ಕನ್ನಡ ಭಾಷೆಯ ಪ್ರಾಚೀನತೆ
ಕನ್ನಡ ಭಾಷೆಯ ಪ್ರಾಚೀನತೆ
ಕನ್ನಡವು ಒಂದು ಜೀವಂತ ಭಾಷೆ. ಇದು ತನ್ನ ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸದಲ್ಲಿ ಹಲವು ಹಂತಗಳಲ್ಲಿ ಬೆಳವಣಿಗೆಯನ್ನು ಕಂಡಿದೆ. ಕನ್ನಡ ಭಾಷೆಗೆ ಎಷ್ಟು ವರ್ಷಗಳ ಇತಿಹಾಸವಿದೆ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡು ಹಿಡಿಯಲು ಅನೇಕ ವಿದ್ವಾಂಸರು ಪ್ರಯತ್ನಿಸಿದ್ದಾರೆ. ಸದ್ಯಕ್ಕೆ ನಮಗೆ ಸಿಕ್ಕಿರುವ ಸಾಕ್ಷ್ಯಗಳ ಆಧಾರದಿಂದ ಕನ್ನಡವು ಕ್ರಿ.ಪೂ. ಮೂರನೇ ಶತಮಾನದಷ್ಟು ಹಳೆಯದು ಎಂದು ಹೇಳಬಹುದು. ಈ ಮಾತಿಗೆ ಬೆಂಬಲ ನೀಡಬಲ್ಲ ಸಾಕ್ಷ್ಯಾಧಾರಗಳು ಹೀಗಿವೆ:
1) ಮೌಲ್ಯ ಸಾಮ್ರಾಜ್ಯದ ಪ್ರಮುಖ ದೊರೆಯಾದ ಅಶೋಕನ ಕಾಲದ (ಕ್ರಿ.ಪೂ. 3ನೇ ಶತಮಾನ) ಹಲವು ಶಿಲಾಶಾಸನಗಳು ಕರ್ನಾಟಕದ ಹಲವೆಡೆಗಳಲ್ಲಿ ದೊರಕಿವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಇಂತಹ ಒಂದು ಶಾಸನದಲ್ಲಿ ‘ಇಸಿಲ’ ಎಂಬ ಸ್ಥಳದ ಪ್ರಸ್ತಾಪವಿದೆ. ಪ್ರೊ. ಡಿ.ಎಲ್. ನರಸಿಂಹಾಚಾರ್ ಅವರ ಪ್ರಕಾರ ಇಸಿಲ ಎಂಬ ಶಬ್ದವು ನಮಗೆ ದೊರಕಿರುವ ಅತ್ಯಂತ ಪ್ರಾಚೀನವಾದ ಕನ್ನಡ ಶಬ್ದವಾಗಿದ್ದು ‘ಕೋಟೆಯಿಂದ ಆವೃತವಾದ ನಗರ’ ಎಂಬ ಅರ್ಥವನ್ನು ಹೊಂದಿದೆ.
