Published on: November 1, 2023

ಚುಟುಕು ಸಮಾಚಾರ:31 ಅಕ್ಟೋಬರ್ 2023

ಚುಟುಕು ಸಮಾಚಾರ:31 ಅಕ್ಟೋಬರ್ 2023

  • ಕರ್ನಾಟಕದಲ್ಲಿ ಕೊರೊನಾ ನಂತರ ಹೃದಯಘಾತದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಅದರಲ್ಲೂ 40 ವರ್ಷ ವಯಸ್ಸಿನೊಳಗಿನ ಹದಿ ಹರೆಯದವರಲ್ಲಿಯೂ ಈ ಅನಾರೋಗ್ಯ ಕಂಡು ಬರುತ್ತಿದೆ. ಈ ನಿಮಿತ್ತ ಕರ್ನಾಟಕ ರಾಜ್ಯ ಸರ್ಕಾರ ಜನರ ಜೀವ ಉಳಿಸಲು ‘ಹೃದಯಜ್ಯೋತಿ’ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ. ಈ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ನವರು 2023ರ ಬಜೆಟ್ ನಲ್ಲಿ‌‌ ಘೋಷಣೆ ಮಾಡಿದ್ದರು. ಈ ಯೋಜನೆಯನ್ನು ಸ್ಯಾಂಡಲ್‌ವುಡ್ ಪವರ್‌ ಸ್ಟಾರ್ ದಿ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಜಾರಿ ಮಾಡಲಾಗುತ್ತಿದೆ. ಹೀಗಾಗಿ ಯೋಜನೆಗೆ ಅವರ ಹೆಸರನ್ನೇ ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ’ ಎಂದು ಇಡಲು ಸರ್ಕಾರ ನಿರ್ಧರಿಸಿದೆ.
  • ಲಕ್ಷಾಂತರ ಸಂಖ್ಯೆಯಲ್ಲಿರುವ ನೀರಾವರಿ ಪಂಪ್ ಸೆಟ್ ಗಳನ್ನು ಸೌರಶಕ್ತಿ ಚಾಲಿತ ಪಂಪ್ ಸೆಟ್ ಗಳನ್ನಾಗಿ ಪರಿವರ್ತಿಸುವ ಯೋಜನೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿದೆ. ಪಂಪ್ ಸೆಟ್ ಗಳಿಗೆ ನೀಡಲಾಗುವ ವಿದ್ಯುತ್ ಸಬ್ಸಿಡಿಯ ಹೊರೆಯನ್ನು ತಗ್ಗಿಸಲು ಈ ಯೋಜನೆ ಸಹಕಾರಿಯಾಗಲಿದೆ. ಇದಕ್ಕಾಗಿ ಕಂದಾಯ ಭೂಮಿಗಳನ್ನು ಪ್ರತಿ ಎಕರೆಗೆ 1 ರೂಪಾಯಿಯಂತೆ ಗುತ್ತಿಗೆ ಆಧಾರದ ಮೇಲೆ ಹಾಗೂ ಮಾರುಕಟ್ಟೆ ಬೆಲೆಯಲ್ಲಿ ಖಾಸಗಿ ಭೂಮಿಯನ್ನು ಪಡೆಯಲು ಸರ್ಕಾರ ಮುಂದಾಗಿದೆ. ಸೌರ ವಿದ್ಯುತ್ ಉತ್ಪಾದನೆಯನ್ನು ವಿಕೇಂದ್ರೀಕರಿಸುವುದು ಮತ್ತು ಉಷ್ಣ ಸ್ಥಾವರಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ಮೂಲಕ ಒಟ್ಟಾರೆ ವಿದ್ಯುತ್ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಯೋಜನೆಯ ಎರಡನೇ ಗುರಿಯಾಗಿದೆ. ಈ ಪ್ರಯತ್ನದ ಭಾಗವಾಗಿ ಪಾವಗಡ ಸೋಲಾರ್ ಪಾರ್ಕ್‌ನತ್ತ ಗಮನ ಹರಿಸಲಾಗುತ್ತದೆ. ರೈತರಿಗೆ ಅರಿವು ಮೂಡಿಸಲು ಮತ್ತು ಸ್ವತಂತ್ರ ಸೋಲಾರ್ ಐಪಿ ಸೆಟ್‌ಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲು ಇಲಾಖೆಯು ಮೊದಲ ಬಾರಿಗೆ ಕಾರ್ಯಾಗಾರವನ್ನು ಸಹ ಆಯೋಜಿಸುತ್ತಿದೆ.
