Published on: July 28, 2023

ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ಸಂರಕ್ಷಣಾ ಅಂತರರಾಷ್ಟ್ರೀಯ ದಿನ

ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ಸಂರಕ್ಷಣಾ ಅಂತರರಾಷ್ಟ್ರೀಯ ದಿನ

ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಜುಲೈ 26 ರಂದು ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ಸಂರಕ್ಷಣಾ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.

ಉದ್ದೇಶ

  • ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ‘ವಿಶಿಷ್ಟ ಮತ್ತು ವಿಶೇಷ ಆದರೆ ದುರ್ಬಲ ಪರಿಸರ ವ್ಯವಸ್ಥೆ‘ ಎಂದು ಅರಿವು ಮೂಡಿಸಲು ಮತ್ತು ಅವುಗಳ ಸಮರ್ಪಕ ನಿರ್ವಹಣೆ, ಸಂರಕ್ಷಣೆ ಮತ್ತು ಪರಿಹಾರಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ದಿನಾಚರಣೆ ಇತಿಹಾಸ

  • 1998ರಲ್ಲಿ ಇದೇ ದಿನದಂದು, ಹೇ ಹೌಡೇನಿಯಲ್ ನ್ಯಾನೊಟೊ ಎಂಬ ಗ್ರೀನ್ಪೀಸ್ ಸಂಸ್ಥೆಯ ಕಾರ್ಯಕರ್ತ ಈಕ್ವೆಡಾರ್ನ ಮುಯಿಸ್ನೆಯಲ್ಲಿ ಮ್ಯಾಂಗ್ರೋವ್ ಜೌಗು ಪ್ರದೇಶಗಳ ಸಂರಕ್ಷಣಾ ಪ್ರದರ್ಶನದಲ್ಲಿ ಭಾಗವಹಿಸಿದ್ದಾಗ ಹೃದಯಾಘಾತದಿಂದ ನಿಧನರಾದರು. ಈ ಹಿನ್ನೆಲೆಯಲ್ಲಿ ಆ ಕಾರ್ಯಕರ್ತನ ಸ್ಮರಣೆಗಾಗಿ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ(UNESCO) ಸಾಮಾನ್ಯ ಸಮ್ಮೇಳನ 2015ರಲ್ಲಿ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯ ಸಂರಕ್ಷಣಾ ಅಂತರರಾಷ್ಟ್ರೀಯ ದಿನವನ್ನು ಆಚರಿಸಲು ಘೋಷಿಸಿತು.

ಮ್ಯಾಂಗ್ರೋವ್ ಕಾಡುಗಳು

  • ‘ಮ್ಯಾಂಗ್ರೋವ್‘ ಎಂಬುದು ಪೋರ್ಚುಗೀಸ್ ಪದ ‘ಮ್ಯಾಂಗ್ಯೂ‘ ಮತ್ತು ಇಂಗ್ಲಿಷ್ ಪದ ‘ಗ್ರೋವ್‘ನ ಸಂಯೋಜನೆಯಾಗಿದೆ. ಮ್ಯಾಂಗ್ರೋವ್ಗಳು ಪ್ರಪಂಚದ ಉಷ್ಣವಲಯದ ಮತ್ತು ಉಪೋಷ್ಣವಲಯದ ಮಧ್ಯಂತರ ಪ್ರದೇಶಗಳ ಲವಣ ಸಹಿಷ್ಣು ಸಸ್ಯಗಳಾಗಿವೆ. ಲವಣ ಸಹಿಷ್ಣು ಸಸ್ಯಗಳನ್ನು ಹಾಲೋಫೈಟ್ಸ್ ಎನ್ನುತ್ತಾರೆ. ಕಡಲ ತೀರದಲ್ಲಿ ಕಠಿಣ ಸ್ಥಿತಿಗಳಲ್ಲಿಯೂ ಬದುಕಬಲ್ಲ, ಲವಣದ ಅಂಶ ಹೆಚ್ಚಿದ್ದರೂ ಸಹಿಸಿಕೊಳ್ಳಬಲ್ಲ, ಒಟ್ಟಾಗಿ ದಟ್ಟವಾಗಿ ಬೆಳೆಯುವ ವಿಶೇಷ ರೀತಿಯ ಕಾಡುಗಳಿಗೆ ಮ್ಯಾಂಗ್ರೋವ್ ಕಾಡು ಎಂದು ಕರೆಯುತ್ತಾರೆ.
  • ಎರಡೂವರೆ ಕೋಟಿ ವರ್ಷಗಳ ಹಿಂದೆ ಮ್ಯಾಂಗ್ರೋವ್ ಕಾಡುಗಳ ಮೊದಲ ಪಳೆಯುಳಿಕೆ ಸಿಕ್ಕಿತ್ತು ಎಂದು ದಾಖಲಿಸಲಾಗಿದೆ. ಈ ಸಸ್ಯಗಳು ಕಂಡುಬರುವ ನಿರ್ದಿಷ್ಟ ಪ್ರದೇಶಗಳನ್ನು ‘ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ’ ಎಂದು ಕರೆಯಲಾಗುತ್ತದೆ.
  • ಇವು ಹೆಚ್ಚು ಉತ್ಪಾದಕ ಪರಿಸರ ವ್ಯವಸ್ಥೆಗಳಾಗಿದ್ದರೂ ಅತ್ಯಂತ ಸೂಕ್ಷ್ಮ ಮತ್ತು ದುರ್ಬಲವಾಗಿರುತ್ತವೆ. ಮ್ಯಾಂಗ್ರೋವ್ ಸಸ್ಯಗಳಲ್ಲದೆ, ಈ ಪರಿಸರ ವ್ಯವಸ್ಥೆಯು ಇತರ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೂ ಆಶ್ರಯ ನೀಡುತ್ತದೆ. ಇಲ್ಲಿನ ಮರಗಳು ಸಂಕೀರ್ಣ ಬೇರುಗಳನ್ನು ಹೊಂದಿವೆ. ಹೆಚ್ಚಿನ ತೇವಾಂಶವಿದ್ದು, ಲವಣದ ಅಂಶ ಹೆಚ್ಚಿರುವ ಮಣ್ಣಿನಲ್ಲಿ ಬದುಕುವ ಸಾಮರ್ಥ್ಯ ಹೊಂದಿರುತ್ತವೆ.
  • ಮ್ಯಾಂಗ್ರೋವ್ ಕಾಡುಗಳು ಬಹುತೇಕ ನೀರಿನಲ್ಲಿ ಮುಳುಗಿರುವುದರಿಂದ, ಅವುಗಳ ಆವಾಸಸ್ಥಾನದಲ್ಲಿ ಆಮ್ಲಜನಕದ ಅಂಶ ಕಡಿಮೆಯಿರುತ್ತದೆ. ಹಾಗಾಗಿ ಹೊರಚಾಚಿದ ಬೇರುಗಳಿಂದಲೇ ಬದುಕಲು ಬೇಕಾಗುವ ಅನಿಲಗಳನ್ನು ಹೀರಿಕೊಳ್ಳುತ್ತವೆ. ಆ ಅನಿಲಗಳನ್ನು ಬೇರುಗಳಲ್ಲೇ ಹಿಡಿದಿಟ್ಟುಕೊಳ್ಳುವ ಈ ಮರಗಳು, ಪ್ರವಾಹದ ಸಮಯದಲ್ಲಿ ಮತ್ತೆ ಬಳಸಿಕೊಳ್ಳುತ್ತವೆ.

ಮ್ಯಾಂಗ್ರೋವ್ ಗಳ ಪ್ರಾಮುಖ್ಯತೆ

  • ಮ್ಯಾಂಗ್ರೋವ್ ಗಳ ಭೂಮಿ ಮತ್ತು ಸಮುದ್ರದ ನಡುವಿನ ಗಡಿಯಲ್ಲಿರುವ ಅಪರೂಪದ, ಅದ್ಭುತ ಮತ್ತು ಸಮೃದ್ಧ ಪರಿಸರ ವ್ಯವಸ್ಥೆಗಳಾಗಿವೆ. ಈ ಪರಿಸರ ವ್ಯವಸ್ಥೆಗಳು ವಿಶ್ವದಾದ್ಯಂತ ಕರಾವಳಿ ಸಮುದಾಯಗಳ ಯೋಗಕ್ಷೇಮ, ಆಹಾರ ಭದ್ರತೆ ಮತ್ತು ರಕ್ಷಣೆಗೆ ಕೊಡುಗೆ ನೀಡುತ್ತವೆ.
  • ಸಮೃದ್ಧ ಜೀವವೈವಿಧ್ಯವನ್ನು ಬೆಂಬಲಿಸುತ್ತವೆ. ಮೀನು ಮತ್ತಿತರ ಜಲಚರಗಳಿಗೆ ಮತ್ತು ಇತರ ಪ್ರಾಣಿ ಪಕ್ಷಿಗಳಿಗೆ ಅಮೂಲ್ಯವಾದ ಆವಾಸಸ್ಥಾನವನ್ನು ಒದಗಿಸುತ್ತವೆ.
  • ಮ್ಯಾಂಗ್ರೋವ್ಗಳು ಚಂಡಮಾರುತ, ಸುನಾಮಿಗಳು, ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ಕಡಲ ಸವೆತದ ವಿರುದ್ಧ ನೈಸರ್ಗಿಕ ರಕ್ಷಣೆಯಂತೆ ಕಾರ್ಯನಿರ್ವಹಿಸುತ್ತವೆ.
  • ಅವುಗಳ ಮಣ್ಣು ಹೆಚ್ಚು ಪರಿಣಾಮಕಾರಿಯಾದ ಇಂಗಾಲದ ಸಿಂಕ್ಗಳಾಗಿ ಕಾರ್ಯನಿರ್ವಹಿಸುತ್ತವೆ.
  • ಕಾಡುಗಳಿಗೆ ಹೋಲಿಸಿದರೆ ಇಲ್ಲಿನ ಗಿಡಗಳು 10 ಪಟ್ಟು ಹೆಚ್ಚು ಇಂಗಾಲವನ್ನು ಸಂಗ್ರಹಿಸಿಡಬಲ್ಲವು. ಕಾಂಡ್ಲಾ ಅಥವಾ ಮ್ಯಾಂಗ್ರೋವ್ ಕಾಡುಗಳು ಕಣ್ಮರೆಯಾಗುವುದರಿಂದ ಗಂಭೀರ ಪಾರಿಸರಿಕ ಮತ್ತು ಸಾಮಾಜಿಕ-ಆರ್ಥಿಕ ಪರಿಣಾಮಗಳು ಉಂಟಾಗುತ್ತದೆ.
  • ಮ್ಯಾಂಗ್ರೋವ್ಗಳು ಭೂಮಿ ಮತ್ತು ಸಮುದ್ರದ ನಡುವಿನ ಗಡಿಯಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಅನೇಕ ಕರಾವಳಿ ಸಮುದಾಯಗಳಿಗೆ ರಕ್ಷಣೆ ಮತ್ತು ಆಹಾರ ಭದ್ರತೆಯನ್ನು ಒದಗಿಸುತ್ತವೆ.
  • ಮಳೆನೀರಿನೊಂದಿಗೆ ಮಾಲಿನ್ಯಕಾರಕ ಅಂಶಗಳು ಸಮುದ್ರ ಸೇರುವ ಮುನ್ನವೇ, ಈ ಕಾಂಡ್ಲಾ ಕಾಡುಗಳು ಅವುಗಳನ್ನು ತೆಗೆದು ಹಾಕುವ ಮೂಲಕ ನೀರಿನ ಗುಣಮಟ್ಟವನ್ನು ರಕ್ಷಿಸುತ್ತವೆ.