2) ‘ಕರ್ಣಾಟ’, ‘ಕರ್ಣಾಟಕ’ ಎಂಬ ಹೆಸರಿನಿಂದ ಕನ್ನಡನಾಡು ಪ್ರಾಚೀನ ಕಾಲದಲ್ಲಿ ಪ್ರಸಿದ್ಧವಾಗಿತ್ತು. ಕ್ರಿ.ಪೂ. 1 ರಿಂದ ಕ್ರಿ.ಶ. 1ರ ಮಧ್ಯಕಾಲದಲ್ಲಿ ರಚಿತವಾದುದೆಂದು ಹೇಳಲಾಗುವ ಶೂದ್ರಕನೆಂಬುವನು ಬರೆದ ಮೃಚ್ಛಕಟಿಕ ಎಂಬ ನಾಟಕದಲ್ಲಿ ‘ಕರ್ಣಾಟ’ವೆಂಬ ಶಬ್ದವಿದೆ. ಕ್ರಿ.ಪೂ. 3ರಿಂದ ಕ್ರಿ.ಶ. 3ರವರೆಗೆ ರಚಿತವಾಯಿತೆಂದು ಹೇಳಲ್ಪಡುವ ಮಹಾಭಾರತದ ಸಭಾಪರ್ವ ಮತ್ತು ಭೀಷ್ಮಪರ್ವಗಳಲ್ಲಿ ಕನ್ನಡಿಗರನ್ನು ‘ಕರ್ಣಾಟಕಾರ’ ಎಂದು ಕರೆದಿದೆ. ಸುಮಾರು ಕ್ರಿ.ಶ. 1ರಲ್ಲಿ ರಚಿತವಾಗಿರಬಹುದಾದ ಶ್ರೀಮದ್ರಾಮಾಯಣದಲ್ಲಿ ಮಹಿಷಕವೆಂಬ ಶಬ್ದವಿದ್ದು ಇದು ಮೈಸೂರನ್ನು ಸೂಚಿಸುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ವರಾಹಮಿಹಿರ (ಬೃಹತ್ಸಂಹಿತೆ, 6ನೇ ಶತ), ರಾಜಶೇಖರ (ಕಾವ್ಯ ಮೀಮಾಂಸಾ, 10ನೇ ಶತ), ಸೋಮದೇವ (ಕಥಾಸರಿತ್ಸಾಗರ, 11ನೇ ಶತ) ಮುಂತಾದ ಸಂಸ್ಕೃತ ಕವಿಗಳು ಕರ್ಣಾಟಕವನ್ನು ಹೆಸರಿಸಿದ್ದಾರೆ. ಶಿಲಪ್ಪದಿಗಾರಂ (ಕ್ರಿ.ಶ. 2ನೇ ಶತ) ಎಂಬ ಸುಪ್ರಸಿದ್ಧ ತಮಿಳು ಕಾವ್ಯದಲ್ಲಿ ಕನ್ನಡಿಗರನ್ನು ‘ಕರುನಾಡರ್’ ಎಂದು ಸಂಬೋಧಿಸಲಾಗಿದೆ.
3) ಕ್ರಿ.ಪೂ. 2ನೇ ಶತಮಾನದಿಂದ ಕ್ರಿ.ಶ. 1ನೇ ಶತಮಾನದವರೆಗೆ ಶಾತವಾಹನರು ಈಗಿನ ಕರ್ನಾಟಕದ ಬಹುಭಾಗವನ್ನು ಆಳುತ್ತಿದ್ದರು. ಅವರ ನಾಣ್ಯಗಳಲ್ಲಿ ‘ವಿಲಿವಾಯಕುರ’ ಎಂಬ ಶಬ್ದವಿದೆ. ಇದು ‘ವಿಲಿವಾಯ’ (ಕುದುರೆ) + ‘ಕುರ’ (ಪಟ್ಟಣ) ಎಂಬ ಎರಡು ಪದಗಳ ಜೋಡಣೆಯಾಗಿದ್ದು ಈ ಎರಡೂ ಶಬ್ದಗಳು ಕನ್ನಡದವು ಎಂದು ವಿದ್ವಾಂಸರು ಗುರುತಿಸಿದ್ದಾರೆ.