  • ಬೆಂಗಳೂರಿನ ವಿಜ್ಞಾನಿಗಳು ಹೆಚ್ಚಿನ ದಕ್ಷತೆ ಮತ್ತು ಅಧಿಕ ಶಕ್ತಿಯ ‘ಹೀಟ್ ಎಂಜಿನ್’ (ಮೈಕ್ರೋ ಎಂಜಿನ್) ಅಭಿವೃದ್ಧಿಪಡಿಸುವ ಮೂಲಕ, ಕಾರುಗಳು ಮತ್ತು ವಿಮಾನಗಳಿಂದ ಹಿಡಿದು ಅಣು ರಿಯಾಕ್ಟರ್ಗಳವರೆಗೆ ಎಲ್ಲ ರೀತಿಯ ಎಂಜಿನ್ಗಳಿಗೆ ಸಂಬಂಧಿಸಿ ಎರಡು ಶತಮಾನಗಳಿಗೂ ಹೆಚ್ಚಿನ ಸಮಯದಿಂದ ಸವಾಲಾಗಿಯೇ ಉಳಿದಿದ್ದ ಕಾರ್ನಾಟ್ ಉಷ್ಣ ಎಂಜಿನ್ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ನೆಹರೂ ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್‌ನ ಸಂಶೋಧಕರು, ಈ ಹೊಸ ಎಂಜಿನ್ ವಿನ್ಯಾಸಗೊಳಿಸಿ ಮಹತ್ವದ ಸಾಧನೆಮಾಡಿದ್ದಾರೆ. ‘ಆಟೋ ಮೊಬೈಲ್ಗಳಲ್ಲಿ ಬಳಸುವಂತಹ ಅಧಿಕ ಶಕ್ತಿ– ದಕ್ಷತೆಯ ಎಂಜಿನ್ಗಳಲ್ಲಿ ಈ ಪ್ರಯೋಗದ ಫಲಿತಾಂಶವು ತಕ್ಷಣಕ್ಕೆ ಹೆಚ್ಚು ಅನ್ವಯ ಹೊಂದಿರದಿದ್ದರೂ, ಇದು ಭವಿಷ್ಯದಲ್ಲಿ ಎಂಜಿನ್ಗಳ ಕಾರ್ಯಕ್ಷಮತೆಯ ವೃದ್ಧಿ ವಿಷಯದಲ್ಲಿ ನಡೆಯುವ ಸಂಶೋಧನೆಗೆ ಅನುಕೂಲವಾಗಲಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಯಂತ್ರಗಳಲ್ಲಿ ಈ ತಂತ್ರಜ್ಞಾನವು ಹೆಚ್ಚು ಅನ್ವಯವಾಗುವ ನಿರೀಕ್ಷೆ ಇದೆ.
  • ಅಮೃತ ಕಲಶ ಯಾತ್ರೆ ವಿಶೇಷ ರೈಲಿಗೆ ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ಚಾಲನೆ ನೀಡಿದರು. ನವದೆಹಲಿಯಲ್ಲಿ ನಡೆದ ‘ಮೇರಿ ಮಾಟಿ ಮೇರಾ ದೇಶ್’ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅನುಕೂಲವಾಗುವಂತೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು.  ದೇಶಕ್ಕಾಗಿ ತ್ಯಾಗ ಮಾಡಿದ ಜನರಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಲಾಗಿತ್ತು. ರಾಷ್ಟ್ರದ ರಾಜಧಾನಿಯಲ್ಲಿ ನಿರ್ಮಿಸಲಾಗುತ್ತಿರುವ ಅಮೃತ ವಾಟಿಕಾದಲ್ಲಿಈ ಮಣ್ಣು ಬಳಕೆಯಾಗಲಿದೆ. ಅಜಾದಿ ಕಾ ಅಮೃತ್ ಮಹೋತ್ಸವದ ಸ್ಮಾರಕದೊಂದಿಗೆ ಅಮೃತ್ ವಾಟಿಕಾವು ಇರಲಿದೆ.