 ಭಾರತದಲ್ಲಿ ಮ್ಯಾಂಗ್ರೋವ್ಗಳು

  • ದಕ್ಷಿಣ ಏಷ್ಯಾದ ಒಟ್ಟು ಮ್ಯಾಂಗ್ರೋವ್ ಹೊದಿಕೆಯ ಅರ್ಧದಷ್ಟು ಭಾಗಕ್ಕೆ ಭಾರತ ಕೊಡುಗೆ ನೀಡುತ್ತದೆ .
  • ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್, 2021 ರ ಪ್ರಕಾರ, ಭಾರತದಲ್ಲಿ ಮ್ಯಾಂಗ್ರೋವ್ ವ್ಯಾಪ್ತಿ 4,992 ಚದರ ಕಿ.ಮೀ ಆಗಿದೆ, ಇದು ದೇಶದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾ 0.15 ಆಗಿದೆ.2019 ರ ಮೌಲ್ಯಮಾಪನಕ್ಕೆ ಹೋಲಿಸಿದರೆ ಮ್ಯಾಂಗ್ರೋವ್ ಹೊದಿಕೆಯಲ್ಲಿ 17 ಚದರ ಕಿಮೀ ಹೆಚ್ಚಳವಾಗಿದೆ.
  • ಮ್ಯಾಂಗ್ರೋವ್ ಹೊದಿಕೆಯಲ್ಲಿ ಹೆಚ್ಚಳವಾಗಿರುವ ಮೂರು ಅಗ್ರ ರಾಜ್ಯಗಳೆಂದರೆ ಒಡಿಶಾ (8 ಚದರ ಕಿಮೀ ) ನಂತರ ಮಹಾರಾಷ್ಟ್ರ (4 ಚದರ ಕಿಮೀ ) ಮತ್ತು ಕರ್ನಾಟಕ (3 ಚದರ ಕಿಮೀ ).
  • ಪಶ್ಚಿಮ ಬಂಗಾಳವು ಭಾರತದಲ್ಲಿ ಅತಿ ಹೆಚ್ಚು ಶೇಕಡಾವಾರು ಮ್ಯಾಂಗ್ರೋವ್ ಹೊದಿಕೆಯನ್ನು ಹೊಂದಿದೆ , ಮುಖ್ಯವಾಗಿ ಇದು ಸುಂದರಬನ್ಸ್ ಅನ್ನು ಹೊಂದಿದೆ , ಇದು ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯವಾಗಿದೆ. ತಮಿಳುನಾಡಿನ ಪಿಚಾವರಂ ಮ್ಯಾಂಗ್ರೋವ್ ಅರಣ್ಯವು ವಿಶ್ವದ ಎರಡನೇ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯವಾಗಿದೆ. ಗುಜರಾತ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ, ಗೋವಾ ಮತ್ತು ಕೇರಳಗಳು ಮ್ಯಾಂಗ್ರೋವ್ ಹೊದಿಕೆಯನ್ನು ಹೊಂದಿರುವ ಇತರ ರಾಜ್ಯಗಳು.