Published on: January 17, 2022

ಸ್ಟಾರ್ಟ್ಅಪ್ ಅವಾರ್ಡ್

ಸ್ಟಾರ್ಟ್ಅಪ್ ಅವಾರ್ಡ್

ಸುದ್ಧಿಯಲ್ಲಿ ಏಕಿದೆ ? ನವೋದ್ಯಮಗಳ ಉತ್ತೇಜನಕ್ಕಾಗಿ ಕೇಂದ್ರ ಸರಕಾರ ನೀಡುವ ‘ಸ್ಟಾರ್ಟ್‌ಅಪ್‌ ಅವಾರ್ಡ್‌’ನಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ. ಈ ಬಾರಿ ಘೋಷಿಸಲಾದ 46 ‘ರಾಷ್ಟ್ರೀಯ ಸ್ಟಾರ್ಟ್‌ಅಪ್‌ ಅವಾರ್ಡ್‌’ಗಳ ಪೈಕಿ 14 ಪ್ರಶಸ್ತಿಗಳು ರಾಜ್ಯದ ಪಾಲಾಗಿವೆ.

ಮುಖ್ಯಾಂಶಗಳು

  • ಕರ್ನಾಟಕದಿಂದ ಕೇಂದ್ರ ಸರಕಾರಕ್ಕೆ 459 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ದೇಶಾದ್ಯಂತ ವಿವಿಧ ರಾಜ್ಯಗಳಿಂದ ಒಟ್ಟು 2,177 ನವೋದ್ಯಮಗಳ ಹೆಸರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು.
  • 2021 ರಲ್ಲಿ, ಕರ್ನಾಟಕವು 1.60 ಲಕ್ಷ ಕೋಟಿ ರೂ. ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯನ್ನು ಆಕರ್ಷಿಸಿದೆ. ಇದು ಇಡೀ ದೇಶಕ್ಕೆ ಹರಿದು ಬಂದ ಹೂಡಿಕೆಯ ಅರ್ಧಕ್ಕಿಂತ ಹೆಚ್ಚು. ದೇಶದ 57,000 ಸ್ಟಾರ್ಟ್‌ಅಪ್‌ಗಳಲ್ಲಿ, ಕರ್ನಾಟಕವು ಸುಮಾರು 13,000 ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ.

ಪ್ರಶಸ್ತಿ ಬಗ್ಗೆ

  • ಉದ್ಯಮ ವಲಯದಲ್ಲಿ ದೊಡ್ಡ ಬದಲಾವಣೆ ತಂದ ದೇಶದ ಒಟ್ಟು 46 ಸ್ಟಾರ್ಟಪ್‌ಗಳನ್ನು ಗುರುತಿಸಿ 2021ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ.
  • ಕೃಷಿ, ಕುಡಿಯುವ ನೀರು, ಕೌಶಲಾಭಿವೃದ್ಧಿ ಸೇರಿದಂತೆ 15 ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದಯೋನ್ಮುಖ ಕಂಪನಿಗಳನ್ನು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು. ಈ ಬಾರಿ ವಿಶೇಷವಾಗಿ ದೇಶೀಯ ಭಾಷೆಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ಸ್ಟಾರ್ಟಪ್‌ಗಳ ವಿಶೇಷ ವಿಭಾಗವನ್ನು ಕೂಡ ಪ್ರಶಸ್ತಿಗಾಗಿ ಸೃಷ್ಟಿಸಲಾಗಿತ್ತು.
  • ಒಟ್ಟಾರೆ 2,177 ಸ್ಟಾರ್ಟಪ್‌ಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಆ ಪೈಕಿ 86 ಸ್ಟಾರ್ಟಪ್‌ಗಳ ನೇತೃತ್ವವನ್ನು ಮಹಿಳೆಯರು ವಹಿಸಿದ್ದಾರೆ ಎನ್ನುವುದು ಗಮನಾರ್ಹ.

ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು 

  • ಎಲಿವೇಟ್ 100 ಕರ್ನಾಟಕ ಸರಕಾರದ ಒಂದು ಕಾರ್ಯಕ್ರಮವಾಗಿದ್ದು, ಇದರ ಮೂಲಕ ಭರವಸೆಯ ಸ್ಟಾರ್ಟ್‌ಅಪ್‌ಗಳಿಗೆ ಸೀಡ್‌ ಫಂಡಿಂಗ್‌ನ್ನು ನೀಡಿ ಸರಕಾರ ಬೆಂಬಲಿಸುತ್ತಿದೆ.
  • ರಾಜ್ಯ ಸರ್ಕಾರವು ಈ ವರ್ಷ 200 ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸಿನ ಬೆಂಬಲ ನೀಡಲು ಉದ್ದೇಶಿಸಿದ್ದು, ನೆರವು ನೀಡಲಾಗುತ್ತಿರುವ ಸ್ಟಾರ್ಟಪ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ. ‘Idea2Poc’ ಅಡಿಯಲ್ಲಿ ಸೀಡ್ ಫಂಡಿಂಗ್‌ನೊಂದಿಗೆ ಸ್ಟಾರ್ಟ್‌ಅಪ್‌ಗಳನ್ನು ಸರಕಾರ ಬೆಂಬಲಿಸಲಿದ್ದು, 50 ಲಕ್ಷ ರೂ.ವರೆಗೂ ನೆರವು ನೀಡಲಿದೆ
  • ಇಕ್ವಿಟಿ ಮತ್ತು ನ್ಯಾಯೋಚಿತತೆಯನ್ನು ಖಚಿತಪಡಿಸಿಕೊಳ್ಳಲು, ಜಿಲ್ಲೆಗಳಲ್ಲಿ ವಿಶಿಷ್ಟ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಲು ಮತ್ತು ಅವುಗಳನ್ನು ಬೆಂಬಲಿಸಲು ಸರ್ಕಾರವು ತನ್ನ ಸ್ಟಾರ್ಟಪ್ ನೀತಿಯನ್ನು ಪರಿಷ್ಕರಿಸುತ್ತಿದೆ
  • ಸ್ಟಾರ್ಟಪ್‌ಗಳಿಗೆ ಹೆಚ್ಚುವರಿ ಒತ್ತು ನೀಡಲು ಸರ್ಕಾರವು ಈಗಾಗಲೇ ತನ್ನ ಪಬ್ಲಿಕ್‌ ಪ್ರೊಕ್ಯುರ್‌ಮೆಂಟ್‌ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ. ಇದರಿಂದಾಗಿ ಸರ್ಕಾರಿ ಟೆಂಡರ್‌ಗಳಲ್ಲಿ ಈಗಿರುವ ಕಂಪನಿಗಳ ಜತೆ ಸ್ಪರ್ಧಿಸಲು ಸ್ಟಾರ್ಟ್‌ಅಪ್‌ಗಳಿಗೆ ಸಾಧ್ಯವಾಗಲಿದೆ
  • ಬಿಯಾಂಡ್ ಬೆಂಗಳೂರು: ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ರಾಜ್ಯದ ಜಿಲ್ಲೆಗಳಲ್ಲಿ ನವೋದ್ಯಮ, ಐಟಿ ಬಿಟಿ, ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸುವ ಚಿಂತನೆಯಿದೆ. ರಾಜ್ಯದಲ್ಲಿ ನೂತನ ಆರ್ ಎಂಡ್ ಡಿ ನೀತಿಯನ್ನು ಪ್ರಾರಂಭಿಸಿ, ಸಣ್ಣ ಮಟ್ಟದ ಗ್ಯಾರೇಜಿನಿಂದ ಹಿಡಿದು ದೊಡ್ಡ ಕೈಗಾರಿಕೆವರೆಗೂ ವೈಜ್ಞಾನಿಕ ಸಂಶೋಧನೆಗೆ ಸಹಕಾರ ನೀಡಲಾಗುವುದು
  • ಶಾಲೆಗಳಲ್ಲಿ ಸಂಶೋಧನೆ ಹಾಗೂ ನವೋದ್ಯಮಕ್ಕೆ ಭದ್ರ ಬುನಾದಿ: ಶಾಲೆಗಳಲ್ಲಿ ವೈಜ್ಞಾನಿಕ ಚಿಂತನೆ, ಉದ್ಯಮಶೀಲತೆಗೆ ಉತ್ತೇಜನ ನೀಡಲು ಶಾಲೆಗಳ ಪಠ್ಯಪುಸ್ತಕದಲ್ಲಿ ಈ ವಿಷಯಗಳನ್ನು ಸೇರಿಸಲು ತೀರ್ಮಾನಿಸಲಾಗಿದೆ. 150 ಐಟಿಐಗಳನ್ನು ಉನ್ನತೀಕರಿಸಲಾಗಿದೆ. ಡಿಪ್ಲೊಮಾ ಕಾಲೇಜುಗಳನ್ನು ಉನ್ನತೀಕರಿಸಲು ಯೋಜಿಸಲಾಗಿದೆ. ಶಾಲೆ ಕಾಲೇಜುಗಳಲ್ಲಿ ವೈಜ್ಞಾನಿಕ ಚಿಂತನೆ ಸಂಶೋಧನೆ ಹಾಗೂ ನವೋದ್ಯಮಕ್ಕೆ ಭದ್ರ ಬುನಾದಿ ಹಾಕುವ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ತರಲಿದೆ

ಬೆಂಗಳೂರು ಮತ್ತು ನವೋದ್ಯಮಗಳು

  • ಭಾರತವು 80ಕ್ಕೂ ಹೆಚ್ಚು ಯುನಿಕಾರ್ನ್‌ಗಳಿಗೆ (1 ಶತಕೋಟಿ ಡಾಲರ್‌ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸ್ಟಾರ್ಟ್‌ಅಪ್‌ಗಳು) ನೆಲೆಯಾಗಿದ್ದು ಬೈಜುಸ್, ಝೆರೋಧಾ, ಕ್ರೆಡ್, ಬಿಗ್ ಬಾಸ್ಕೆಟ್ ಮತ್ತು ಓಲಾ ಎಲೆಕ್ಟ್ರಿಕ್ ಸೇರಿ ಅವುಗಳಲ್ಲಿ ಬಹುಪಾಲು ಬೆಂಗಳೂರಿನಲ್ಲಿವೆ
  • ಬೆಂಗಳೂರು ನಗರದಲ್ಲಿ 180 ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನಾ ಕೇಂದ್ರಗಳಿವೆ. ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮ, ಹೆಚ್ಚು ಉದ್ಯೋಗ ಸೃಜಿಸುವಂತಹ ಕ್ಷೇತ್ರಗಳ್ಲಲಿ ಸ್ಟಾರ್ಟ್ ಅಪ್ ಗಳು ಬರಬೇಕೆನ್ನುವ ಚಿಂತನೆ ಸರ್ಕಾರ ಹೊಂದಿದೆ.
  • ಬೆಂಗಳೂರು ತನ್ನ ಸಾಹಸೋದ್ಯಮ ಬಂಡವಾಳ ನಿಧಿ (ವೆಂಚರ್‌ ಕ್ಯಾಪಿಟಲ್ ಫಂಡಿಂಗ್‌)ಯನ್ನು 2021 ರಲ್ಲಿ 21.3 ಶತಕೋಟಿ ಡಾಲರ್‌ಗೆ ಏರಿಸಿಕೊಂಡಿದ್ದು, ದ್ವಿಗುಣಗೊಂಡಿದೆ