ ಬಳಿ 17.97 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳಿದ್ದವು. ಈ ಎರಡೂ ದಿನಾಂಕಗಳ ನಡುವೆ ಹಣದ ಹಣದ ಪ್ರಮಾಣವನ್ನು ಹೋಲಿಕೆ ಮಾಡಿದರೆ, ಪ್ರಸ್ತುತ ಜನರ ಬಳಿ ಶೇ. 57.48ರಷ್ಟು ಹಣ ನಗದು ರೂಪದಲ್ಲಿ ಇರುವುದು ತಿಳಿಯುತ್ತದೆ. ಅಂದರೆ ಒಟ್ಟು 10.33 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣ ಜನರ ಬಳಿ ಇದೆ ಎಂಬುದು ತಿಳಿಯುತ್ತದೆ.

ಜಗತ್ತಿನಲ್ಲೇ ಅತೀ ಹೆಚ್ಚು ಡಿಜಿಟಲ್ ಪಾವತಿ!

  • ಪ್ರತಿದಿನ ಡಿಜಿಟಲ್ ಪೇಮೆಂಟ್ ಅತ್ಯಂತ ವೇಗವಾಗಿ ಭಾರತೀಯರು ಅಪ್ಪಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಂಕಿ-ಅಂಶಗಳನ್ನು ಕಲೆ ಹಾಕುವ ವರ್ಲ್ಡ್ ವೈಡ್ ಟ್ರ್ಯಾಕಿಂಗ್ ಪಾವತಿ ವ್ಯವಸ್ಥೆಗಳ ಕಂಪನಿ ಎಸಿಐ(ACI) ಮಾರ್ಚ್ 2021ರಲ್ಲಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಭಾರತೀಯರು ವಿಶ್ವದಲ್ಲೇ ಅತಿ ಹೆಚ್ಚು ಅಂದರೆ 25.5 ಬಿಲಿಯನ್ ರಿಯಲ್ ಟೈಮ್ ಪಾವತಿ ಮಾಡಿದ್ದಾರೆ ಅಂತಾ ತಿಳಿಸಿದೆ. ಎಸಿಐ ಕಂಪನಿ ಭಾರತದ ವೆಬ್ ಸೈಟ್ MyGovt ಜೊತೆಗೆ ಸರ್ವೇ ಮಾಡಿ, ಚೀನಾಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ಭಾರತೀಯರು ಡಿಜಿಟಲ್ ರೂಪದಲ್ಲಿ ಪಾವತಿ ಮಾಡಿದ್ದಾರೆ ಅನ್ನೋ ಮಾಹಿತಿಯನ್ನು ಕಲೆ ಹಾಕಿದೆ.

ಡಿಮಾನಿಟೈಸೇಷನ್‌ ಎಂದರೇನು?

  • ಡಿಮಾನಿಟೈಸೇಷನ್‌ ಅಥವಾ ಅಪನಗದೀಕರಣ ಎನ್ನುವುದು ಕರೆನ್ಸಿಯ ಕಾನೂನು ಮಾನ್ಯತೆಯನ್ನು ರದ್ದುಗೊಳಿಸುವ ಪ್ರಕ್ರಿಯೆಯಾಗಿದೆ. ರಾಷ್ಟ್ರೀಯ ಕರೆನ್ಸಿಯ ಬದಲಾವಣೆ ಇದ್ದಾಗಲೆಲ್ಲಾ ಅದು ಸಂಭವಿಸುತ್ತದೆ. ಉದಾಹರಣೆಗೆ 2016ರಲ್ಲಿ ಭಾರತದಲ್ಲಿ ಹಳೆಯ 500 ಮತ್ತು 1000 ರು. ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು. ರದ್ದಾದ ನೋಟಿನ ಬದಲು ಹೊಸ ನೋಟು ಅಥವಾ ನಾಣ್ಯಗಳೊಂದಿಗೆ ಬದಲಾಯಿಸಲಾಗುತ್ತದೆ. ಕೆಲವೊಮ್ಮೆ, ಒಂದು ದೇಶವು ಹಳೆಯ ಕರೆನ್ಸಿಯನ್ನು ಹೊಸ ಕರೆನ್ಸಿಯೊಂದಿಗೆ ಸಂಪೂರ್ಣವಾಗಿ ಬದಲಾಯಿಸುತ್ತದೆ.
  • ನೋಟು ಅಮಾನ್ಯೀಕರಣ ನಿರ್ಧಾರ ತಪ್ಪಾದಲ್ಲಿ ಆರ್ಥಿಕತೆಯಲ್ಲಿ ಗೊಂದಲ ಅಥವಾ ಗಂಭೀರ ಕುಸಿತಕ್ಕೆ ಕಾರಣವಾಗಬಹುದು.
  • ಕರೆನ್ಸಿಯನ್ನು ಸ್ಥಿರಗೊಳಿಸಲು ಮತ್ತು ಹಣದುಬ್ಬರದ ವಿರುದ್ಧ ಹೋರಾಡಲು, ವ್ಯಾಪಾರ ಮತ್ತು ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಲಭಗೊಳಿಸಲು ಮತ್ತು ಅನೌಪಚಾರಿಕ ಆರ್ಥಿಕ ಚಟುವಟಿಕೆಯನ್ನು ಹೆಚ್ಚು ಪಾರದರ್ಶಕತೆಗೊಳಿಸಲು ಮತ್ತು ಕಾಳಸಂತೆಯಿಂದ ದೂರವಿರಲು ಅಪನಗದೀಕರಣವನ್ನು ಒಂದು ಸಾಧನವಾಗಿ ಬಳಸಲಾಗುತ್ತದೆ.
  • ಕಪ್ಪು ಹಣದ ವಿರುದ್ಧದ ಹೋರಾಟ, ನಕಲಿ ನೋಟುಗಳಿಗೆ ಕಡಿವಾಣ ಹಾಕುವುದು, ಅಕ್ರಮ ಹಣವ ವರ್ಗಾವಣೆ, ತೆರಿಗೆ ವಂಚನೆಯನ್ನು ತಡೆಯುವ ಉದ್ದೇಶದಿಂದ ಭಾರತದಲ್ಲಿ ನೋಟು ಅಪನಗದೀರಣ ಘೋಷಣೆ ಮಾಡಲಾಯಿತು.

