Published on: September 27, 2021

ಬಿಎಸ್ ಯಡಿಯೂರಪ್ಪಗೆ ‘ಅತ್ಯುತ್ತಮ ಶಾಸಕ ಪ್ರಶಸ್ತಿ’

ಬಿಎಸ್ ಯಡಿಯೂರಪ್ಪಗೆ ‘ಅತ್ಯುತ್ತಮ ಶಾಸಕ ಪ್ರಶಸ್ತಿ’

ಸುದ್ಧಿಯಲ್ಲಿ ಏಕಿದೆ?  ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ವಿಧಾನಸಭೆಯಿಂದ ನೀಡಲಾಗುವ ಮೊದಲ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಲೋಕಸಭೆ ಸ್ಪೀಕರ್ ಓ ಬಿರ್ಲಾ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

  • ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಶಾಸಕರಿಗೆ ಈ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ನೀಡಲಾಗಿದೆ. 2020-21ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
  • ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ಸಮಿತಿ ರಚನೆ ಮಾಡಲಾಗಿತ್ತು.

ಹಿನ್ನಲೆ 

  • ಲೋಕಸಭೆ ಮತ್ತು ರಾಜ್ಯಸಭೆಯಲ್ಲಿಉತ್ತಮ ಸಂಸದೀಯ ಪಟುವನ್ನು ಆಯ್ಕೆ ಮಾಡುವಂತೆ ಎಲ್ಲ ರಾಜ್ಯಗಳ ವಿಧಾನಸಭೆಯಲ್ಲಿಯೂ ‘ಅತ್ಯುತ್ತಮ ಶಾಸಕ’ನನ್ನು ಪ್ರತಿ ವರ್ಷ ಗುರುತಿಸುವ ವ್ಯವಸ್ಥೆ ಇರಬೇಕು ಎಂದು ಓಂ ಬಿರ್ಲಾ ಹೇಳಿದ್ದರು. ಅಸ್ಸಾಂ, ಗುಜರಾತ್, ಜಾರ್ಖಂಡ್, ರಾಜಸ್ಥಾನ, ಉತ್ತರಾಖಂಡ ಮುಂತಾದ ಕಡೆ ಈ ಪದ್ಧತಿ ಇದೆ.
  • ರಾಜ್ಯ ವಿಧಾನಸಭೆಯಲ್ಲಿಯೂ ‘ಅತ್ಯುತ್ತಮ ಶಾಸಕ ಪ್ರಶಸ್ತಿ’ ನೀಡುವ ಸಂಬಂಧ ಜನವರಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಪ್ರಶಸ್ತಿಗೆ ಪರಿಗಣಿಸುವ ಮಾನದಂಡಗಳು

  • ಶಾಸಕರು ಮತಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು, ಶಾಸಕರಾಗಿ ಪಡೆದಿರುವ ಅನುಭವ, ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ತೋರಿಸುವ ಕೌಶಲ, ಸದನದಲ್ಲಿ ಪ್ರಸ್ತಾಪಿಸುವ ವಿಷಯ ಹಾಗೂ ಅದರ ಗಂಭೀರತೆ, ಕನ್ನಡ ಭಾಷೆಯಲ್ಲಿನ ಹಿಡಿತ ಸೇರಿದಂತೆ ಸುಮಾರು ಹದಿನೈದು ಅಂಶಗಳನ್ನು ಈ ಪ್ರಶಸ್ತಿಗೆ ಶಾಸಕರ ಆಯ್ಕೆಗೆ ಪರಿಗಣಿಸಲಾಗುತ್ತದೆ.

ಸಮಿತಿಯಲ್ಲಿ ಯಾರು ಇರುತ್ತಾರೆ ?

  • ವಿಧಾನಸಭೆ ಸ್ಪೀಕರ್, ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ. ಮುಖ್ಯಮಂತ್ರಿ, ವಿಧಾನಸಭೆ ಉಪಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು, ಸಭಾಧ್ಯಕ್ಷರಿಂದ ನಾಮನಿರ್ದೇಶನ ಮಾಡಲಾದ ಒಬ್ಬ ಸದಸ್ಯರು ಸಮಿತಿಯಲ್ಲಿ ಇರುತ್ತಾರೆ. ವಿಧಾನಸಭೆ ಕಾರ್ಯದರ್ಶಿ ಈ ಸಮಿತಿಯ ಕಾರ್ಯದರ್ಶಿಯಾಗಿರುತ್ತಾರೆ.