Published on: August 8, 2023

ಪಿಎಂ ಶ್ರೀ ಯೋಜನೆ

ಪಿಎಂ ಶ್ರೀ ಯೋಜನೆ

ಸುದ್ದಿಯಲ್ಲಿ ಏಕಿದೆ? ಪಿಎಂ ಶ್ರೀ ಯೋಜನೆಯಡಿ ಕರ್ನಾಟಕ ರಾಜ್ಯ 129 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಸಲು ಮುಂದಾಗಿದೆ.

ಮುಖ್ಯಾಂಶಗಳು

  • ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ವ್ಯಾಪಕ ಕೊಡುಗೆ ನೀಡುವ ಕ್ರಮವಾಗಬಹುದಾಗಿದೆ.
  • ಯೋಜನೆಗೆ ಆಯ್ಕೆಯಾಗಿರುವ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಅಭಿವೃದ್ಧಿ ಮಾಡಲಾಗುತ್ತದೆ.

ಉದ್ದೇಶ

  • ಉತ್ತಮ ಭೌತಿಕ ಮೂಲಸೌಕರ್ಯಗಳನ್ನು ಒದಗಿಸುವುದರ ಜತೆಗೆ ಕಲಿಕೆಗೆ ಸೂಕ್ತ ಸಂಪನ್ಮೂಲ ಹಾಗೂ ವಾತಾವರಣ ಸೃಷ್ಟಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ವರ್ಧಿಸುವ, ಸಮಾನ ಹಾಗೂ ಸಂತಸಭರಿತ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದಾಗಿದೆ.

ಪ್ರಯೋಜನ

  • ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ ಮಕ್ಕಳ ದಾಖಲಾತಿಯಲ್ಲಿ 4 ಲಕ್ಷದಷ್ಟು ಕುಸಿತವಾಗಿರುವುದನ್ನು ತಡೆಗಟ್ಟಲು ಹಾಗೂ ಸರ್ಕಾರಿ ಶಾಲೆಗಳ ಬಗೆಗೆ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಸಾಧ್ಯವಾಗಬಹುದಾಗಿದೆ.

ಕೈಗೊಳ್ಳಲಾಗುವ ಕ್ರಮಗಳು

  • ಶಾಲೆಗಳು ಆವಿಷ್ಕಾರ-ಆಧಾರಿತ, ಕಲಿಕೆ-ಕೇಂದ್ರಿತ ಬೋಧನೆಯ ವಿಧಾನಕ್ಕೆ ಒತ್ತು ನೀಡಲಿವೆ. ಸ್ಮಾರ್ಟ್ ತರಗತಿಗಳು, ಕ್ರೀಡೆಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಹೊಂದಲಿವೆ.
  • ಪ್ರಯೋಗಾಲಯ, ಗ್ರಂಥಾಲಯ ಮತ್ತು ಕಲಾ ಕೊಠಡಿಗಳ ಸೌಲಭ್ಯ ಗಳೊಂದಿಗೆ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
  • ಪಠ್ಯಕ್ರಮದ ಭಾಗವಾಗಿ ನೀರಿನ ಸಂರಕ್ಷಣೆ, ತ್ಯಾಜ್ಯ ಮರುಬಳಕೆ, ಶಕ್ತಿ-ಸಮರ್ಥ ಮೂಲಸೌಕರ್ಯ ಮತ್ತು ಸಾವಯವ ಜೀವನಶೈಲಿಯ ಏಕೀಕರಣದೊಂದಿಗೆ ಹಸಿರು ಶಾಲೆಗಳಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಪಿಎಂ ಶ್ರೀ ಯೋಜನೆ

