Published on: July 15, 2022
ವಿಶ್ವ ಜನಸಂಖ್ಯಾ ದಿನ
ವಿಶ್ವ ಜನಸಂಖ್ಯಾ ದಿನ
ಸುದ್ದಿಯಲ್ಲಿ ಏಕಿದೆ?
ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.
- ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
- ಮೂರು ದಶಕಗಳಿಂದ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ವಿಶ್ವ ಜನಸಂಖ್ಯಾ ದಿನವನ್ನು ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ವಿಶ್ವ ಜನಸಂಖ್ಯಾ ದಿನದ ಥೀಮ್ 2022
- 2022 ರ ವಿಶ್ವ ಜನಸಂಖ್ಯಾ ದಿನದ ವಿಷಯ ‘8 ಶತಕೋಟಿ ಪ್ರಪಂಚ: ಭವಿಷ್ಯವನ್ನು ಯೋಚಿಸಿ ಜನಸಂಖ್ಯೆ ನಿಯಂತ್ರಣಕ್ಕೆ ಬೇಕಾದ ಅಗತ್ಯ ಆಯ್ಕೆಗಳನ್ನು ಖಾತರಿಪಡಿಸುವುದು“.
- ಥೀಮ್ ಪ್ರಕಾರ, ಇಂದು ಭೂಮಿಯ ಮೇಲೆ ಸುಮಾರು 8 ಶತಕೋಟಿ ಜನರು ವಾಸಿಸುತ್ತಿದ್ದಾರೆ ಆದರೆ ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳಿಲ್ಲ. ಅನೇಕ ಜನರು ಇನ್ನೂ ಸಹಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ದೃಷ್ಟಿಕೋನ, ಲಿಂಗ, ಜನಾಂಗೀಯತೆ, ವರ್ಗ, ಧರ್ಮ, ಅಂಗವೈಕಲ್ಯ ಮತ್ತು ದೇಶದ ಮೂಲದ ಆಧಾರದ ಮೇಲೆ ಕಿರುಕುಳ, ತಾರತಮ್ಯ ಮತ್ತು ಹಿಂಸೆ ಹೀಗೆ ಹಲವಾರು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ.
- ನಾವು ಜನಸಂಖ್ಯೆಯನ್ನು ಗುಣಿಸುವುದನ್ನು ಮುಂದುವರಿಸಿದಂತೆ, ಅಧಿಕ ಜನಸಂಖ್ಯೆಯ ಸಮಸ್ಯೆ ಎಂದಿಗಿಂತಲೂ ಹೆಚ್ಚು ಗಂಭೀರವಾಗಿರುತ್ತದೆ. ಉದಯೋನ್ಮುಖ ರಾಷ್ಟ್ರಗಳು ಈಗ ಲಿಂಗ ಅಸಮಾನತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಸಮಸ್ಯೆಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ.
ಇತಿಹಾಸ
- ಜುಲೈ 11 ರಂದು ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. 1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿಯನ್ನು ತಲುಪಿತ್ತು. ಇದರ ಜನಸಂಖ್ಯಾ ಹೆಚ್ಚಳದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು, ತನ್ನ ಅಂಗ ಅಂಸ್ಥೆಯಾದ ‘ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮಂಡಳಿ’ಯ ಮೂಲಕ 1989 ಜುಲೈ 11 ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು.
ವಿಶ್ವ ಜನಸಂಖ್ಯಾ ದಿನ ಆಚರಣೆಯ ಉದ್ದೇಶ
- ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಇದರಿಂದಾಗಿ ಜನಸಂಖ್ಯಾ ಬೆಳವಣಿಗೆಯಲ್ಲಿ ಕುಸಿತ ಕಂಡುಬಂದಿದೆ.
ದಿನದ ಮಹತ್ವ
- ವಿಶ್ವ ಜನಸಂಖ್ಯಾ ದಿನವು ಮಹತ್ವದ್ದಾಗಿದೆ, ಏಕೆಂದರೆ ಇದು ಅಧಿಕ ಜನಸಂಖ್ಯೆಯ ಸಮಸ್ಯೆಗಳೊಂದಿಗೆ ವ್ಯವಹರಿಸುತ್ತದೆ ಮತ್ತು ಅಭಿವೃದ್ಧಿ ಮತ್ತು ಪರಿಸರದ ಮೇಲೆ ಅಧಿಕ ಜನಸಂಖ್ಯೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದು ಮಕ್ಕಳನ್ನು ಹೆರುವ ಮಹಿಳೆಯರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ವ್ಯವಹರಿಸುತ್ತದೆ ಮತ್ತು ಕುಟುಂಬ ಯೋಜನೆ, ಬಡತನ, ಲಿಂಗ ಸಮಾನತೆ, ಮಾನವ ಹಕ್ಕುಗಳು ಮತ್ತು ತಾಯಿಯ ಆರೋಗ್ಯದ ಮಹತ್ವವನ್ನು ಎತ್ತಿ ತೋರಿಸುತ್ತದೆ.
ವಿಶ್ವದ ಜನಸಂಖ್ಯೆ
- ಜಗತ್ತಿನ ಜನಸಂಖ್ಯೆ 2019ರಲ್ಲಿ 772 ಕೋಟಿಗೆ ಬಂದು ತಲುಪಿದೆ. ಚೀನಾ 142 ಕೋಟಿ ಜನಸಂಖ್ಯೆ ಮೂಲಕ ಮೊದಲ ಸ್ಥಾನದಲ್ಲಿದ್ದರೆ ಭಾರತ 136.8 ಕೋಟಿ ಜನಸಂಖ್ಯೆ ಹೊಂದುವ ಮೂಲಕ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಇದು ವಿಶ್ವಕ್ಕೆ ಹೋಲಿಸಿದರೆ ಶೇ. 19 ಮತ್ತು ಶೇ. 18ರಷ್ಟು. ಅದರ ನಂತರದ ಸ್ಥಾನದಲ್ಲಿ ಅಮೆರಿಕ ಇದ್ದು 32 ಕೋಟಿ ಮತ್ತು ಇಂಡೋನೇಷ್ಯಾ 27 ಕೋಟಿ ಜನಸಂಖ್ಯೆ ಹೊಂದಿವೆ.
ಜನಸಂಖ್ಯೆ ಏರಿಕೆಗೆ ಕಾರಣ
- ಲಿಂಗ ಅಸಮಾನತೆ.
- ಬಾಲ್ಯವಿವಾಹ
- ಆರೋಗ್ಯದ ಹಕ್ಕು.
- ಮಗುವಿನ ಆರೋಗ್ಯದ ಮೇಲಿನ ಪರಿಣಾಮಗಳು.
- ಕುಟುಂಬ ಯೋಜನೆ ಇಲ್ಲದೇ ಇರೋದು.
- ಮಾನವ ಹಕ್ಕುಗಳು.
- ಇದಲ್ಲದೆ ಜನರಲ್ಲಿ ಲೈಂಗಿಕತೆ, ಸಂತಾನೋತ್ಪತ್ತಿ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅನಿರ್ವಾತೆ ಇದೆ.
2027ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತ ನಂಬರ್ ಒನ್
- ಭಾರತವು 2027ರ ವೇಳೆಗೆ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ನಂಬರ್ ಒನ್ ಸ್ಥಾನಕ್ಕೆ ಏರಲಿದೆ. ಇದರ ಜೊತೆಗೆ 2050ರ ಅವಧಿಯಲ್ಲಿ ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ 27 ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದೆ.
-
ಪ್ರಸಕ್ತ ಶತಮಾನದ ಅಂತ್ಯಕ್ಕೆ ಅಂದರೆ 2100ನೇ ಇಸವಿಗೆ ವಿಶ್ವದ ಜನಸಂಖ್ಯೆ 1100 ಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧ್ಯಯನ ವರದಿ ಹೇಳಿದೆ. 2050ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಆಗಲಿರುವ ಒಟ್ಟು ಏರಿಕೆಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಪಾಲು ಕೇವಲ ಒಂಬತ್ತು ದೇಶಗಳಲ್ಲಿ ಇರಲಿದೆ. ಅವುಗಳೆಂದರೆ ಭಾರತ, ನೈಜೇರಿಯಾ, ಪಾಕಿಸ್ತಾನ, ಕಾಂಗೋ, ಇಥಿಯೋಪಿಯಾ, ತಾಂಜೇನಿಯಾ, ಇಂಡೋನೇಷ್ಯಾ, ಈಜಿಪ್ತ್ ಮತ್ತು ಅಮೆರಿಕ.