4) ಕ್ರಿ.ಶ. 1899ರಲ್ಲಿ ಈಜಿಪ್ಟ್ನ ಆಕ್ಸಿರಿಂಕಸ್ ಎಂಬಲ್ಲಿ ಒಂದು ಗ್ರೀಕ್ ನಾಟಕದ ಕಾಗದದ ಹಾಳೆಗಳ ಕಟ್ಟು ದೊರಕಿತು. ಇದರ ಕಾಲ ಸುಮಾರು ಕ್ರಿ.ಪೂ. 2ನೇ ಶತಮಾನ. ಈ ನಾಟಕವು ಗ್ರೀಸಿನಿಂದ ಹೊರಟ ಹಡಗೊಂದು ಭಾರತದ ಪಶ್ಚಿಮ ಕರಾವಳಿಯನ್ನು ತಲುಪಿದ ಕಥೆಯನ್ನು ಒಳಗೊಂಡಿದೆ. ಇದರಲ್ಲಿ ಗ್ರೀಕ್ ಭಾಷೆಯಲ್ಲಿ ಇಲ್ಲದ ‘ಮಿಂದೆ’, ‘ಕೂಸೆ’ ಮುಂತಾದ ಶಬ್ದಗಳಿವೆ. ರಾಷ್ಟ್ರಕವಿ ಗೋವಿಂದ ಪೈರವರು ಈ ಶಬ್ದಗಳು ಕನ್ನಡ ಭಾಷೆಯವು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮತ್ತೆ ಕೆಲವರ ಪ್ರಕಾರ ಇದು ತಮಿಳು, ತುಳು ಅಥವಾ ಕೊಂಕಣಿಯ ಶಬ್ದಗಳು.
5) ಕ್ರಿ.ಶ. 1ನೇ ಶತಮಾನದಲ್ಲಿ ಜೀವಿಸಿದ್ದ ಹಾಲ ಎಂಬ ಶಾತವಾಹನರ ರಾಜನು ‘ಗಾಥಾಸಪ್ತಶತಿ’ ಎಂಬ ಪ್ರಾಕೃತ ಭಾಷೆಯ ಗ್ರಂಥವನ್ನು ಬರೆದಿದ್ದಾನೆ. ಇದರಲ್ಲಿ ಬರುವ ಅತ್ತಾ (ಅತ್ತೆ), ತುಪ್ಪ (ಧೃತ), ಪೊಟ್ಟ (ಹೊಟ್ಟೆ), ಫಲಹೀ (ಹತ್ತಿ), ಮುಂತಾದ ಶಬ್ದಗಳು ಕನ್ನಡದವು ಎಂದು ಗೋವಿಂದ ಪೈರವರು ಅಭಿಪ್ರಾಯಪಟ್ಟಿದ್ದಾರೆ.
6) ಕ್ರಿ.ಶ. 140ರಲ್ಲಿ ಇಟಲಿಯಲ್ಲಿ ಬದುಕಿದ್ದ ಟಾಲಮಿ ಎಂಬ ವಿದ್ವಾಂಸನು ‘ಭೂಗೋಳ ಶಾಸ್ತ್ರ’ವನ್ನು ರಚಿಸಿದ್ದಾನೆ. ಆತ ಸ್ವತಃ ಕಣ್ಣಾರೆ ಕಂಡಿರದಿದ್ದರೂ ಪ್ರವಾಸಿಗಳ ಬರಹ ಹಾಗು ಹೇಳಿಕೆಗಳ ಆಧಾರದ ಮೇಲೆ, ಬಹುಶಃ ಭೀಮಾನದಿಯಿಂದ ಬನವಾಸಿಯವರೆಗಿನ ಪ್ರದೇಶದ ನಡುವೆಯಿದ್ದ ಹತ್ತು ಸ್ಥಳಗಳನ್ನು ಹೆಸರಿಸುತ್ತಾನೆ. ಈ ಹೆಸರುಗಳನ್ನು ಎಂ. ಗೋವಿಂದ ಪೈ ಇಂದಿನ ಕರ್ನಾಟಕದ ಸ್ಥಳಗಳಾಗಿ ಗುರುತಿಸಿದ್ದಾರೆ. ಅವು ಹೀಗಿವೆ:
Nagarouris (3): Tabaso (3); Inde (໑໐໖); Tiri Pangalida (ಗದಾಹಿಂಗಲಜ): Hippo Koura (ಹೂವಿನ ಹಿಪ್ಪರಿಗೆ): Soubouttou (ដ): Sirimalaga (5); Kalligeris (5); Modugoulla (); Petirgala (5) ಮುಂತಾದ ಕರ್ನಾಟಕದ ಅನೇಕ ಸ್ಥಳಗಳನ್ನು ಹೆಸರಿಸಿದ್ದಾನೆ. ಇವುಗಳಲ್ಲಿ ಬಹುತೇಕ ಎಲ್ಲ ಊರುಗಳೂ ಇಂದಿಗೂ ಅಸ್ತಿತ್ವದಲ್ಲಿ ಇವೆ ಎನ್ನುವುದು ಗಮನಾರ್ಹ.
