Published on: October 6, 2023

ಭೌತ ಶಾಸ್ತ್ರದ ನೊಬೆಲ್‌ 2023

ಭೌತ ಶಾಸ್ತ್ರದ ನೊಬೆಲ್‌ 2023

ಸುದ್ದಿಯಲ್ಲಿ ಏಕಿದೆ?  2023ನೇ ಸಾಲಿನ ಭೌತ ಶಾಸ್ತ್ರದ ನೊಬೆಲ್‌ಗೆ ಮೂವರು ವಿಜ್ಞಾನಿಗಳು ಭಾಜನರಾಗಿದ್ದಾರೆ. ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕೆ ಅನುಕೂಲಕರವಾದ ಸಂಶೋಧನೆಗಳನ್ನು ಮಾಡಿರುವ ಪಿಯರೆ ಅಗೋಸ್ತಿನಿ, ಫೆರೆನ್ಸ್ ಕ್ರೌಸ್ಜ್ ಮತ್ತು ಆನ್ನೆ ಲ್ಹುಯಿಲೀರ್ ಅವರನ್ನು ಜಂಟಿಯಾಗಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಮುಖ್ಯಾಂಶಗಳು

  • ಎಲೆಕ್ಟ್ರಾನ್ ಡೈನಾಮಿಕ್ಸ್‌ ಅಧ್ಯಯನಕ್ಕಾಗಿ ಅಟ್ಟೋಸೆಕೆಂಡ್ ಪಲ್ಸ್‌ಗಳನ್ನು ಸೃಷ್ಟಿಸುವ ಪ್ರಾಯೋಗಿಕ ವಿಧಾನಗಳ ಕೊಡುಗೆಗಾಗಿ ಅವರಿಗೆ ನೊಬೆಲ್ ನೀಡಲಾಗುತ್ತಿದೆ. ಎಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ದಿ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಟಿಸಿದೆ.
  • ಈ ಮೂವರು ಮನುಕುಲಕ್ಕೆ ಪರಮಾಣು ಹಾಗೂ ಅಣುಗಳ ಒಳಗಿನ ಎಲೆಕ್ಟ್ರಾನ್‌ಗಳ ಜಗತ್ತನ್ನು ಅನ್ವೇಷಿಸುವ ಹೊಸ ಸಾಧನಗಳನ್ನು ನೀಡಿದ್ದಾರೆ. ತೀರಾ ಕಿರಿದಾದ ಬೆಳಕಿನ ಕಣಗಳನ್ನು ಸೃಷ್ಟಿಸುವ ಹಾದಿಯನ್ನು ಪರಿಚಯಿಸಿದ್ದಾರೆ. ಇದನ್ನು ಎಲೆಕ್ಟ್ರಾನ್‌ಗಳ ಚಲನೆ ಅಥವಾ ಎನರ್ಜಿ ಬದಲಾವಣೆಯ ತ್ವರಿತ ಪ್ರಕ್ರಿಯೆಗಳ ಮಾಪನಕ್ಕೆ ಬಳಸಿಕೊಳ್ಳಬಹುದಾಗಿದೆ.
  • ಪಿಯರೆ ಅಗೋಸ್ತಿನಿ ಅವರು ಫ್ರಾನ್ಸ್ ಮೂಲದ ವಿಜ್ಞಾನಿಯಾಗಿದ್ದರೆ, ಫೆರೆನ್ಸ್ ಕ್ರೌಸ್ಜ್ ಹಂಗೆರಿ ದೇಶದವರಾಗಿದ್ದಾರೆ. ಆನ್ನೆ ಲ್ಹುಯಿಲೀರ್ ಕೂಡ ಫ್ರಾನ್ಸ್‌ನವರಾಗಿದ್ದು, ಸ್ವೀಡನ್‌ನಲ್ಲಿ ಆಟೋಮಿಕ್ ಭೌತಶಾಸ್ತ್ರ ಪ್ರೊಫೆಸರ್ ಆಗಿದ್ದಾರೆ.

ಅಟ್ಟೋಸೆಕೆಂಡ್

  • ಅಟ್ಟೋಸೆಕೆಂಡ್ ಎನ್ನುವುದು ಸಮಯದ ಅತಿ ಚಿಕ್ಕ ಘಟಕವಾಗಿದ್ದು, ಅದು ಸೆಕೆಂಡ್‌ನ ಒಂದು ಕ್ವಿಂಟಿಲಿಯನ್‌ಗೆ ಸಮಾನವಾಗಿದೆ (1 ಅಟೋಸೆಕೆಂಡ್ ಎಂದೆ 0.000000000000000001 ಸೆಕೆಂಡ್).

ನಿಮಗಿದು ತಿಳಿದಿರಲಿ

  • 1901ರಲ್ಲಿ ಈ ಸಂಪ್ರದಾಯ ಆರಂಭವಾಗಿದ್ದು, 2022ರವರೆಗೂ 116 ಬಾರಿ 222 ಹೆಸರಾಂತ ಭೌತ ವಿಜ್ಞಾನಿಗಳಿಗೆ ನೊಬೆಲ್ ದೊರಕಿದೆ. ಜಾನ್ ಬರ್ಡೀನ್ ಅವರು 1956 ಹಾಗೂ 1972ರಲ್ಲಿ ಎರಡು ಬಾರಿ ಭೌತ ಶಾಸ್ತ್ರದ ನೊಬೆಲ್ ಪಡೆದ ಏಕೈಕ ಭೌತ ವಿಜ್ಞಾನಿಯಾಗಿದ್ದಾರೆ. ಕಳೆದ ಸಾಲಿನಲ್ಲಿ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟೋನ್ ಜೀಲಿಂಜರ್ ಅವರಿಗೆ ಭೌತಶಾಸ್ತ್ರ ನೊಬೆಲ್ ದೊರಕಿತ್ತು.