  • PM SHRI ಶಾಲೆಗಳು (PM ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಎಂದು ಕರೆಯಲಾಗುತ್ತದೆ.
  • ಆರಂಭಿಸಿದವರು: ಕೇಂದ್ರ ಸರ್ಕಾರದ ಕೇಂದ್ರ ಶಿಕ್ಷಣ ಸಚಿವಾಲಯ
  • 7 ಸೆಪ್ಟೆಂಬರ್, 2022 ರಂದು ಕೇಂದ್ರ  ಸರ್ಕಾರವು ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ
  • ಇದರ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 14,500 ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ 5 ವರ್ಷಗಳ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
  • ಅನುಷ್ಠಾನದ ವೆಚ್ಚ: 60 ಪ್ರತಿಶತ ವೆಚ್ಚವನ್ನು ಕೇಂದ್ರವು ಭರಿಸಲಿದ್ದು, ಉಳಿದ 40 ಪ್ರತಿಶತವನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಭರಿಸಲಿವೆ. ಕೆಲವು ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಕೊಡುಗೆಯನ್ನು ಶೇ. 90ರವರೆಗೆ ನೀಡಲು ಕೂಡ ಯೋಜನೆಯಲ್ಲಿ ಉದ್ದೇಶಿಸಲಾಗಿದೆ.
  • NEP ಪಠ್ಯಕ್ರಮದ ರಚನೆ ಮತ್ತು ಬೋಧನಾ ಶೈಲಿಯನ್ನು ವಿವಿಧ ಹಂತಗಳಾಗಿ ವಿಂಗಡಿಸಲಾಗಿದೆ. ಅಡಿಪಾಯ, ಪೂರ್ವಸಿದ್ಧತೆ, ಮಧ್ಯಮ ಮತ್ತು ಮಾಧ್ಯಮಿಕ ಎಂಬ ವಿಭಾಗಗಳಾಗಿವೆ ವಿಭಜಿಸಲಾಗಿದೆ.
  • ಅಡಿಪಾಯದ ವರ್ಷಗಳು (ಪ್ರಿ-ಸ್ಕೂಲ್ ಮತ್ತು 1, 2ನೇ ತರಗತಿ) ಆಟದ ಆಧಾರಿತ ಕಲಿಕೆಯನ್ನು ಒಳಗೊಂಡಿರುತ್ತದೆ.
  • ಪೂರ್ವಸಿದ್ಧತಾ ಹಂತದಲ್ಲಿ (3ರಿಂದ 5ನೇ ತರಗತಿ) ಕೆಲವು ಔಪಚಾರಿಕ ತರಗತಿಯ ಬೋಧನೆಯೊಂದಿಗೆ ಲಘು ಪಠ್ಯಪುಸ್ತಕಗಳನ್ನು ಪರಿಚಯಿಸಬೇಕು.
  • ವಿಷಯ ಶಿಕ್ಷಕರನ್ನು ಮಧ್ಯಮ ಹಂತದಲ್ಲಿ (6ರಿಂದ 8ನೇ ತರಗತಿ) ಪರಿಚಯಿಸಬೇಕು. ಸೆಕೆಂಡರಿ ಹಂತ (9ರಿಂದ 12ನೇ ತರಗತಿ) ಕಲೆ ಮತ್ತು ವಿಜ್ಞಾನ ಅಥವಾ ಇತರ ವಿಭಾಗಗಳನ್ನು ಒಳಗೊಂಡಿರುತ್ತದೆ.
  • ಈ ಶಾಲೆಗಳು ಲ್ಯಾಬ್‌ಗಳು, ಸ್ಮಾರ್ಟ್ ಕ್ಲಾಸ್‌ರೂಮ್‌ಗಳು, ಲೈಬ್ರರಿಗಳು, ಕ್ರೀಡಾ ಉಪಕರಣಗಳು, ಕಲಾ ಕೊಠಡಿ ಇತ್ಯಾದಿಗಳನ್ನು ಒಳಗೊಂಡಂತೆ ಆಧುನಿಕ ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿರುತ್ತವೆ. ನೀರಿನ ಸಂರಕ್ಷಣೆ, ತ್ಯಾಜ್ಯ ಮರುಬಳಕೆ, ಇಂಧನ-ಸಮರ್ಥ ಮೂಲಸೌಕರ್ಯ ಮತ್ತು ಪಠ್ಯಕ್ರಮದಲ್ಲಿ ಸಾವಯವ ಜೀವನಶೈಲಿಯ ಏಕೀಕರಣದೊಂದಿಗೆ ಹಸಿರು ಶಾಲೆಗಳಾಗಿ ಅಭಿವೃದ್ಧಿಗೊಳ್ಳುತ್ತವೆ.
  • ಕೇಂದ್ರೀಯ ವಿದ್ಯಾಲಯಗಳು ಅಥವಾ ಜವಾಹರ್ ನವೋದಯ ವಿದ್ಯಾಲಯಗಳು ಸಂಪೂರ್ಣವಾಗಿ ಕೇಂದ್ರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುತ್ತವೆ. ಕೇಂದ್ರ ವಲಯದ ಯೋಜನೆಗಳ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಅವರಿಗೆ ಸಂಪೂರ್ಣ ಹಣ ನೀಡಲಾಗುತ್ತದೆ.

ನಿಮಗಿದು ತಿಳಿದಿರಲಿ

  • ಕೇಂದ್ರೀಯ ವಿದ್ಯಾಲಯಗಳು ಹೆಚ್ಚಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇಮಕಗೊಂಡಿರುವ ಕೇಂದ್ರ ಸರ್ಕಾರಿ ನೌಕರರ ಮಕ್ಕಳನ್ನು ಪೂರೈಸುತ್ತಿದ್ದರೆ, ದೇಶದ ಗ್ರಾಮೀಣ ಭಾಗಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೋಷಿಸಲು ಜವಾಹರ್ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ PM SHRI ಶಾಲೆಗಳು ಕೇಂದ್ರ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಅಸ್ತಿತ್ವದಲ್ಲಿರುವ ಶಾಲೆಗಳ ಅಪ್‌ಗ್ರೇಡ್ ಆಗಿರುತ್ತವೆ.