ಭಾರತದಲ್ಲಿ ನೋಟು ಅಮಾನ್ಯೀಕರಣದ ಉದಾಹರಣೆ

  • 2016 ರಲ್ಲಿ, ಭಾರತ ಸರ್ಕಾರವು ತನ್ನ ಕರೆನ್ಸಿ ವ್ಯವಸ್ಥೆಯಲ್ಲಿನ ಎರಡು ದೊಡ್ಡ ಮೌಲ್ಯದ ಕರೆನ್ಸಿಗಳಾದ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿತು. ಈ ನೋಟುಗಳು ದೇಶದ ಚಲಾವಣೆಯಲ್ಲಿರುವ ಹಣದ ಶೇಕಡಾ 86 ರಷ್ಟಿದ್ದವು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2016 ನವೆಂಬರ್ 8 ರಂದು ಎಲ್ಲಾ 500 ರು ಮತ್ತು 1000 ರು. ಬ್ಯಾಂಕ್-ನೋಟುಗಳ ಅನಾಣ್ಯೀಕರಣವನ್ನು ಘೋಷಿಸಿದರು. ಹೊಸದಾಗಿ ಪರಿಚಯಿಸಲಾದ 2000 ರೂಪಾಯಿ ಮತ್ತು 500 ರು.ಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಯಿತು.

ಅಪನಗದೀಕರಣದ ಅನುಕೂಲಗಳು ಯಾವುವು?

  • ಅಪನಗದೀಕರಣದ ಮುಖ್ಯ ಪ್ರಯೋಜನವೆಂದರೆ ಅಪರಾಧ ಚಟುವಟಿಕೆಯನ್ನು ಮೊಟಕುಗೊಳಿಸುವುದು. ಇದರಿಂದ ಕಾಳಸಂತೆಕೋರರು ತಮ್ಮ ಬಳಿ ಇರುವ ಕಪ್ಪು ಹಣವನ್ನು ಬಿಳಿಯ ಹಣವನ್ನಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಇದು ನಕಲಿ ನೋಟುಗಳ ತಯಾರಿಕೆಗೆ ಕಡಿವಾಣ ಹಾಕುತ್ತದೆ. ತೆರಿಗೆ ವಂಚನೆಯನ್ನು ತಗ್ಗಿಸಲಿದೆ. ಅಂತಿಮವಾಗಿ, ಇದು ಭೌತಿಕ ಕರೆನ್ಸಿಯ ಚಲಾವಣೆಯನ್ನು ನಿಧಾನಗೊಳಿಸುವ ಮೂಲಕ ಡಿಜಿಟಲ್ ಕರೆನ್ಸಿ ಯುಗಕ್ಕೆ ಕಾರಣವಾಗಬಹುದು.

ಅಪನಗದೀಕರಣದ ಅನಾನುಕೂಲಗಳು ಯಾವುವು?

  • ಮುಖ್ಯ ಅನಾನುಕೂಲವೆಂದರೆ ಹೊಸ ಕರೆನ್ಸಿಯನ್ನು ಮುದ್ರಿಸಲು ತಗುಲುವ ಸಮಯ ಮತ್ತು ಮುದ್ರಿಸಲು ಆಗುವ ವೆಚ್ಚಗಳು. ಅಲ್ಲದೆ, ನೋಟು ಅಮಾನ್ಯ ಮಾಡಿದ ಮತ್ರಕ್ಕೆ ಅಪರಾಧ ಚಟುವಟಿಕೆಯನ್ನು ಕಡಿಮೆ ಮಾಡಲು ಸಾಧ್ಯವಾಗದೇ ಇರಬಹುದು. ಏಕೆಂದರೆ ವಂಚಕರು ಭೌತಿಕ ಕರೆನ್ಸಿಯನ್ನು ಹೊರತುಪಡಿಸಿ ಇತರ ರೂಪಗಳಲ್ಲಿ ಸ್ವತ್ತುಗಳನ್ನು ಹಿಡಿದಿಡಲು ಸಾಕಷ್ಟು ಕಳ್ಳ ಮಾರ್ಗ ಕಂಡುಕೊಳ್ಳಬಹುದು. ಅಂತಿಮವಾಗಿ, ಈ ಪ್ರಕ್ರಿಯೆಯು ಅಪಾಯಕಾರಿಯಾದ ಕಾರಣ ಅದು ರಾಷ್ಟ್ರವನ್ನು ಸಂಪೂರ್ಣ ಗೊಂದಲಕ್ಕೆ ದೂಡಬಹುದು.