Published on: December 12, 2022

ಯಶಸ್ವಿನಿ ಯೋಜನೆ

ಯಶಸ್ವಿನಿ ಯೋಜನೆ

ಸುದ್ದಿಯಲ್ಲಿ ಏಕಿದೆ? ರಾಜ್ಯ ಸರಕಾರ 2022-23ನೇ ಸಾಲಿನ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆ ಪರಿಷ್ಕರಿಸಿ ಮರು ಜಾರಿ ಮಾಡಿ ಆದೇಶಿಸಿದ್ದು, ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಆರಂಭಗೊಂಡಿದೆ.

ಮುಖ್ಯಾಂಶಗಳು

ಗ್ರಾಮೀಣ ಸಹಕಾರ ಸಂಘಗಳ ಸ್ವಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬಕ್ಕೆ ವಾರ್ಷಿಕ 500 ರೂ. ಶುಲ್ಕ ಮತ್ತು ನಗರ ಕೇಂದ್ರೀತ ಸಹಕಾರಿ ಸಂಘದ ಗ್ರಾಮೀಣ ಭಾಗದ ಶಾಖಾ ಸದಸ್ಯರಿಗೆ 500 ರೂ. ಬದಲು 1000 ರೂ. ಶುಲ್ಕವನ್ನು ವಿಧಿಸಲಾಗಿದೆ.

ಹೊಸ ಯೋಜನೆಯ ವಿವರ :

  • ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್‌ ರಾಜ್ಯದ ಸಹಕಾರಿಗಳು ಮತ್ತು ಕುಟುಂಬದವರಿಗೆ ಈ ಯೋಜನೆ ಪರಿಚಯಿಸಿದೆ.
  • ಸಹಕಾರಿಗಳ ಪಾಲಿನ ಸಂಜೀವಿನಿ ಎಂದೇ ಕರೆಯಲ್ಪಡುವ ಈ ಯೋಜನೆಗೆ ಸಹಕಾರ ಸಂಘಗಳ ಸ್ವಸಹಾಯ ಗುಂಪುಗಳ ಸದಸ್ಯರೂ ಸೇರಿದಂತೆ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು, ಸಹಕಾರಿ ನೇಕಾರರಿಗೂ ಈ ಸೌಲಭ್ಯ ನೀಡಲಾಗಿದೆ.
  • ಈ ಹಿಂದಿನ ಯೋಜನೆಯಲ್ಲಿ ಗ್ರಾಮೀಣ ಭಾಗದಲ್ಲಿ ಒಬ್ಬ ಸದಸ್ಯನಿಗೆ 250 ರೂ., ನಗರ ಭಾಗದಲ್ಲಿ ಒಬ್ಬ ಸದಸ್ಯನಿಗೆ 750 ರೂ. ಪಾವತಿ ಮಾಡಬೇಕಿತ್ತು.
  • ಆದರೆ ಈಗ 4 ಮಂದಿಯ ಕುಟುಂಬಕ್ಕೆ 1 ಸಾವಿರ ರೂ. ಮತ್ತು 500 ರೂ. ಪ್ಯಾಕೇಜ್‌ ನೀಡಲಾಗಿದೆ. ಈ ಯಶಸ್ವಿನಿ ವಿಮಾ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೇರಬೇಕಾದರೆ ಆಯುಷ್ಮಾನ್‌ ಕಾರ್ಡ್‌ನಂತೆ ಸರಕಾರಿ ಆಸ್ಪತ್ರೆಯ ಶಿಫಾರಸ್ಸು ಬೇಕಾಗಿಲ್ಲ.
  • ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.
    ಪರಿಷ್ಕೃತ ಯಶಸ್ವಿನಿ ವಿಮಾ ಯೋಜನೆ ಸದಸ್ಯತ್ವ ನೋಂದಣಿಗೆ ನ.1 ರಿಂದ ಡಿ.31ರವರೆಗೆ ಅವಕಾಶ ನೀಡಲಾಗಿದೆ.
  • ಈ ಯೋಜನೆಗೆ ಎಪಿಎಲ್‌/ಬಿಪಿಎಲ್‌ ಎಂಬ ಯಾವುದೇ ವ್ಯತ್ಯಾಸ, ವಯೋಮಿತಿ ನಿರ್ಬಂಧವಿಲ್ಲ.
  • 2023ರ ಜ.1 ರಿಂದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೌಲಭ್ಯ ಆರಂಭವಾಗಲಿದೆ. ಎಸ್‌ಸಿ/ಎಸ್‌ಟಿ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆ ಸರಕಾರವೇ ಭರಿಸಲಿದೆ.

ಎಲ್ಲಿ ಚಿಕಿತ್ಸೆ? 

  • ಈ ಯೋಜನೆಯಲ್ಲಿ ಸದಸ್ಯರಾದವರಿಗೆ ಸಂಜೀವಿನಿ ನೆಟ್‌ವರ್ಕ್ ಇರುವಂತಹ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ 2023ರ ಜ.1 ರಿಂದ ಚಿಕಿತ್ಸೆ ಪಡೆಯಲು ಅವಕಾಶವಿದೆ. ಗ್ರಾಮೀಣ ಭಾಗದ ಚಟುವಟಿಕೆಗಳಿಗೆ ಒತ್ತು ನೀಡಿ ಆರಂಭಿಸಲಾದ ಈ ಯೋಜನೆ ಈಗ ನಗರಕ್ಕೂ ವಿಸ್ತರಣೆಯಾಗಿದೆ.

