Published on: December 1, 2022
ಸುದ್ಧಿ ಸಮಾಚಾರ 01 ಡಿಸೆಂಬರ್ 2022
ಸುದ್ಧಿ ಸಮಾಚಾರ 01 ಡಿಸೆಂಬರ್ 2022
-
ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ಮಾರಕಗಳ ಸಂಪೂರ್ಣ ಡೇಟಾಬೇಸ್ ಅನ್ನು ರಚಿಸುವ ಗುರಿಯೊಂದಿಗೆ, ಮೊದಲ ಬಾರಿಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಬೆಂಗಳೂರು ವೃತ್ತ) ಕರ್ನಾಟಕದ 17 ಜಿಲ್ಲೆಗಳಾದ್ಯಂತ ಎಲ್ಲಾ 129 ಸಂರಕ್ಷಿತ ಸ್ಮಾರಕಗಳಿಗೆ “ಸ್ಮಾರಕ ಆರೋಗ್ಯ ಕಾರ್ಡ್”ನ್ನು ಸಿದ್ಧಪಡಿಸುತ್ತಿದೆ.
-
ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾದ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ಅಧಿಕೃತವಾಗಿ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಸೇರಿದಂತೆ ಜಿ20 ಲಾಂಛನವನ್ನು ಹೊಂದಿರುವಂತೆ ದೇಶದ 100 ಸ್ಮಾರಕಗಳು ಡಿಸೆಂಬರ್ 1 ರಿಂದ 7 ರವರೆಗೆ ದೀಪಾಲಂಕಾರದಿಂದ ಝಗಮಗಿಸಲಿವೆ. ಫೆಬ್ರುವರಿ 2023 ರಲ್ಲಿ ನಡೆಯುವ ಜಿ 20 ಹಣಕಾಸು ಸಚಿವರ ಶೃಂಗಸಭೆಯ ಆತಿಥ್ಯವನ್ನು ರಾಜಧಾನಿ ಬೆಂಗಳೂರು ವಹಿಸಲಿದೆ. ಜಿ 20 ರಾಷ್ಟ್ರಗಳ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
-
ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಸಂಗೀತ, ನಾಟಕ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿರುವ ಕರ್ನಾಟಕದ ಸಾಧಕರು ಸೇರಿದಂತೆ ವಿವಿಧ ರಾಜ್ಯಗಳ 86 ಮಂದಿಗೆ ‘ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ’ಯನ್ನು ಘೋಷಿಸಿದೆ.
-
ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಇಸ್ರೋ ಆವರಣದಲ್ಲಿ ದೇಶದ ಮೊದಲ ಖಾಸಗಿ ಉಡಾವಣಾ ವಾಹಕ ಮತ್ತು ಯೋಜನಾ ನಿರ್ವಹಣೆ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಉಡಾವಣಾ ವಾಹಕವನ್ನು ಚೆನ್ನೈ ಮೂಲದ ಸ್ಪೇ ಸ್ ಟೆಕ್ ಸ್ಟಾರ್ಟ್ಅಪ್ ಅಗ್ನಿಕುಲ್ ಕಾಸ್ಮೋಸ್ ವಿನ್ಯಾಸಗೊಳಿಸಿದೆ. ಉಡಾವಣಾ ವಾಹಕವು ಅಗ್ನಿಕುಲ್ ವಾಹಕ(ಎಎಲ್ಪಿ) ಮತ್ತು ಅಗ್ನಿಕುಲ್ ನಿರ್ವಹಣಾ ಕೇಂದ್ರ(ಎಎಂಸಿಸಿ)ವನ್ನು ಒಳಗೊಂಡಿದೆ.ಈ ಉಡಾವಣಾ ವಾಹಕವನ್ನು ಇಸ್ರೋ ಮತ್ತು ಇನ್-ಸ್ಪೇಸ್ ನೆರವಿನಲ್ಲಿ ಕಾರ್ಯಚಾಲನೆ ಮಾಡಲಾಗುತ್ತದೆ. ಮೊದಲ ಉಡಾವಣೆಯಲ್ಲಿ, ಎರಡು ಹಂತದ ಉಡಾವಣಾ ವಾಹನ, “ಅಗ್ನಿಬಾನ್’ 100 ಕೆ.ಜಿ.ಯಷ್ಟು ಪೇಲೋಡ್ ಅನ್ನು ಸುಮಾರು 700 ಕಿ.ಮೀ. ಎತ್ತರಕ್ಕೆ ಸಾಗಿಸಲು ಉದ್ದೇಶಿಸಿದೆ.
-
ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಗೆ ಹೊಸ ಹೆಸರನ್ನು ನೀಡಿದ್ದು, ಇನ್ನು ಮುಂದೆ ಆ ಹೆಸರಿನಿಂದ ರೋಗವನ್ನು ಉಲ್ಲೇಖಿಸುವಂತಿಲ್ಲ ಎಂದು ಹೇಳಿದೆ. ಮಂಕಿಪಾಕ್ಸ್ ಎಂಬುದು ತಾರತಮ್ಯ ಮತ್ತು ಜನಾಂಗೀಯ ಅಂಶವಾಗುತ್ತದೆ ಎಂಬ ಅಭಿಪ್ರಾಯ ಡಬ್ಲ್ಯುಹೆಚ್ಒ ಹೊಂದಿದ್ದು, ಮಂಕಿಪಾಕ್ಸ್ ರೋಗಕ್ಕೆ ಎಂ-ಪಾಕ್ಸ್ ಎಂಬ ಹೊಸ ಹೆಸರು ನೀಡಿದೆ.