7) ಸುಮಾರು ಕ್ರಿ.ಶ. 450ರಲ್ಲಿ ರಚಿತವಾಗಿರುವ ಹಲ್ಟಿಡಿ ಶಾಸನವೇ ಸದ್ಯಕ್ಕೆ ನಮಗೆ ಸಿಕ್ಕಿರುವ ಕನ್ನಡದ ಅತ್ಯಂತ ಪ್ರಾಚೀನ ಶಾಸನವಾಗಿದೆ. ಹಾಗಾಗಿ ಸುಮಾರು ಮೂರು-ನಾಲ್ಕನೇ ಶತಮಾನದ ವೇಳೆಗೆ ಕನ್ನಡ ಭಾಷೆಯು ಸಾಕಷ್ಟು ಚೆನ್ನಾಗಿ ಬೆಳೆದಿತ್ತು ಎಂದು ಹೇಳಬಹುದು. ಏಕೆಂದರೆ ಯಾವುದೇ ಭಾಷೆಯು ವ್ಯಾಕರಣ ಬದ್ಧವಾಗಿ ಲಿಪಿಯ ರೂಪದಲ್ಲಿ ಕಾಣಿಸಿಕೊಳ್ಳಲು ಕನಿಷ್ಠ 200 ವರ್ಷಗಳಷ್ಟು ಹಳೆಯದಾಗಿರಬೇಕು ಎನ್ನುವುದು ವಿದ್ವಾಂಸರ ಅಭಿಪ್ರಾಯ.
8) ಕ್ರಿ.ಶ. 9ನೇ ಶತಮಾನದಲ್ಲಿ ರಚಿತವಾದ ಕವಿರಾಜಮಾರ್ಗವು ಕನ್ನಡದ ಆದ್ಯ ಕೃತಿಗಳಲ್ಲಿ ಒಂದು. ಇದರಲ್ಲಿ ಲೇಖಕನಾದ ಶ್ರೀವಿಜಯನು ತನ್ನ ಹಿಂದಿನ ಕವಿಗಳಾದ ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತ, ಅಸಗ, ಗುಣವರ್ಮ, ಗುಣನಂದಿ ಮುಂತಾದವರನ್ನು ಹೆಸರಿಸಿದ್ದಾನೆ. ಇವರಲ್ಲಿ ಕೆಲವರಾದರೂ ಕನ್ನಡದಲ್ಲಿ ಕೃತಿಗಳನ್ನು ರಚಿಸಿರುವ ಸಾಧ್ಯತೆ ಇದೆ- ತನ್ನ ಕಾಲಕ್ಕಿಂತಲೂ ಹಳೆಯದಾದ ಕನ್ನಡವೊಂದನ್ನು ಶ್ರೀವಿಜಯ ಪ್ರಸ್ತಾಪಿಸಿದ್ದಾನೆ. ಎಂದರೆ ಕನ್ನಡ 9ನೇ ಶತಮಾನಕ್ಕಿಂತ ಸಾಕಷ್ಟು ಹಳೆಯದಿರಬೇಕು. ಈ ಎಲ್ಲ ಆಧಾರಗಳಿಂದ ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳಿಗಿಂತಲು ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿದೆ ಎಂಬುದು ಸಾಬೀತಾಗುತ್ತದೆ.
