ಸುದ್ದಿ - ಡಾ. ಅರವಿಂದ್ ಪನಗರಿಯಾ ಅವರ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗವು (2026–31), ಒಂದು ತಿಂಗಳ ಕಾಲಾವಧಿ ವಿಸ್ತರಣೆಯನ್ನು ಪಡೆದ ನಂತರ, ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತು. ಈ ಆಯೋಗದ ಶಿಫಾರಸುಗಳು ಎನ್.ಕೆ. ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗದ (2021–26) ನಂತರ ಜಾರಿಗೆ ಬರಲಿದ್ದು, 1 April 2026 ರಿಂದ ಪ್ರಾರಂಭವಾಗಿ ಐದು ವರ್ಷಗಳ ಅವಧಿಗೆ ಅನ್ವಯಿಸುತ್ತವೆ.
ವರದಿಯ ಪ್ರಮುಖ ಮುಖ್ಯಾಂಶಗಳು:
- ತೆರಿಗೆ ಹಂಚಿಕೆ ಸೂತ್ರ (Tax Devolution Formula): ಕೇಂದ್ರ ಮತ್ತು ರಾಜ್ಯಗಳ ನಡುವೆ ವಿಭಜಿಸಬಹುದಾದ ತೆರಿಗೆ ನಿಧಿಯನ್ನು (Divisible Tax Pool) ಹಂಚಿಕೊಳ್ಳಲು ಮತ್ತು ರಾಜ್ಯ-ರಾಜ್ಯಗಳ ನಡುವಿನ ವಿತರಣೆಗೆ ಸಂಬಂಧಿಸಿದ ತತ್ವಗಳನ್ನು ಶಿಫಾರಸು ಮಾಡಿದೆ.
- ಸಹಾಯಾನುದಾನದ ಚೌಕಟ್ಟು (Grants-in-Aid Framework): ರಾಜ್ಯಗಳಿಗೆ ಕಂದಾಯ ಕೊರತೆ ಅನುದಾನಗಳು (Revenue Deficit Grants), ಕಾರ್ಯಕ್ಷಮತೆ ಆಧಾರಿತ ಅನುದಾನಗಳು ಮತ್ತು ವಲಯ-ನಿರ್ದಿಷ್ಟ ಬೆಂಬಲಕ್ಕಾಗಿ ಮಾನದಂಡಗಳನ್ನು ಸೂಚಿಸಿದೆ.
- ಸ್ಥಳೀಯ ಆಡಳಿತಕ್ಕೆ ಹಣಕಾಸು (Local Governance Financing): ಸಂವಿಧಾನದ ವಿಧಿ 280 ಕ್ಕೆ ಅನುಗುಣವಾಗಿ, ಪಂಚಾಯತ್‌ಗಳು ಮತ್ತು ಪುರಸಭೆಗಳಿಗಾಗಿ ರಾಜ್ಯದ ಸಂಪನ್ಮೂಲಗಳನ್ನು ಹೆಚ್ಚಿಸಲು (Augment) ಸೂಕ್ತ ಕಾರ್ಯವಿಧಾನಗಳನ್ನು ಪ್ರಸ್ತಾಪಿಸಿದೆ.
- ವಿಪತ್ತು ಹಣಕಾಸು ಪರಾಮರ್ಶೆ (Disaster Finance Review): ವಿಪತ್ತು ನಿರ್ವಹಣಾ ಕಾಯಿದೆ (Disaster Management Act,) 2005 ರ ಅಡಿಯಲ್ಲಿ ಹಣಕಾಸು ಬಳಕೆಯ ರಚನೆಯನ್ನು ಮತ್ತು ವಿಧಾನವನ್ನು ಪರಿಶೀಲಿಸಿದೆ.
- ವ್ಯಾಪಕ ಸಮಾಲೋಚನೆಗಳು: ರಾಜ್ಯಗಳ ಹಣಕಾಸಿನ ಅಗತ್ಯಗಳು, ಅಭಿವೃದ್ಧಿಯ ತಾರತಮ್ಯಗಳು ಮತ್ತು ಪ್ರಾದೇಶಿಕ ಸಾಮರ್ಥ್ಯಗಳನ್ನು ನಿರ್ಣಯಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (UT) ಭೇಟಿ ನೀಡಿ ವ್ಯಾಪಕ ಸಮಾಲೋಚನೆ ನಡೆಸಿದೆ.
ಹಣಕಾಸು ಆಯೋಗದ ಕುರಿತು:
- ಹಣಕಾಸು ಆಯೋಗವು ಸಂವಿಧಾನದ ವಿಧಿ 280 ರ ಅಡಿಯಲ್ಲಿ ರಾಷ್ಟ್ರಪತಿಯವರಿಂದ ರಚಿಸಲ್ಪಡುವ ಒಂದು ಸಂವಿಧಾನಾತ್ಮಕ ಸಂಸ್ಥೆಯಾಗಿದೆ.
- ಒಂದು ಅರೆ-ನ್ಯಾಯಿಕ ಸಂಸ್ಥೆಯಾಗಿದ್ದು (Quasi-Judicial Body), ಪ್ರತಿ 5ನೇ ವರ್ಷಕ್ಕೆ ಅಥವಾ ರಾಷ್ಟ್ರಪತಿಯವರು ಅಗತ್ಯವೆಂದು ಪರಿಗಣಿಸಿದರೆ ಅದಕ್ಕಿಂತ ಮೊದಲೇ ರಚಿಸಲಾಗುತ್ತದೆ.
- ಒಬ್ಬರು ಅಧ್ಯಕ್ಷರು ಮತ್ತು ನಾಲ್ವರು ಇತರೆ ಸದಸ್ಯರನ್ನು ಒಳಗೊಂಡಿರುತ್ತದೆ ಹಾಗೂ ಇವರನ್ನು ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ. ಇವರು ಮರು-ನೇಮಕಾತಿಗೆ ಅರ್ಹರಾಗಿರುತ್ತಾರೆ.