Published on: October 6, 2023

8ನೇ ಖಂಡ ಝೀಲ್ಯಾಂಡಿಯಾ

8ನೇ ಖಂಡ ಝೀಲ್ಯಾಂಡಿಯಾ

ಸುದ್ದಿಯಲ್ಲಿ ಏಕಿದೆ? ವಿಶ್ವದಲ್ಲಿದ್ದ 7 ಖಂಡಗಳ ಪಟ್ಟಿಗೆ ಮತ್ತೊಂದು ಖಂಡ ಸೇರ್ಪಡೆಯಾಗಿದೆ. 375 ವರ್ಷಗಳಿಂದ ನಮ್ಮ ಜ್ಞಾನದಿಂದ ಕಾಣೆಯಾಗಿದ್ದ ಹೊಸ ಖಂಡವನ್ನು ವಿಜ್ಞಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಹೊಸ ಖಂಡಕ್ಕೆ ‘ಝೀಲ್ಯಾಂಡಿಯಾ’ ಎಂದು ಹೆಸರಿಡಲಾಗಿದೆ.

ಮುಖ್ಯಾಂಶಗಳು

  • 375 ವರ್ಷಗಳ ಬಳಿಕ ನ್ಯೂಜಿಲೆಂಡ್‌ನ ಕ್ರೌನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಈ ಕುರಿತಾಗಿ ಸಂಶೋಧನೆ ನಡೆಸಿ ವರದಿ ಮಂಡಿಸಿದೆ.
  • ಝೀಲ್ಯಾಂಡಿಯಾ  ಪ್ರಾಚೀನ ಮಹಾಖಂಡವಾದ ಗೊಂಡ್ವಾನಾದ ಭಾಗವಾಗಿತ್ತುಎಂಬುದು ವಿಶೇಷ.
  • ಎಂಟನೇ ಖಂಡದ ಬಹುಭಾಗವು ನೀರಿನಲ್ಲಿ ಮುಳುಗಿರುವುದರಿಂದ ಸಾಗರ ತಳದಲ್ಲಿನ ಬಂಡೆಗಳ ಮಾದರಿಗಳ ದತ್ತಾಂಶಗಳಿಂದ ಝೀಲ್ಯಾಂಡಿಯಾದ ಹೊಸ ನಕ್ಷೆ ರೂಪಿಸಲಾಗಿದೆ.

ಝೀಲ್ಯಾಂಡಿಯಾ

  • ಝೀಲ್ಯಾಂಡಿಯಾ ವಿಶಾಲವಾದ ಖಂಡವಾಗಿದ್ದು, ಮಡಗಾಸ್ಕರ್ಗಿಂತ ಆರು ಪಟ್ಟು ದೊಡ್ಡದಾಗಿದೆ. 1.89 ದಶಲಕ್ಷ ಚದರ ಮೈಲುಗಳು ಅಥವಾ 4.9 ದಶಲಕ್ಷ ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. ಈ ದೊಡ್ಡ ಖಂಡ, ಆಫ್ರಿಕಾ ಖಂಡದ ಮಡಗಾಸ್ಕರ್ ದ್ವೀಪಕ್ಕಿಂತಾ 6 ಪಟ್ಟು ದೊಡ್ಡದಾಗಿದೆ. ಆದರೆ, ಈ ಖಂಡ ಸಮುದ್ರದಲ್ಲಿ ಮುಳುಗಿ ಹೋಗಿದೆ. ಈ ಖಂಡದ 94% ಭಾಗ ನೀರಿನ ಒಳಗೆ ಇದೆ. ಝೀಲ್ಯಾಂಡಿಯಾ ಖಂಡದ ಎತ್ತರದ ಪ್ರದೇಶಗಳು ಮಾತ್ರ ನೀರಿನ ಮೇಲೆ ಕಾಣುತ್ತಿವೆ. ಈ ಎತ್ತರದ ಪ್ರದೇಶವೇ ಇವತ್ತಿನ ನ್ಯೂಜಿಲೆಂಡ್ ದೇಶ. ಈ ದೇಶವು ಝೀಲ್ಯಾಂಡಿಯಾ ದ್ವೀಪದ 6% ಮಾತ್ರ. ಮಿಕ್ಕ ಭೂ ಭಾಗವೆಲ್ಲಾ ಸಮುದ್ರದ ಆಳದಲ್ಲೇ ಇದೆ.

ಹೆಸರು ಬಂದಿದ್ದು ಹೇಗೆ?