ಕನ್ನಡ ಭಾಷೆಯ ಪ್ರಾಚೀನತೆಯನ್ನು ಈ ಕೆಳಗಿನಂತೆ ವಿಂಗಡಿಸಬಹುದು:
ಪ್ರಾಚೀನ ಕನ್ನಡ (450-1200 ಕ್ರಿ.ಶ.):
ಈ ಅವಧಿಯಲ್ಲಿ ಕನ್ನಡ ಭಾಷೆ ಶಾಸನಗಳು ಮತ್ತು ಸಾಹಿತ್ಯದಲ್ಲಿ ಬಳಕೆಯಾಯಿತು. ಹಲ್ಮಿಡಿ ಶಾಸನ, ಬಾದಾಮಿ ಶಾಸನಗಳು, ಮತ್ತು ಕವಿರಾಜಮಾರ್ಗ ಈ ಅವಧಿಗೆ ಸೇರಿವೆ.
ನಡುಗನ್ನಡ (1200-1700 ಕ್ರಿ.ಶ.):
ಈ ಅವಧಿಯಲ್ಲಿ ಸಾಹಿತ್ಯದಲ್ಲಿ ಅನೇಕ ಬದಲಾವಣೆಗಳಾದವು. ಈ ಅವಧಿಯಲ್ಲಿ ವಚನ ಸಾಹಿತ್ಯ, ಕುಮಾರವ್ಯಾಸನ ಭಾರತ, ಮತ್ತು ಇತರ ಮಹತ್ವದ ಕೃತಿಗಳು ರಚಿತವಾದವು.
ಹೊಸಗನ್ನಡ (1700 ರಿಂದೀಚೆಗೆ):
ಈ ಅವಧಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯ ಬೆಳೆಯಿತು. ಈ ಅವಧಿಯಲ್ಲಿ ಕಾದಂಬರಿ, ಸಣ್ಣಕಥೆ, ನಾಟಕ, ಮತ್ತು ಇತರ ಸಾಹಿತ್ಯ ಪ್ರಕಾರಗಳು ಅಭಿವೃದ್ಧಿಯಾದವು.
ಕನ್ನಡ ಭಾಷೆಯ ಪ್ರಾಚೀನತೆಯನ್ನು ಅಧ್ಯಯನ ಮಾಡಲು ಹಲವಾರು ಆಕರಗಳಿವೆ:
ಶಾಸನಗಳು:
ತಾಳಗುಂದ ಶಾಸನ, ಹಲ್ಮಿಡಿ ಶಾಸನ, ಬಾದಾಮಿ ಶಾಸನಗಳು ಕನ್ನಡ ಭಾಷೆಯ ಪ್ರಾಚೀನತೆಯನ್ನು ತಿಳಿಸುತ್ತವೆ.
ಸಾಹಿತ್ಯ ಕೃತಿಗಳು:
ಕವಿರಾಜಮಾರ್ಗ, ವಚನ ಸಾಹಿತ್ಯ, ಕುಮಾರವ್ಯಾಸನ ಭಾರತ, ಮತ್ತು ಇತರ ಕೃತಿಗಳು ಕನ್ನಡ ಭಾಷೆಯ ಬೆಳವಣಿಗೆಯನ್ನು ತೋರಿಸುತ್ತವೆ.
ವ್ಯಾಕರಣ ಗ್ರಂಥಗಳು:
ಶಬ್ದಮಣಿದರ್ಪಣ ಮತ್ತು ಇತರ ವ್ಯಾಕರಣ ಗ್ರಂಥಗಳು ಕನ್ನಡ ಭಾಷೆಯ ರಚನೆಯನ್ನು ವಿವರಿಸುತ್ತವೆ.
ಕನ್ನಡ ಭಾಷೆ ದ್ರಾವಿಡ ಭಾಷಾ ಕುಟುಂಬದ ಒಂದು ಪ್ರಮುಖ ಭಾಷೆಯಾಗಿದೆ ಮತ್ತು ಇದು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ.