  • ಅಮೇರಿಕಾ ಬಾಹ್ಯಾಕಾಶ ಸಂಸ್ಥೆ ಮತ್ತು – ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ನಡುವಿನ ಜಂಟಿ ಭೂ-ವೀಕ್ಷಣಾ ಉಪಗ್ರಹವಾಗಿದ್ದು, ಇದು 2024 ರ ಆರಂಭದಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ಈ ಯೋಜನೆಯ ಮೂಲಕ ಇದೇ ಮೊದಲ ಬಾರಿಗೆ ನಾಸಾ ಹಾಗೂ ಇಸ್ರೋ ಸಮ ಪ್ರಮಾಣದ ಸಹಯೋಗ ಹೊಂದಿವೆ.
  • ದೇಶದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ನೇಮಿಸಿಕೊಂಡಿದೆ. ಒಂದು ರಾಷ್ಟ್ರ, ಒಂದು ಗುರುತು ಪತ್ರ’ SBIನ ಬ್ರಾಂಡ್ ಅಂಬಾಸಿಡರ್ ಆಗಿ ಧೋನಿ ವಿವಿಧ ಮಾರ್ಕೆಟಿಂಗ್ ಮತ್ತು ಪ್ರಚಾರ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳುವ, ಸ್ಪಷ್ಟ ಆಲೋಚನೆ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವ ಅವರ ಸಾಮರ್ಥ್ಯ ದೇಶಾದ್ಯಂತ SBIನ ಗ್ರಾಹಕರು ಮತ್ತು ಪಾಲುದಾರರೊಂದಿಗೆ ಸಂಪರ್ಕ ಸಾಧಿಸಲು ಸೂಕ್ತ ಆಯ್ಕೆಯಾಗಿದೆ. ಇದು ವಿಶ್ವಾಸಾರ್ಹತೆ ಮತ್ತು ನಾಯಕತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ, ತನ್ನ ಗ್ರಾಹಕರೊಂದಿಗೆ ಆಳವಾದ ಸಂಪರ್ಕಗಳನ್ನು ಬೆಸೆಯುವ ಬ್ಯಾಂಕಿನ ಬದ್ಧತೆಯ ಸಂಕೇತವಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
  • ಉಕ್ಕಿನ ಮನುಷ್ಯ’ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನ ಅಕ್ಟೋಬರ್ 31ರಂದು ‘ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಪ್ರತಿ ವರ್ಷವು ಆಚರಣೆ ಮಾಡಲಾಗುತ್ತದೆ. ಸರ್ದಾರ್ ವಲ್ಲಭಭಾಯಿ ಪಟೇಲ ಅವರು 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು (ಭಾರತದ ಒಕ್ಕೂಟಕ್ಕೆ ಸಂಯೋಜಿಸಿರುವ ಸಾಧನೆಯನ್ನು ಗೌರವಿಸಲು ಅವರ ಜನ್ಮ ದಿನವನ್ನು ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸಲಾಗುತ್ತದೆ. ಇವರ ಪ್ರಯತ್ನದಿಂದ ಭಾರತ ಸ್ವಾತಂತ್ರ್ಯ ಪಡೆದ ನಂತರ ಒಂದು ದೇಶವನ್ನು ಸಣ್ಣ ಸಣ್ಣ ರಾಷ್ಟ್ರಗಳಾಗಿ ವಿಭಜಿಸುವುದನ್ನು ತಡೆಯಿತು. ಪಟೇಲ ಅವರ ಗೌರವಾರ್ತ, 2018 ರಲ್ಲಿ ಗುಜರಾತ್‌ನಲ್ಲಿ ನರ್ಮದಾ ಅಣೆಕಟ್ಟಿಗೆ ಅಭಿಮುಖವಾಗಿ ಏಕತೆಯ ಪ್ರತಿಮೆಯನ್ನು ನಿರ್ಮಿಸಲಾಯಿತು. 597 ಅಡಿ ಎತ್ತರವಿರುವ ಇದು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. 1928 ರಲ್ಲಿ ಗುಜರಾತ ಬಾರ್ಡೋಲಿ ಸತ್ಯಾಗ್ರಹದಲ್ಲಿ, ಅವರಿಗೆ ಸರ್ದಾರ್ ಎಂಬ ಬಿರುದನ್ನು ನೀಡಲಾಯಿತು, ಇದರರ್ಥ ಗುಜರಾತಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಮುಖ್ಯಸ್ಥ ಅಥವಾ ನಾಯಕ.