  • ಝೀಲ್ಯಾಂಡಿಯಾ ಎಂಬ ಇಂಗ್ಲಿಷ್ ಪದವು ನ್ಯೂಜಿಲೆಂಡ್ನ ಲ್ಯಾಟಿನೇಟ್ ಮೂಲದ್ದಾಗಿದೆ. 1990ರ ದಶಕದ ಮಧ್ಯಭಾಗದಲ್ಲಿ ಈ ಹೆಸರನ್ನು ರೂಪಿಸಲಾಯಿತು. ಮಾವೋರಿ ಭಾಷೆಯಲ್ಲಿಈ ಭೂಪ್ರದೇಶವನ್ನು ‘ತೆ ರಿಯು-ಎ-ಮೌಯಿ’ ಎಂದು ಹೆಸರಿಸಲಾಗಿದೆ. ಇದರರ್ಥ ‘ಮೌಯಿ ಬೆಟ್ಟಗಳು, ಕಣಿವೆಗಳು ಮತ್ತು ಬಯಲು ಪ್ರದೇಶಗಳು’ ಎಂಬರ್ಥ ನೀಡುತ್ತದೆ.

ಇಷ್ಟು ದೊಡ್ಡ ಭೂ ಭಾಗ ಸಮುದ್ರದಲ್ಲಿ ಮುಳುಗೋಕೆ ಕಾರಣ ಏನು?

  • ದಕ್ಷಿಣ ಧ್ರುವದ ಬಳಿಯಲ್ಲಿ ಇದ್ದ ಭಾರತ ಭೂ ಖಂಡ ಕೋಟ್ಯಂತರ ವರ್ಷಗಳ ಕಾಲ ಸಂಚಾರ ಮಾಡಿ ಇವತ್ತಿನ ಏಷ್ಯಾ ಖಂಡದ ಭಾಗವಾಗಿದೆ. ಅದೇ ರೀತಿ ಭೂಮಿಯಲ್ಲಿ ಇರುವ ಯಾವ ಖಂಡವೂ ಶಾಶ್ವತ ಅಲ್ಲ. ಎಲ್ಲವೂ ಅಲೆಯುತ್ತಲೇ ಇರುತ್ತವೆ. ಭೂಮಿಯ ತಳ ಭಾಗದಲ್ಲಿ ಇರುವ ಲಾವಾರಸದ ಒತ್ತಡದಿಂದಾಗಿ ಭೂಮಿಯ ಖಂಡಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿಧಾನವಾಗಿ ಸಾಗುತ್ತವೆ.
  • ಈ ರೀತಿ ಸಂಚಾರ ಮಾಡುವಾಗ ಒಂದು ಖಂಡ, ಮತ್ತೊಂದು ಖಂಡಕ್ಕೆ ಡಿಕ್ಕಿ ಹೊಡೆಯಬಹುದು. ಆ ರೀತಿ ಡಿಕ್ಕಿ ಸಂಭವಿಸೋದನ್ನ ಭೂಕಂಪ ಅಂತಾರೆ. ಇನ್ನು ಏಷ್ಯಾ ಖಂಡಕ್ಕೆ ಭಾರತ ಭೂಖಂಡ ಡಿಕ್ಕಿ ಹೊಡೆಯುತ್ತಲೇ ಇದೆ. ಹೀಗಾಗಿ, ಹಿಮಾಲಯ ಪರ್ವತಗಳು ವರ್ಷಕ್ಕೆ ಕೆಲವು ಇಂಚುಗಳಷ್ಟು ಎತ್ತರ ಆಗುತ್ತಿದೆ. ಈ ರೀತಿಯ ಭೂಖಂಡಗಳ ಸಂಚಾರವನ್ನು ಮೊದಲು ಗ್ರಹಿಸಿದ್ದು ಜರ್ಮನಿಯ ವಿಜ್ಞಾನಿ ಆಲ್‌ಫ್ರೆಡ್ ವೆಗೆನರ್. ಈತ ಈ ಕುರಿತಾಗಿ ಸಿದ್ದಾಂತವನ್ನೇ ರೂಪಿಸಿದ್ದ.

ಏನಿದು ಗೊಂಡ್ವಾನಾ?

  • ಇವತ್ತಿಗೆ 500 ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲಿರುವ ಎಲ್ಲ ಖಂಡಗಳೂ ಒಂದೇ ಆಗಿದ್ದವು. ಈಗಿನಂತೆ ಎಲ್ಲಾ 7 ಖಂಡಗಳೂ ಪರಸ್ಪರ ದೂರವಾಗಿ ಇರಲಿಲ್ಲ. ಅಮೆರಿಕ, ಏಷ್ಯಾ, ಆಫ್ರಿಕಾ ಖಂಡಗಳೆಲ್ಲವೂ ಪರಸ್ಪರ ಒಂದಕ್ಕೊಂದು ಅಂಟಿಕೊಂಡಿದ್ದವು. ಇದನ್ನೇ ಗೊಂಡ್ವಾನಾ ಮಹಾ ಖಂಡ ಎಂದು ಕರೆಯಲಾಗುತ್ತದೆ.

ಹಿಂದಿನ ಉಲ್ಲೇಖ

  • 1642ರಲ್ಲಿಡಚ್ ಪರಿಶೋಧಕ ಅಬೆಲ್ ಟ್ಯಾಸ್ಮನ್ ಝೀಲ್ಯಾಂಡಿಯಾ ಖಂಡದ ಬಗ್ಗೆಒಂದಿಷ್ಟು ಅನುಮಾನ  ವ್ಯಕ್ತಪಡಿಸಿದ್ದರು. ಆದರೆ ನಿರ್ದಿಷ್ಟ ಅಧ್ಯಯನದ ಕೊರತೆಯಿಂದ ಅದು ಅಂತಿಮಗೊಂಡಿರಲಿಲ್ಲ. 1995 ರಲ್ಲಿಬ್ರೂಸ್ ಲ್ಯುಯೆಂಡಿಕ್ ಅವರು ಝೀಲ್ಯಾಂಡಿಯಾದ ಹೆಸರು ಮತ್ತು ಪರಿಕಲ್ಪನೆಯನ್ನು ಪುನರ್ ಪ್ರಸ್ತಾಪಿಸಿದರು.
  • ಉಪಗ್ರಹದ ಚಿತ್ರಗಳ ಆಧಾರದ ಮೇಲೆ 2021ರ ಅಧ್ಯಯನವು ಝೀಲ್ಯಾಂಡಿಯಾವು ಭೂವಿಜ್ಞಾನಿಗಳು ಹಿಂದೆ ಭಾವಿಸಿದ್ದಕ್ಕಿಂತ ಎರಡು ಪಟ್ಟು ಹಳೆಯದು. ಅಂದರೆ ಅದು ಒಂದು ಶತಕೋಟಿ ವರ್ಷಗಳಷ್ಟು ಹಳೆಯದಾಗಿದೆ ಎಂದು ಸೂಚಿಸುತ್ತದೆ ಎಂದು ತೀರ್ಮಾನಿಸಿದರು. ಸುಮಾರು 23 ದಶಲಕ್ಷ ವರ್ಷಗಳ ಹಿಂದೆ ಭೂಪ್ರದೇಶವು ಸಂಪೂರ್ಣವಾಗಿ ಮುಳುಗಿ ಹೋಗಿರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. 2017ರಿಂದ ಪ್ರಾರಂಭವಾದ ಅಧ್ಯಯನ 2023ರಲ್ಲಿ ಮುಕ್ತಾಯಗೊಂಡಿದ್ದು, ಹೊಸ ನಕ್ಷೆಯನ್ನು ರೂಪಿಸಲಾಗಿದೆ

ನಿಮಗಿದು ತಿಳಿದಿರಲಿ

  • ಭೂಮಿಯ ಮೇಲಿರುವ ಅತಿ ದೊಡ್ಡ ಖಂಡಗಳ ಪೈಕಿ ಏಷ್ಯಾ ಮೊದಲನೆಯದು. ಜನಸಂಖ್ಯೆಯಲ್ಲೂ ಏಷ್ಯಾ ದೊಡ್ಡದು. ಭಾರತ ಕೂಡಾ ಏಷ್ಯಾ ಖಂಡದಲ್ಲೇ ಇದೆ. ಇದಲ್ಲದೆ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಹಾಗೂ ಅಂಟಾರ್ಟಿಕಾ ಖಂಡಗಳು ಈವರೆಗೂ ಅಸ್ತಿತ್ವದಲ್ಲಿ ಇದ್ದವು. ಇದೀಗ ಝೀಲ್ಯಾಂಡಿಯಾ ಅನ್ನೋ 8ನೇ ಹೊಸ ಖಂಡ, ಈ ಪಟ್ಟಿಗೆ ಸೇರ್ಪಡೆ ಆಗಿದೆ.