ಅನೂಕೂಲಗಳು

  • ಗ್ರಾಮೀಣ ಸಹಕಾರ ಸಂಘಗಳ ಸ್ವಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬವೊಂದಕ್ಕೆ ವಾರ್ಷಿಕ 500 ರೂ.ಗಳ ಮೊತ್ತ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ. 20ರಷ್ಟು ಹೆಚ್ಚುವರಿಯಾಗಿ ಪ್ರತಿ ಸದಸ್ಯರಿಗೆ 100 ರೂ. ಪಾವತಿಸಬೇಕಾಗಿದೆ.
  • ಇದೇ ರೀತಿ ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ 1 ಸಾವಿರ ರೂ.ಗಳ ವಂತಿಗೆ ಹಾಗೂ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ.20ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ 200 ರೂ. ಪಾವತಿಸತಕ್ಕದ್ದು.

ಅನಾನುಕೂಲಗಳು

  • ಯಶಸ್ವಿನಿ ಈ ಯೋಜನೆಯ ಪ್ರಕಾರ ಯಾವುದೇ ಸಹಕಾರಿ ಸಂಘದ ಪ್ರಧಾನ ಕಚೇರಿ ಗ್ರಾಮೀಣ ಭಾಗದಲ್ಲಿದ್ದು, ಎಷ್ಟೇ ಶಾಖೆಗಳು ನಗರ ಭಾಗದಲ್ಲಿದ್ದರೂ ಆ ಸಂಘದ ಸದಸ್ಯರು ವಾರ್ಷಿಕ 500 ರೂ. ಕಟ್ಟಿದರೆ ಸಾಕು. ಅದೇ ಪ್ರಧಾನ ಕಚೇರಿ ನಗರ ಭಾಗದಲ್ಲಿದ್ದು, ಗ್ರಾಮೀಣ ಭಾಗದಲ್ಲಿ ಎಷ್ಟೇ ಶಾಖೆಗಳಿದ್ದರೂ ಸಂಘದ ಸದಸ್ಯರು ವಾರ್ಷಿಕ 1 ಸಾವಿರ ರೂ. ಕಟ್ಟಲೇಬೇಕಾಗಿದೆ.
  • ರಾಜ್ಯದ ನಗರ ಭಾಗದಲ್ಲಿ ಕೇಂದ್ರ ಕಚೇರಿ ಹೊಂದಿರುವ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿ ಹಾಗೂ ಹಾಲು ಉತ್ಪಾದಕ ಸಹಕಾರಿ ಸಂಘಗಳ ಸದಸ್ಯರಿಗೆ 500 ರೂ. ಕಟ್ಟಲು ಅವಕಾಶ ನೀಡಲಾಗಿದೆ.

2018 ರಲ್ಲಿ ರದ್ದುಗೊಳಿಸಲಾಗಿತ್ತು

  • ಸಹಕಾರಿ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡಲು 2003 ರಲ್ಲಿ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿತ್ತು. ಆದರೆ 2018 ರಲ್ಲಿ ರಾಜ್ಯದ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡಲು ಆರೋಗ್ಯ ಕರ್ನಾಟಕ ಯೋಜನೆ ಅನು ಅನುಷ್ಠಾನಗೊಳಿಸಿದ ಸರ್ಕಾರ 2018ರ ಮೇ 31 ರಂದು ಯಶಸ್ವಿನಿ ಆರೋಗ್ಯ ಯೋಜನೆಯನ್ನು ರದ್ದುಗೊಳಿಸಲಾಗಿತ್ತು. ಇದೇ ಯೋಜನೆಗೆ ಈಗ ಮರು ಚಾಲನೆ ನೀಡಲಾಗುತ್ತಿದೆ.
  • ಹಿಂದೆ ಯಶಸ್ವಿನಿ ಯೋಜನೆಯಡಿಯಲ್ಲಿ ಸಹಕಾರ ಗ್ರಾಮೀಣ ಸದಸ್ಯರು ವಾರ್ಷಿಕವಾಗಿ 300 ರೂಪಾಯಿ ಹಾಗೂ ನಗರ ಪ್ರದೇಶದವರು 710 ರೂಪಾಯಿ ವಂತಿಗೆ ಪಾವತಿಸಬೇಕಿತ್ತು. ಈ ವತಿಂಗೆಯಲ್ಲಿ ಎಸ್.ಸಿ ಎಸ್.ಟಿ ಸಮುದಾಯಗಳಿಗೆ 250 ರೂಪಾಯಿ ಹಾಗೂ ಇತರೆ ವರ್ಗಗಳಿಗೆ 50 ರೂಪಾಯಿಗಳನ್ನು ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ನೋಂದಾಯಿತ ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿತ್ತು.

ಏನಿದು ಯಶಸ್ವಿನಿ ಯೋಜನೆ?

  • ಗ್ರಾಮೀಣ ಸಹಕಾರಿಗಳ ಆರೋಗ್ಯ ಸುರಕ್ಷತಾ ಯೋಜನೆ ಯಾವುದೇ ಸಹಕಾರ ಸಂಘದ ಸದಸ್ಯರು ಕನಿಷ್ಠ ಮೊತ್ತದ ಪ್ರಿಮಿಯಂ ಪಾವತಿಸಿ ತಮ್ಮ ಕುಟುಂಬದವರ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಆಗ ಹಲವು ವಿಧದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.

ಫಲಾನುಭವಿಯಾಗಲು ಏನು ಅರ್ಹತೆ?

  • ಯಶಸ್ವಿನಿ ಯೋಜನೆಯ ಫಲಾನುಭವಿಯಾಗಲು ಕನಿಷ್ಠ 3 ತಿಂಗಳು ಮುಂಚಿತವಾಗಿ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಗ್ರಾಮೀಣ ಸಹಕಾರ ಸಂಘ/ಬ್ಯಾಂಕ್ ಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು.